ಸುಂಟಿಕೊಪ್ಪ ಸಮೀಪದ ಕೊಡಗರಹಳ್ಳಿಯಲ್ಲಿ ಗಾಳಿ ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬ
ಸುಂಟಿಕೊಪ್ಪ: ಸುಂಟಿಕೊಪ್ಪ ಸೇರಿದಂತೆ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಮಂಗಳವಾರವೂ ಸಹ ಧಾರಾಕಾರ ಮಳೆ ಸುರಿದು, ಅಲ್ಲಲ್ಲಿ ಮರಗಳು ಧರೆಗೆ ಉರುಳಿ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.
ವಾಯುಭಾರ ಕುಸಿತ ಮತ್ತು ಮುಂಗಾರು ಮಳೆಯು ಈ ಬಾರಿ ಮೇ ತಿಂಗಳಲ್ಲಿ ಆರ್ಭಟಿಸುತ್ತಿರುವುದರಿಂದ ಈ ಭಾಗದ ಹಲವೆಡೆ ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದು ಹಾನಿಯಾಗಿದೆ. ಕೆಲವು ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕವಿಲ್ಲದೆ, ಕತ್ತಲೆಯಲ್ಲಿ ಕಾಲ ಕಳೆಯುವಂತಾಯಿತು.
ಸಮೀಪದ ಮಾದಾಪುರ ರಸ್ತೆಯ ಸ್ವಸ್ಥ ವಿಶೇಷ ಶಾಲೆಯ ಬಳಿ ಬೃಹದಾಕಾರದ ಮರ ಬಿದ್ದು ವಾಹನ ಹಾಗೂ ಜನಸಂಚಾರಕ್ಕೆ ಕೆಲಕಾಲ ಅಡ್ಡಿಯಾಗಿತ್ತು. ನಾಕೂರು ಶಿರಂಗಾಲದಲ್ಲೂ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ ಸಂಕಷ್ಟ ಎದುರಿಸಬೇಕಾಯಿತು.
ಕೊಡಗರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಕಡೆಗಳಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಬೆಳಿಗ್ಗೆಯಿಂದಲೂ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಮಾದಾಪುರ- ಕುಂಬೂರು ಮಾರ್ಗ ಮಧ್ಯೆ ಅಲ್ಲಲ್ಲಿ ಮರಗಳು ಬಿದ್ದು, ಬಹಳಷ್ಟು ತೊಂದರೆ ಅನುಭವಿಸುವಂತಾಯಿತು.
ಮಳೆಯಿಂದ ಸುತ್ತಮುತ್ತಲಿನ ಕೆರೆ, ಹೊಳೆಗಳು ತುಂಬಿ ಹರಿಯುತ್ತಿವೆ. ಭಾರಿ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.