ADVERTISEMENT

ದ್ವಿತೀಯ ಪಿಯುಸಿ ಪರೀಕ್ಷೆ: ಕೊಡಗು ಜಿಲ್ಲೆಯಲ್ಲಿ 16 ಪರೀಕ್ಷಾ ಕೇಂದ್ರ

ಮಾರ್ಚ್‌ 4ರಿಂದ ದ್ವಿತೀಯ ಪಿಯುಸಿ ಪರೀಕ್ಷೆ: ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2020, 20:15 IST
Last Updated 20 ಫೆಬ್ರುವರಿ 2020, 20:15 IST
ಅನೀಸ್‌ ಕಣ್ಮಣಿ ಜಾಯ್‌
ಅನೀಸ್‌ ಕಣ್ಮಣಿ ಜಾಯ್‌   

ಮಡಿಕೇರಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ಮಾರ್ಚ್‌ 4ರಿಂದ ಆರಂಭವಾಗಲಿದ್ದು, ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ವಿವಿಧ ಕಾಲೇಜು ಪ್ರಾಂಶುಪಾಲರಿಗೆ ಸೂಚನೆ ನೀಡಿದರು.

ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಸಂಬಂಧ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣ ಸಚಿವರು ವಿಡಿಯೊ ಕಾನ್ಫರೆನ್ಸ್ ಸಂದರ್ಭದಲ್ಲಿ ನೀಡಿರುವ ಮಾರ್ಗದರ್ಶನಗಳನ್ನು ಚಾಚು ತಪ್ಪದೆ ಪಾಲಿಸಬೇಕು. ಯಾವುದೇ ರೀತಿಯ ದೂರುಗಳು ಬರದಂತೆ ಪರೀಕ್ಷೆ ನಡೆಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಪ್ರಾಂಶುಪಾಲರಿಗೆ, ವಿವಿಧ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.

ADVERTISEMENT

ಹೊಳೆ ದಾಟಿ ಬರುವ ವಿದ್ಯಾರ್ಥಿಗಳ ಬಗ್ಗೆ ನಿಗಾ ವಹಿಸುವುದು, ವಿಶೇಷ ವಿದ್ಯಾರ್ಥಿಗಳ ಬಗ್ಗೆ ಗಮನ ಹರಿಸುವಂತೆ ಸಚಿವರು ತಿಳಿಸಿದ್ದು, ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಭವಾನಿ, ಜಿಲ್ಲೆಯ 16 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಖಜಾನೆಯಿಂದ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗಲು 7 ಮಾರ್ಗಗಳನ್ನು ಗುರುತು ಮಾಡಲಾಗಿದೆ. ಈ ಸಂಬಂಧ ಪ್ರತಿ ಮಾರ್ಗಕ್ಕೆ ಪೊಲೀಸರು ಸೇರಿದಂತೆ ಅಧಿಕಾರಿಗಳನ್ನು ನಿಯೋಜಿಸಬೇಕಿದೆ ಎಂದು ಭವಾನಿ ಅವರು ಮನವಿ ಮಾಡಿದರು.

ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗಲು ಈ ಏಳು ಮಾರ್ಗಗಳಿಗೆ ಅಗತ್ಯ ವಾಹನವನ್ನು ನಿಯೋಜಿಸಬೇಕಿದೆ. ಹಾಗೆಯೇ ವಿಶೇಷ ಜಾಗೃತ ದಳ ನಿಯೋಜಿಸಬೇಕಿದೆ ಎಂದು ಹೇಳಿದರು.

ಪರೀಕ್ಷಾ ಕೊಠಡಿ ಮೇಲ್ವಿಚಾರಕರು, ಮತ್ತೊಬ್ಬ ಮೇಲ್ವಿಚಾರಕರನ್ನು ನಿಯೋಜಿಸಲಾಗುತ್ತದೆ. ಹಾಗೆಯೇ ವೈದ್ಯರನ್ನು ನಿಯೋಜಿಸುವುದು, ಜೆರಾಕ್ಸ್ ಕೇಂದ್ರಗಳನ್ನು ಮುಚ್ಚಿಸುವುದು ಮತ್ತು ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸುವುದು ಮತ್ತಿತರ ಕಾರ್ಯಗಳು ಆಗಬೇಕಿದೆ ಎಂದು ಭವಾನಿ ಅವರು ಕೋರಿದರು.

ಪ್ರತೀ ಮಾರ್ಗದಲ್ಲಿ ಪ್ರಶ್ನೆ ಪತ್ರಿಕೆ ತೆಗೆದುಕೊಂಡು ಹೋಗುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗುತ್ತದೆ ಎಂದು ಆರ್‌ಟಿಒ ಕಚೇರಿಯ ರೀಟಾ ಅವರು ಮಾಹಿತಿ ನೀಡಿದರು.

ಮದೆ ಮಹೇಶ್ವರ ಕಾಲೇಜಿನ ಪ್ರಾಂಶುಪಾಲರಾದ ಗುಲಾಬಿ ಅವರು, ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲವಾಗುವಂತೆ ಮಡಿಕೇರಿ-ಸಂಪಾಜೆ ಮಾರ್ಗದಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳು ಮದೆ ಗ್ರಾಮದಲ್ಲಿ ನಿಲುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ ಅವರು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಅಗತ್ಯ ಸಹಕಾರ ನೀಡಲಾಗುವುದು ಎಂದು ಹೇಳಿದರು.

ಪ್ರಾಂಶುಪಾಲರಾದ ಮಹಾಲಿಂಗಯ್ಯ, ವಿಜಯ, ಜಿಲ್ಲಾ ಖಜಾನೆ ಇಲಾಖೆಯ ಉಪ ನಿರ್ದೇಶಕಿ ಪದ್ಮಜಾ, ತಹಶೀಲ್ದಾರರಾದ ಮಹೇಶ್, ಗೋವಿಂದ ರಾಜು, ಡಿವೈಎಸ್‌ಪಿ ದಿನೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ, ಎಚ್.ಕೆ.ಪಾಂಡು, ವಿವಿಧ ಕಾಲೇಜಿನ ಪ್ರಾಂಶುಪಾಲರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.