
ನಾಪೋಕ್ಲು: ಕೊಡಗಿನ ಸುಗ್ಗಿಯ ಹಬ್ಬವಾದ ಪುತ್ತರಿ ಹಬ್ಬವನ್ನು ಗುರುವಾರ ಜಿಲ್ಲೆಯಾದ್ಯಂತ ಸಡಗರ ಸಂಭ್ರಮ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಗುರುವಾರ ರಾತ್ರಿ ಪುತ್ತರಿ ಹಬ್ಬದ ಮೊದಲ ಪೂಜೆ ನಡೆಯಿತು. ಬಳಿಕ ಜಿಲ್ಲೆಯಾದ್ಯಂತ ವಿವಿಧ ದೇವಾಲಯಗಳಲ್ಲಿ ಭತ್ತದ ಕದಿರಿಗೆ ಸಾಂಪ್ರದಾಯಿಕ ಪೂಜೆ ನೆರವೇರಿತು.
ಪಾಡಿ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ದೇವಾಲಯದ ಸುತ್ತಮುತ್ತಲಿನ ಪೊಂಗೇರ, ಕೋಳೆಯಂಡ, ಬೊಳ್ಳನಮ್ಮಂಡ, ಹಳ್ಳಿ ಮಾಡ ಸೇರಿ ಅಮ್ಮಂಗೇರಿಯ ಸುತ್ತಮುತ್ತಿಲಿನ ಕುಟುಂಬಸ್ಥರು,ಭಕ್ತರು ಪಾಲ್ಗೊಂಡಿದ್ದರು. ದೇವಾಲಯದ ಸಮೀಪದ ವಿವಿಧ ಕುಟುಂಬಗಳ ಮಹಿಳೆಯರು ತಳಿಯಕ್ಕಿ ಬೊಳಕ್‌ನೊಂದಿಗೆ ದೇವಾಲಯಕ್ಕೆ ಆಗಮಿಸಿದರು. ಬಳಿಕ ಕುಡಿಯರ ಕಾವೇರಪ್ಪ ಮತ್ತು ಸಂಗಡಿಗರಿಂದ ದುಡಿಕೊಟ್ ಪಾಟ್ ನುಡಿಸಲಾಯಿತು.
ಹಿರಿಯರಾದ ಪೊಂಗೇರ ಉಲ್ಲಾಸ್ ದೇವರ ನಡೆಯಲ್ಲಿ ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಾಗಟೆ, ಡೋಲು ಸಹಿತ ಬೆಳ್ಳಿಯ ಬಿಂದಿಗೆಯೊ0ದಿಗೆ ಮುಕ್ಕಾಟಿ ಸುಬ್ರಮಣಿ ಹಾಗೂ ವಿವಿಧ ಕುಟುಂಬಗಳ ಮಹಿಳೆಯರು ತಳಿಯಕ್ಕಿ ಬೊಳಕ್‌ನೊಂದಿಗೆ ಭಕ್ತರು ಪೊಂಗೇರ ಅಪ್ಪಣ್ಣನವರ ಮಾಬಲ್ಯ ಗದ್ದೆಗೆ ತೆರಳಿ ಪೂಜೆ ವಿಧಿವಿಧಾನ ನೆರವೇರಿಸಿದರು.
ಕುಶಾಲು ತೋಪು ಹಾರಿಸಿ ಪೊಲಿಪೊಲಿ ಬಾ ಉದ್ಗೋಷಗಳ ನಡುವೆ ಪಟಾಕಿಗಳ ಮೊರೆತದೊಂದಿಗೆ ಮುಕ್ಕಾಟಿ ಸುಬ್ರಮಣಿ ಅವರು ಭತ್ತದ ಕದಿರುಗಳನ್ನು ಕೊಯ್ಲು ಮಾಡಿದರು. ನಂತರ ಭತ್ತದ ಕದಿರಿನೊಂದಿಗೆ ದೇವಾಲಯಕ್ಕೆ ಆಗಮಿಸಿದ ಭಕ್ತರು ದೇವಾಲಯದ ಅಶ್ವತ್ಥ ಕಟ್ಟೆಗೆ ಪ್ರದಕ್ಷಿಣೆ ಬಂದು ತೆನೆಗಳನ್ನು ಅರ್ಚಕರಿಗೆ ಒಪ್ಪಿಸಲಾಯಿತು. ಭತ್ತದ ತೆನೆಗಳನ್ನು ದೇವಾಲಯದ ನಮಸ್ಕಾರ ಮಂಟಪದಲ್ಲಿರಿಸಿ ವಿಶೇಷ ಧಾನ್ಯಲಕ್ಷ್ಮಿ ಪೂಜೆಯನ್ನು ಅರ್ಚಕರಾದ ಜಗದೀಶ್, ಶ್ರೀಕಾಂತ್ ಮತ್ತು ಅರ್ಚಕ ವೃಂದ ನೆರವೇರಿಸಿದರು. ಪ್ರಥಮವಾಗಿ ಕದಿರು ದೇವರ ಗರ್ಭಗುಡಿ ಸೇರಿ ದೇವಾಲಯದ ವಿವಿಧ ಕಡೆಯಲ್ಲಿ ಕಟ್ಟಲಾಯಿತು. ಭಕ್ತರಿಗೆ ಕದಿರು, ತೀರ್ಥಪ್ರಸಾದ ವಿತರಿಸಲಾಯಿತು. ದೇವಾಲಯದಲ್ಲಿ ನಡೆದ ಆಚರಣೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಸುಬ್ರಹ್ಮಣ್ಯ ಯುವಕ ಸಂಘದ ವತಿಯಿಂದ ತಳಿರು ತೋರಣ ವ್ಯವಸ್ಥೆ ಮಾಡಲಾಗಿತ್ತು.
ದೇವಾಲಯದಲ್ಲಿ ಪೂಜೆಯ ಬಳಿಕ ಸುತ್ತಮುತ್ತಲಿನ ಕುಟುಂಬಸ್ಥರು ತಮ್ಮ ತಮ್ಮ ಮನೆಗೆ ತೆರಳಿ ಅವರವರ ಗದ್ದೆಗಳಿಂದ ಕದಿರು ತೆಗೆದು ಪಟಾಕಿ ಬಾಣ, ಬಿರುಸು, ಹಾಗೂ ಪುತ್ತರಿಯ ವಿಶೇಷ ತಿಂಡಿ,ತಿನಿಸು ಹಾಗೂ ಹೊಸ ಅಕ್ಕಿಯಿಂದ ಮಾಡಿದ ಪಾಯಸ ಗಳೊಂದಿಗೆ ಪುತ್ತರಿ ಹಬ್ಬ ವಿಶೇಷವಾಗಿ ಆಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.