ADVERTISEMENT

ಸೋಮವಾರಪೇಟೆಯಲ್ಲಿ ಸ್ವಚ್ಛತೆಯೇ ಮರೀಚಿಕೆ

ರೋಗ ಹರಡುವ ಆತಂಕ: ಚರಂಡಿ ಶುಚಿಗೊಳಿಸಲು ಸಾರ್ವಜನಿಕರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 6:10 IST
Last Updated 20 ಫೆಬ್ರುವರಿ 2024, 6:10 IST
ಸೋಮವಾರಪೇಟೆ ಮಹಿಳಾ ಸಮಾಜದ ರಸ್ತೆಯ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುತ್ತಿದ್ದು, ಅದು ಚರಂಡಿಗೆ ಬೀಳುತ್ತಿದೆ
ಸೋಮವಾರಪೇಟೆ ಮಹಿಳಾ ಸಮಾಜದ ರಸ್ತೆಯ ಬದಿಯಲ್ಲಿ ತ್ಯಾಜ್ಯವನ್ನು ಎಸೆಯುತ್ತಿದ್ದು, ಅದು ಚರಂಡಿಗೆ ಬೀಳುತ್ತಿದೆ   

ಸೋಮವಾರಪೇಟೆ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹೆಚ್ಚಿನ ಚರಂಡಿಗಳನ್ನು ನಿರ್ವಹಣೆ ಮಾಡದೇ ಇರುವುದರಿಂದ ಸಮಸ್ಯೆ ಬಿಗಡಾಯಿಸುತ್ತಿದೆ. ಕನಿಷ್ಠ ರಸ್ತೆಯನ್ನೂ ಸ್ವಚ್ಛಗೊಳಿಸುತ್ತಿಲ್ಲ. ಮನೆ ಬಾಗಿಲಿಗೆ ಬಂದು ತ್ಯಾಜ್ಯ ಸಂಗ್ರಹ ಮಾಡುತ್ತಿಲ್ಲ.

ಕೆಲವು ಬಡಾವಣೆಗಳಲ್ಲಿ ಪೌರಕಾರ್ಮಿಕರನ್ನು ಕಂಡು ಹಲವು ತಿಂಗಳಾಗಿವೆ. ಚರಂಡಿಯಲ್ಲಿನ ಗಿಡಗಳು ಬೆಳೆದು ಅಲ್ಲಿಯೇ ಫಸಲು ಬಿಡುತ್ತಿದೆ. ಆದರೂ, ಇದರತ್ತ ಪಂಚಾಯಿತಿ ಸದಸ್ಯರಾಗಲಿ, ಆಡಳಿತಾಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಈಗಾಗಲೇ ಬಿಸಿಲಿನ ಝಳ ಹೆಚ್ಚಾಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆ ಹಬ್ಬಲು ಕಾರಣವಾಗುತ್ತಿದೆ. ಆದರೆ, ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ಸಾಂಕ್ರಾಮಿಕ ಕಾಯಿಲೆ ಹಬ್ಬುವ ಭಯ ಜನರನ್ನು ಕಾಡುತ್ತಿದೆ.

ADVERTISEMENT

ಕಳೆದ ವರ್ಷ ಮೇ ತಿಂಗಳಿನಲ್ಲಿ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಡಳಿತಾಧಿಕಾರ ಕೊನೆಗೊಂಡಿತು. ನಂತರ, ಸರ್ಕಾರ ಮೀಸಲಾತಿ ಪ್ರಕಟಿಸದ ಕಾರಣ, ಇಂದಿಗೂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ನಡೆದಿಲ್ಲ. ಇದು ಪಂಚಾಯಿತಿ ಅವ್ಯವಸ್ಥೆಗೆ ಮತ್ತೊಂದು ಕಾರಣವಾಗಿದೆ. ಇಲ್ಲಿ ಯಾರೂ ಹೇಳುವುದಕ್ಕೂ ಕೇಳುವುದಕ್ಕೂ ಇಲ್ಲದ ಕಾರಣ. ಪಂಚಾಯಿತಿ ಆಡಳಿತ ನೆಲಕಚ್ಚಿದ್ದು, ಎಲ್ಲಿ ನೋಡಿದರೂ, ತ್ಯಾಜ್ಯದ ರಾಶಿ ಕಾಣಬಹುದು. ಕೆಲವೆಡೆಗಳಲ್ಲಿ ತ್ಯಾಜ್ಯಕ್ಕೆ ಪೌರಕಾರ್ಮಿಕರೇ ಬೆಂಕಿ ಹಾಕಿ ಸುಡುತ್ತಿದ್ದಾರೆ ಎಂಬುದು ಹಲವರ ದೂರಾಗಿದೆ.

ಸೋಮವಾರಪೇಟೆ ಶಿವಾಜಿ ರಸ್ತೆಯ ಕುಡಿಯುವ ನೀರು ಸರಬರಾಜು ಮಾಡುವ ನಲ್ಲಿಯ ಬಳಿಯಲ್ಲಿ ಚರಂಡಿಯಲ್ಲಿ ತ್ಯಾಜ್ಯ ತುಂಬಿಕೊಂಡು ಅಲ್ಲಿಯೇ ಗಿಡಗಂಟಿಗಳು ಬೆಳೆದಿರುವುದು

‘ಮನೆಗಳ ಎದುರು ತ್ಯಾಜ್ಯ ಸಂಗ್ರಹ ಮಾಡುವ ವಾಹನಗಳು ಕಾಣದೆ, ಒಂದೆರಡು ತಿಂಗಳಾಯಿತು. ನಮಗೆ ತ್ಯಾಜ್ಯ ವಿಲೇವಾರಿಗೆ ಬೇರೆ ಮಾರ್ಗವಿಲ್ಲ. ಸಿಕ್ಕಲ್ಲಿ ತ್ಯಾಜ್ಯವನ್ನು ಎಸೆಯಬೇಕಿದೆ’ ಎಂದು ಮಹಿಳೆಯರು ದೂರುತ್ತಾರೆ. ಕನಿಷ್ಠ ವಾರಕ್ಕೆ ಎರಡು ದಿನಗಳಾದರೂ, ತ್ಯಾಜ್ಯ ಸಂಗ್ರಹಿಸಲು ಬಂದಲ್ಲಿ ನಮಗೆ ಅನುಕೂಲವಾಗುವುದು ಎಂದು ತಿಳಿಸುತ್ತಾರೆ.

‘ಚರಂಡಿಗಳಲ್ಲಿ ತ್ಯಾಜ್ಯ ಸಂಗ್ರಹವಾಗುತ್ತಿದ್ದು, ನೀರು ನಿಲ್ಲುತ್ತಿದೆ. ಬಿಸಿಲಿಗೆ ಅದು ವಾಸನೆ ಬರುತ್ತಿದ್ದು, ಸಾಂಕ್ರಾಮಿಕ ಕಾಯಿಲೆ ಆರಂಭವಾಗಲು ಅವಕಾಶ ಮಾಡಿಕೊಟ್ಟಂತಾಗುತ್ತಿದೆ. ಮೊದಲೇ ನೀರಿನ ಬರ ಎದುರಿಸುತ್ತಿರುವ ಜನರಿಗೆ ಸಾಂಕ್ರಾಮಿಕ ಕಾಯಿಲೆ ಶಾಪವಾಗಬಾರದು. ತಕ್ಷಣ ಎಲ್ಲ ಚರಂಡಿಗಳನ್ನು ಕನಿಷ್ಠ ವಾರಕ್ಕೆ ಒಮ್ಮೆಯಾದರೂ ಸ್ವಚ್ಛಗೊಳಿಸಬೇಕು’ ಎಂದು ಸ್ಥಳೀಯ ನಿವಾಸಿ ಪಿ.ಮಧು ಹೇಳಿದರು.

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಮಾರುಕಟ್ಟೆಯಲ್ಲಿ ಸೋಮವಾರ ಜನರು ತ್ಯಾಜ್ಯಕ್ಕೆ ಬೆಂಕಿ ಹಾಕಿರುವುದು

‘ಜನರು ಎಲ್ಲಿಂದಲೋ ತ್ಯಾಜ್ಯವನ್ನು ಪ್ಲಾಸ್ಟಿಕ್‌ಗೆ ತುಂಬಿ ನಮ್ಮ ಮನೆಯ ಖಾಲಿ ನಿವೇಶನಗಳಲ್ಲಿ ತಂದು ಎಸೆಯುತ್ತಿದ್ದಾರೆ. ಚರಂಡಿ ಪಕ್ಕದಲ್ಲಿನ ಮಣ್ಣು ಚರಂಡಿಗೆ ತುಂಬುತ್ತಿದೆ. ರಾತ್ರಿ ದೀಪದ ಬೆಳಕು ಇಲ್ಲದ ಸ್ಥಳದಲ್ಲಿ ಮದ್ಯಪಾನ ಮಾಡಿ ಅಲ್ಲಿಯೇ ಖಾಲಿ ಸೀಸೆ ಮತ್ತು ತಿಂಡಿಯ ಪ್ಲಾಸ್ಟಿಕ್ ಮತ್ತು ಪೇಪರ್‌ನ್ನು ಎಸೆದು ಹೋಗುತ್ತಿದ್ದಾರೆ. ಕೆಲವೆಡೆ ಬಾಟಲಿಗಳನ್ನು ಒಡೆದು ಹಾಕುತ್ತಿದ್ದಾರೆ. ಮೊದಲು ಇದಕ್ಕೆ ಪಂಚಾಯಿತಿ ಕಡಿವಾಣ ಹಾಕಬೇಕಿದೆ’ ಎಂದು ಸುಶೀಲಾ ಮನವಿ ಮಾಡಿದರು.

‘ಈಗಾಗಲೇ ಚರಂಡಿಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದೇವೆ. ಎಲ್ಲ ಚರಂಡಿಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ತೆಗೆಯಲಾಗುವುದು. ಪೌರಕಾರ್ಮಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಎಲ್ಲೆಡೆ ಸ್ವಚ್ಛವಾಗಿ ಇಟ್ಟುಕೊಳ್ಳಲು ಮತ್ತು ತ್ಯಾಜ್ಯ ಸಂಗ್ರಹಕ್ಕೆ ವಾಹನ ಕಳಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.