ADVERTISEMENT

ಕಾನೂನು ಉಲ್ಲಂಘಿಸದಂತೆ ತಹಶೀಲ್ದಾರ್‌ಗೆ ಅಶೋಕ್ ಎಚ್ಚರಿಕೆ

ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು: ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 6:03 IST
Last Updated 21 ಸೆಪ್ಟೆಂಬರ್ 2024, 6:03 IST
ಕುಶಾಲನಗರ ತಹಶೀಲ್ದಾರ್ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು
ಕುಶಾಲನಗರ ತಹಶೀಲ್ದಾರ್ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಭೇಟಿ ನೀಡಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು   

ಕುಶಾಲನಗರ: ‘ಪಟ್ಟಣ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ನೀಡಿ ಕಾನೂನು ಉಲ್ಲಂಘಿಸಬಾರದು’ ಎಂದು ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಎಚ್ಚರಿಕೆ ನೀಡಿದರು.

ಸ್ಥಳೀಯ ಪಟ್ಟಣ ಪಂಚಾಯಿತಿಗೆ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸೆ. 25ರಂದು ಚುನಾವಣೆ ಘೋಷಣೆಯಾಗಿದ್ದು, ಕಾನೂನು ಬಾಹಿರವಾಗಿ ನಾಮನಿರ್ದೇಶಿತ ಇಬ್ಬರು ಸದಸ್ಯರಿಗೆ ನೀಡಲಾಗಿರುವ ಮತದಾನದ ಹಕ್ಕು ರದ್ದುಪಡಿಸಿ ನ್ಯಾಯ ಸಮ್ಮತ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಬಿಜೆಪಿ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಸಂಜೆ ಭೇಟಿ ನೀಡಿ ಮಾಹಿತಿ ಪಡೆದ ಅವರು, ತಹಶೀಲ್ದಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

‘ಐದು ಬಾರಿ ಮಂತ್ರಿಯಾಗಿರುವ ನನಗೆ ಇದು ಹೊಸ ವಿಚಾರ. ಎಲ್ಲೂ ಇಲ್ಲದ ವಿಶೇಷ ಕಾನೂನು‌ ನಿಮಗೆಲ್ಲಿಂದ ಬಂತು. ಯಾರದ್ದೋ ಮಾತು ಕೇಳಿ ಜೀವನ ಹಾಳುಮಾಡಿಕೊಳ್ಳಬೇಡಿ. ಕಾನೂನು ರೀತಿಯಲ್ಲಿ ಕಾರ್ಯ ನಿರ್ವಹಿಸಿ’ ಎಂದು ತಾಕೀತು ಮಾಡಿದರು.

ADVERTISEMENT

ಇದಕ್ಕೂ ಮುನ್ನ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ಎಂ.ಚರಣ್ ಹಾಗೂ ಕಾರ್ಯದರ್ಶಿ ಎಚ್.ಎಂ.ಮಧುಸೂದನ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಪುರಸಭಾ ಸದಸ್ಯರು ತಹಶೀಲ್ದಾರ್ ಕಚೇರಿ ಮುಂಭಾಗ ಧರಣಿ ನಡೆಸಿದರು. ಚುನಾವಣಾಧಿಕಾರಿ ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬಿಜೆಪಿ ಮುಖಂಡ ಕೆ.ಜಿ.ಮನು ಮಾತನಾಡಿ, ‘ಕರ್ನಾಟಕ ಪೌರಾಡಳಿತ ಕಾಯ್ದೆ 1964ರ ನಿಯಮ 11(1)(ಬಿ)ಅನ್ವಯ ಕುಶಾಲನಗರ ಪಟ್ಟಣ ಪಂಚಾಯಿತಿಗೆ ಒಟ್ಟು 7 ನಾಮನಿರ್ದೇಶನ ಮಾಡಿರುವುದು ಕಾನೂನು ಬಾಹಿರ ಹಾಗೂ ಅದರಲ್ಲಿ ಉದ್ದೇಶ ಪೂರ್ವಕವಾಗಿ 2 ಸದಸ್ಯರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಕ್ಕೆ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಕರ್ನಾಟಕ ಪೌರಾಡಳಿತ ಕಾಯ್ದೆ ಪ್ರಕಾರ ನಾಮನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ ಹಕ್ಕು ಇಲ್ಲ. ಆದರೆ ಚುನಾವಣಾಧಿಕಾರಿ ಆದ ತಹಶೀಲ್ದಾರ್ ಕಾಂಗ್ರೆಸ್ ಮುಖಂಡರ ಒತ್ತಡಕ್ಕೆ ಮಣಿದು ಕಾನೂನು ಉಲ್ಲಂಘಿಸಿ, ಚುನಾವಣೆ ನಡೆಸಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

ನಗರಾಧ್ಯಕ್ಷ ಚರಣ್ ಮಾತನಾಡಿ, ‘ಕುಶಾಲನಗರ ಕೇಂದ್ರವಾಗಿರಿಸಿಕೊಂಡು ಮುಳ್ಳುಸೋಗೆ ಪಂಚಾಯಿತಿಯನ್ನು ಸೇರ್ಪಡೆ ಮಾಡಿ ಪುರಸಭೆಯಾಗಿ ಮೇಲ್ದರ್ಜೆಗೆ ಸೇರಿಸಿ ವರ್ಷಗಳೆ ಕಳೆದಿವೆ. ಆದರೆ, ಈಗ ಈ ಹಿಂದಿನ ಪಟ್ಟಣ ಪಂಚಾಯಿತಿಗೆ 2ನೇ ಅವಧಿಗೆ ಚುನಾವಣೆ ಘೋಷಣೆ ಮಾಡಲಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭಾ ಸದಸ್ಯರಾದ ಡಿ.ಕೆ.ತಿಮ್ಮಪ್ಪ, ಅಮೃತ್ ರಾಜ್, ಜೈವರ್ಧನ್, ಜಗದೀಶ್, ರೇಣುಕಾ, ಮುಖಂಡರಾದ ಉಮಾಶಂಕರ್, ಎಂ.ಡಿ.ಕೃಷ್ಣಪ್ಪ, ಮಂಜುನಾಥ್, ಬೋಸ್ ಮೊಣ್ಣಪ್ಪ, ಎಂ.ವಿ.ರಾಜೇಶ್, ಎಚ್.ಟಿ.ವಸಂತ, ವೈಶಾಖ್, ಪ್ರವೀಣ್, ಆಶೀಪ್, ಪ್ರವೀಣ್, ಪ್ರಶಾಂತ್, ಸಚಿನ್ ಪಾಲ್ಗೊಂಡಿದ್ದರು. ಸಿಪಿಐ ಪ್ರಕಾಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.

ಯಾವುದೇ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡಿಲ್ಲ’

ಚುನಾವಣಾಧಿಕಾರಿಯೂ ಆದ ತಹಶೀಲ್ದಾರ್ ಕಿರಣ್ ಗೌರಯ್ಯ ಪ್ರತಿಕ್ರಿಯೆ ನೀಡಿ ‘ಕುಶಾಲನಗರ ಪುರಸಭೆಗೆ ಜಗದೀಶ್ ಮತ್ತು ಪದ್ಮಾವತಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸೆ.25 ರಂದು ನಡೆಯುವ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ನೋಟಿಸ್ ನೀಡಲಾಗಿದೆ. ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಹಾಗೂ ನ್ಯಾಯಾಲಯದ ಆದೇಶದನ್ವಯ ಚುನಾವಣೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಆದರೆ ಪುರಸಭೆಯ ಬಿಜೆಪಿ ಸದಸ್ಯರು ಹಾಗೂ ಪಕ್ಷದ ಕಾರ್ಯಕರ್ತರು ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಯಾವುದೇ ಪಕ್ಷದ ಕೈಗೊಂಬೆಯಾಗಿ ಕೆಲಸ ಮಾಡುತ್ತಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.