ADVERTISEMENT

ಮಡಿಕೇರಿ | ರಾಹುಲ್ ಗಾಂಧಿ ವಿರುದ್ಧ ಪ್ರತಿಭಟನೆ

ಬಿಜೆಪಿ ಎಸ್.ಸಿ ಮೋರ್ಚಾದಿಂದ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2024, 6:24 IST
Last Updated 14 ಸೆಪ್ಟೆಂಬರ್ 2024, 6:24 IST
ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು
ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಮುಖಂಡರು ಮತ್ತು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು   

ಮಡಿಕೇರಿ: ‘ರಾಹುಲ್ ಗಾಂಧಿ ಅವರ ಲೋಕಸಭಾ ಸದಸ್ಯತ್ವ ರದ್ದುಪಡಿಸಬೇಕು’ ಎಂದು ಆಗ್ರಹಿಸಿ ಬಿಜೆಪಿ ಎಸ್.ಸಿ ಮೋರ್ಚಾದ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.

ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ಮೋರ್ಚಾದ ಅಧ್ಯಕ್ಷ ಪಿ.ಎಂ.ರವಿ, ‘ರಾಹುಲ್ ಗಾಂಧಿ ಅವರು ವಿದೇಶದಲ್ಲಿ ಮೀಸಲಾತಿ ರದ್ದುಗೊಳಿಸುವ ಹೇಳಿಕೆ ನೀಡಿದ್ದಾರೆ. ಇದು ಸಂವಿಧಾನಕ್ಕೆ ತೋರಿದ ಅಗೌರವ’ ಎಂದು ಅವರು ಹರಿಹಾಯ್ದರು.

ADVERTISEMENT

‘ಈ ಮೂಲಕ ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಕಾಂಗ್ರೆಸ್ ಅನ್ಯಾಯ ಮಾಡಲು ಹೊರಟಿದೆ’ ಎಂದೂ ಕಿಡಿಕಾರಿದರು.

‘ಸ್ವಾತಂತ್ರ್ಯಪೂರ್ವದಿಂದ ಇಲ್ಲಿಯವರೆಗೂ ಕಾಂಗ್ರೆಸ್ ಇದೇ ರೀತಿಯಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡದವರಿಗೆ ಅನ್ಯಾಯ ಮಾಡಿದೆ’ ಎಂದು ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯ ಸುಜಾಕುಶಾಲಪ್ಪ ಮಾತನಾಡಿ, ‘ರಾಹುಲ್ ಗಾಂಧಿ ಸಂಸತ್ತಿನಲ್ಲಿ ಚರ್ಚೆ ಮಾಡದೇ, ವಿದೇಶದಲ್ಲಿ ದೇಶದ ಆಂತರಿಕ ವಿಷಯಗಳನ್ನು ಚರ್ಚೆ ನಡೆಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಚೀನಾ ಕುರಿತು ಹೊಗಳಿರುವಂತಹ ರಾಹುಲ್ ಗಾಂಧಿ ಅವರು ಕೂಡಲೇ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ‘ದೇಶದ ಆಂತರಿಕ ವಿಚಾರಗಳನ್ನು ವಿದೇಶದಲ್ಲಿ ಟೀಕಿಸುವ ಇಂತಹವರಿಗೆ ಏನೆಂದು ಹೇಳಬೇಕು’ ಎಂದು ಪ್ರಶ್ನಿಸಿದರು.

‘ವಿರೋಧ ಪಕ್ಷದ ನಾಯಕನಾಗಿ ಎಲ್ಲಿ ಏನು ಮಾತನಾಡಬೇಕು ಎಂಬುದೂ ಗೊತ್ತಿರದ ರಾಹುಲ್ ಗಾಂಧಿ ಅವರನ್ನು ಕೂಡಲೇ ಭಾರತದಿಂದಲೇ ಗಡಿಪಾರು ಮಾಡಬೇಕು’ ಎಂದೂ ಒತ್ತಾಯಿಸಿದರು.

ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪ್ರತಿಭಟನಾನಿರತರಿಂದ ಲೋಕಸಭಾ ಸ್ಪೀಕರ್ ಉದ್ದೇಶಿಸಿ ಬರೆದ ಮನವಿ ಪತ್ರ ಸ್ವೀಕರಿಸಿದರು.

ಭಾರತದ ದೇಶದ ಸಂವಿಧಾನ ಅತಿ ಶ್ರೇಷ್ಠವಾದದ್ದು. ರಾಹುಲ್ ಗಾಂಧಿ ಹೇಳಿಕೆಗಳನ್ನು ಗಮನಿಸಿದರೆ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳಿಗೆ ತಿಲಾಂಜಲಿ ಇಡುವ ಹುನ್ನಾರವನ್ನು ಕಾಂಗ್ರೆಸ್ ನಡೆಸಿದೆ ಎಂಬ ಅನುಮಾನ ಬರುತ್ತದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ತೆಗೆದು ಹಾಕುತ್ತಾರೆ ಎಂಬ ಅಪಪ್ರಚಾರವನ್ನು ಕಾಂಗ್ರೆಸ್ ಮಾಡಿತ್ತು. ಆದರೆ, ಈಗ ರಾಹುಲ್ ಗಾಂಧಿ ಅವರೇ ಮೀಸಲಾತಿ ತೆಗೆದು ಹಾಕುವಂತಹ ಅಂತಹ ಮಾತುಗಳನ್ನು ಆಡಿದ್ದಾರೆ ಎಂದು ಹೇಳಿದರು.

ಬಿಜೆಪಿ ಮುಖಂಡರಾದ ಅನಿತಾ ಪೂವಯ್ಯ, ಮಹೇಶ್ ಜೈನಿ, ಅರುಣ್ ಕುಮಾರ್, ಉಮೇಶ್‌ ಸುಬ್ರಮಣಿ, ಮನುಮಂಜುನಾಥ್ ರಾಬಿನ್ ದೇವಯ್ಯ, ಅಫ್ರು ರವೀಂದ್ರ, ಸುವಿನ್ ಗಣಪತಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.