ADVERTISEMENT

ಕೊಡಗು: ಆರೋಗ್ಯದ ಹಕ್ಕಿಗಾಗಿ ಪ್ರತಿಭಟನಾ ಜಾಥಾ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 6:19 IST
Last Updated 11 ಫೆಬ್ರುವರಿ 2026, 6:19 IST
ಸರ್ಕಾರಿ ಆಸ್ಪತ್ರೆಯನ್ನು ‘ಪಿಪಿಪಿ’ ಮೂಲಕ ಖಾಸಗೀಕರಣ ಮಾಡುವ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿ ಬೇರು ಬೆವರು ಸಾಂಸ್ಕೃತಿಕ ಬಳಗ ಹಾಗೂ ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಕಾರ್ಯಕರ್ತರು ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು 
ಸರ್ಕಾರಿ ಆಸ್ಪತ್ರೆಯನ್ನು ‘ಪಿಪಿಪಿ’ ಮೂಲಕ ಖಾಸಗೀಕರಣ ಮಾಡುವ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿ ಬೇರು ಬೆವರು ಸಾಂಸ್ಕೃತಿಕ ಬಳಗ ಹಾಗೂ ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಕಾರ್ಯಕರ್ತರು ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು    

ಮಡಿಕೇರಿ: ಸರ್ಕಾರಿ ಆಸ್ಪತ್ರೆಯನ್ನು ‘ಪಿಪಿಪಿ’ ಮೂಲಕ ಖಾಸಗೀಕರಣ ಮಾಡುವ ಯೋಜನೆ ಕೈ ಬಿಡಬೇಕು ಎಂದು ಒತ್ತಾಯಿಸಿ ಬೇರು ಬೆವರು ಸಾಂಸ್ಕೃತಿಕ ಬಳಗ ಹಾಗೂ ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಕಾರ್ಯಕರ್ತರು ಇಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.

ಗಾಂಧಿ ಮೈದಾನದಿಂದ ಪ್ರತಿಭಟನಾ ಜಾಥಾ ಹೊರಟ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಬೇರು ಬೆವರು ಸಾಂಸ್ಕೃತಿಕ ಬಳಗದ ರಾಜ್ಯ ಘಟಕದ ಸಂಚಾಲಕ ಸೋರಪಲ್ಲಿ ಚಂದ್ರಶೇಖರ್ ಮಾತನಾಡಿ, ‘ತಮಿಳುನಾಡು, ಕೇರಳ ಹಾಗೂ ರಾಜಸ್ಥಾನಗಳಲ್ಲಿ ಇರುವಂತೆಯೇ ಕರ್ನಾಟಕದಲ್ಲಿಯೂ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲರಿಗೂ ಉಚಿತ ಹಾಗು ಉತ್ತಮ ಗುಣಮಟ್ಟದ ಔಷಧಗಳು ಸಿಗುವಂತೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಈ ಮೂರೂ ರಾಜ್ಯಗಳಲ್ಲಿಯೂ ಜನರಿಗೆ ಸರ್ಕಾರಿ ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಔಷಧವನ್ನು ಹೊರಗಡೆಯಿಂದ ಖರೀದಿಸಿ ತರಲು ಚೀಟಿ ಬರೆದು ಕೊಡುವುದಿಲ್ಲ. ಬದಲು ಅಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಲ್ಲಿ ಔಷಧಗಳು ಉಚಿತವಾಗಿ ದೊರೆಯುತ್ತವೆ. ಈ ಮೂರೂ ರಾಜ್ಯಗಳ ಸರ್ಕಾರಿ ಆಸ್ಪತ್ರೆಯ ಸುತ್ತಮುತ್ತ ಯಾವುದೇ ಖಾಸಗಿ ಔಷಧ ಅಂಗಡಿಗಳನ್ನು ನಾವು ಕಾಣುವುದಿಲ್ಲ. ಆದರೆ, ಕರ್ನಾಟಕದಲ್ಲಿ ಸರ್ಕಾರಿ ಆಸ್ಪತ್ರೆಗಳ ಎದುರು ಖಾಸಗಿ ಔಷಧದ ಅಂಗಡಿಗಳ ಸಾಲುಸಾಲೇ ಇರುತ್ತವೆ. ಔಷಧ ಗುಣಮಟ್ಟವನ್ನು ಕಾಪಾಡುವ ಜವಾಬ್ದಾರಿ ರಾಜ್ಯಸರ್ಕಾರ ವಹಿಸಬೇಕು’ ಎಂದು ಮನವಿ ಮಾಡಿದರು.

‘ಬಡವರಿಗೆ, ಎಲ್ಲಾ ಕಾರ್ಮಿಕರಿಗೆ, ದಲಿತ ಸಮುದಾಯಗಳಿಗೆ, ಆದಿವಾಸಿ ಸಮುದಾಯಗಳಿಗೆ, ಸ್ಲಂನಿವಾಸಿಗಳಿಗೆ, ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಹಾಗೂ ಇತರ ಶೋಷಿತ ಸಮುದಾಯಗಳಿಗೆ ಆರೋಗ್ಯ ಎಲ್ಲಾ ಲಿಂಗ, ವರ್ಗ, ಜಾತಿಯವರ ಹಕ್ಕಾಗಬೇಕು’ ಎಂದು ಆಗ್ರಹಿಸಿದರು.

‘ಕರ್ನಾಟಕದಲ್ಲಿ ಆರೋಗ್ಯ ಹಕ್ಕಿನ ಕಾಯಿದೆಯನ್ನು ಜಾರಿಗೆ ತರಬೇಕು. ನಮಗೆ ಆರೋಗ್ಯ ರಕ್ಷಣೆಯನ್ನು ಮೂಲಭೂತ ಹಕ್ಕನ್ನಾಗಿ ಮಾಡುವ ಕಾನೂನು ಬೇಕಾಗಿದೆ, ಅದು ಯಾವುದೇ ಸರ್ಕಾರವು ಹಿಂತೆಗೆದುಕೊಳ್ಳಬಹುದಾದ ಯೋಜನೆ ಆಗಬಾರದು. ಈ ಕೂಡಲೇ ಸರ್ಕಾರಿ ಆಸ್ಪತ್ರೆ ಖಾಸಗೀಕರಣ (ಪಿಪಿಪಿ) ಮಾಡುವ ಯೋಜನೆ ಕೈ ಬಿಡಬೇಕು. ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆ ಖಾಸಗಿಯವರಿಗೆ ಹಸ್ತಾಂತರ ಮಾಡಬಾರದು. ಇದರ ಬದಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಗೊಳಿಸಬೇಕು’ ಎಂದು ಮನವಿ ಮಾಡಿದರು.

ಜೊತೆಗೆ, ಖಾಸಗಿ ವಲಯದಲ್ಲಿ ಆಸ್ಪತ್ರೆಗಳ ಶುಲ್ಕವನ್ನು ನಿಯಂತ್ರಿಸಬೇಕು ಎಂದೂ ಒತ್ತಾಯಿಸಿದರು.

ಬುಡಕಟ್ಟು ಕಾರ್ಮಿಕರ ಸಂಘದ ವೈ.ಬಿ.ಗಪ್ಪು, ಮುಖಂಡರಾದ ಭ‌ವ್ಯಾ, ಗೊಟ್ಟ, ಗೀತಾ, ಗಂಗೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.