ADVERTISEMENT

‘ಕಾವೇರಿ ನಾಡು’ ಮತ್ತೆ ರೆಡ್ ಅಲರ್ಟ್

ಹಾರಂಗಿ ಭರ್ತಿ; ನದಿಗೆ ನೀರು ಬಿಡುಗಡೆ, ಕುಶಾಲನಗರದಲ್ಲಿ ಪ್ರವಾಹ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2019, 8:43 IST
Last Updated 9 ಆಗಸ್ಟ್ 2019, 8:43 IST
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಗುರುವಾರ ನದಿಗೆ ನೀರು ಬಿಡುಗಡೆ ಮಾಡಲಾಯಿತು
ಕುಶಾಲನಗರ ಸಮೀಪದ ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಗುರುವಾರ ನದಿಗೆ ನೀರು ಬಿಡುಗಡೆ ಮಾಡಲಾಯಿತು   

ಮಡಿಕೇರಿ: ಕಾವೇರಿ ನಾಡಿನ ಜನರು ಮತ್ತೆ ಮಳೆಯ ಆರ್ಭಟಕ್ಕೆ ತುತ್ತಾಗಿದ್ದಾರೆ. ಮಳೆ– ಗಾಳಿಯ ಅಬ್ಬರ ಜನರಲ್ಲಿ ಆತಂಕ ತಂದೊಡ್ಡಿದೆ. ಲಕ್ಷ್ಮಣತೀರ್ಥ, ಕೀರೆಹೊಳೆ ಉಕ್ಕಿ ಹರಿಯುತ್ತಿದ್ದು, ಕೊಡಗಿನ ದಕ್ಷಿಣ ಭಾಗದ ಗೋಣಿಕೊಪ್ಪಲು, ಪೊನ್ನಂಪೇಟೆ, ವಿರಾಜಪೇಟೆ ಪಟ್ಟಣ ಸೇರಿದಂತೆ ಹತ್ತಾರು ಹಳ್ಳಿಗಳು ಪ್ರವಾಹದಲ್ಲಿ ಮುಳುಗಿವೆ. ಕಳೆದ ವರ್ಷ ಉತ್ತರ ಭಾಗದಲ್ಲಿ ಮಹಾಮಳೆ ಸುರಿದಿತ್ತು. ಈಗ ದಕ್ಷಿಣ ವ್ಯಾಪ್ತಿಯಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ.

ಬ್ರಹ್ಮಗಿರಿ ತಪ್ಪಲಿನ ಇರ್ಫು ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ನೂರಾರು ಮನೆಗಳಿಗೆ ಪ್ರವಾಹದ ನೀರು ನುಗ್ಗಿದೆ. ಹಲವು ಕುಟುಂಬಗಳನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ನಿಡುಗುಂಬ, ಕಾನೂರು ಎಂಬಲ್ಲಿ ಲಕ್ಷ್ಮಣತೀರ್ಥ ಪ್ರವಾಹ ಹೆಚ್ಚಾಗಿದ್ದು, 60 ಕುಟುಂಬಗಳ ಜನರು ಒಂದು ಬದಿಯಲ್ಲಿ ಸಿಲುಕಿದ್ದರು. ಅವರಿಗೆ ಯಾವ ಸೌಲಭ್ಯವೂ ಸಿಗುತ್ತಿಲ್ಲ. ಅದರಲ್ಲಿ ಕೆಲವರನ್ನು ಎನ್‌ಡಿಆರ್‌ಎಫ್‌ ಹಾಗೂ ಪೊಲೀಸರು ಕಾರ್ಯಾಚರಣೆ ನಡೆಸಿ, ಸುರಕ್ಷಿತ ಪ್ರದೇಶಕ್ಕೆ ಕರೆ ತರಲು ಯಶಸ್ವಿಯಾಗಿದ್ದಾರೆ.

ಮತ್ತೆ ಪರಿಹಾರ ಕೇಂದ್ರದತ್ತ:ಹಾರಂಗಿ ಜಲಾಶಯ ಬಹುತೇಕ ಭರ್ತಿಯಾಗಿದ್ದು, 30 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.34,346 ಕ್ಯುಸೆಕ್‌ ಒಳಹರಿವು ಇದೆ. 2,859 ಅಡಿ ಗರಿಷ್ಠ ಸಾಮರ್ಥ್ಯದ ಹಾರಂಗಿಯಿಂದ ಒಮ್ಮೆಲೇ ಅಪಾರ ಪ್ರಮಾಣದ ನೀರನ್ನು ಬಿಟ್ಟ ಪರಿಣಾಮ ಕುಶಾಲನಗರದ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಇಂದಿರಾ ಬಡಾವಣೆ, ನಿಜಾಮುದ್ದೀನ್‌ ಬಡಾವಣೆಗಳ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೂರಾರು ಮಂದಿ ತೊಟ್ಟಬಟ್ಟೆಯಲ್ಲೇ ಗುರುವಾರ ಬೆಳಿಗ್ಗೆ ಪರಿಹಾರ ಕೇಂದ್ರ ಸೇರಿದರು.

ADVERTISEMENT

ಕಳೆದ ವರ್ಷವೂ ಈ ಬಡಾವಣೆಗಳಲ್ಲಿ 15 ದಿನಗಳವರೆಗೆ ನೀರು ನಿಂತು, ಜನರಿಗೆ ಸಂಕಟ ತಂದಿತ್ತು. ಮನೆ ಸಾಮಗ್ರಿಗಳು, ಎಲೆಕ್ಟ್ರಾನಿಕ್‌ ಉಪಕರಣಗಳು ನೀರು ಪಾಲಾಗಿದ್ದವು. ಮನೆಗಳಿಗೆ ಹಾವು– ಚೇಳು ಸೇರಿದ್ದವು. ಈಗ ಮತ್ತೆ ಅದೇ ಕಹಿ ಘಟನೆ ಕೊಡಗಿನಲ್ಲಿ ಮರುಕಳುಹಿಸಿದೆ.

ಸಂಪರ್ಕ ಕಡಿತ: ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ಮಡಿಕೇರಿ– ವಿರಾಜಪೇಟೆ ನಡುವೆ ರಸ್ತೆ ಬಂದ್ ಆಗಿದೆ. ಮೂರ್ನಾಡು– ನಾಪೋಕ್ಲು ಸಂಪರ್ಕ ನಾಲ್ಕು ದಿನಗಳು ಕಳೆದರೂ ಸಾಧ್ಯವಾಗಿಲ್ಲ. ಕಾವೇರಿ ನದಿಯಲ್ಲಿ ಕ್ಷಣಕ್ಷಣಕ್ಕೂ ನೀರು ಹೆಚ್ಚುತ್ತಿದ್ದು, ಅಪಾಯಮಟ್ಟ ಮೀರಿ ಹರಿಯುತ್ತಿದೆ. ನದಿಗಳ ಅಬ್ಬರಕ್ಕೆ ಅಕ್ಕಪಕ್ಕ ಕಾಫಿ ತೋಟಗಳೇ ಕೊಚ್ಚಿ ಹೋಗುತ್ತಿವೆ. ಹರಿಹರ, ಬಲ್ಯಮಂಡೂರು, ಕಾನೂರು, ನಿಟ್ಟೂರು, ಕೊಟ್ಟಗೇರಿ, ಬಾಳೆಲೆ ಮಾರ್ಗವಾಗಿ ಹರಿಯುವ ಲಕ್ಷ್ಮಣತೀರ್ಥ ನದಿ ಪ್ರವಾಹ ಸಾಗರ ಸೃಷ್ಟಿಸಿದೆ. ಭತ್ತದ ಗದ್ದೆಗಳೂ ಕಾಣಿಸುತ್ತಿಲ್ಲ.

ಮಳೆಗೆ ಹೆದರಿ ಜಿಲ್ಲೆಯತ್ತಪ್ರವಾಸಿಗರು ಮುಖ ಮಾಡುತ್ತಿಲ್ಲ. ದುಬಾರೆ, ಅಬ್ಬಿ, ಇರ್ಫು, ದುಬಾರೆ ಪ್ರವಾಸಿ ತಾಣಗಳು ಬಿಕೋ ಎನ್ನುತ್ತಿವೆ. ಎಲ್ಲಿ ನೋಡಿದರೂ ನೀರೋ ನೀರು.

ಕೊಚ್ಚಿಹೋದ ಕಾಫಿ ತೋಟ

ಕೊಡಗಿನ ಬಿರುನಾಣಿಯಲ್ಲಿ ಗುರುವಾರ ಭೂಕುಸಿತವಾಗಿದ್ದು, ಸುಜನ್‌ ಎಂಬುವರಿಗೆ ಸೇರಿದ ನಾಲ್ಕು ಎಕರೆಯಷ್ಟು ಕಾಫಿ ತೋಟ ಕೊಚ್ಚಿ ಹೋಗಿದೆ.ನಾಪೋಕ್ಲು ವ್ಯಾಪ್ತಿಯಲ್ಲಿ ನೂರಾರು ಎಕರೆ ಕಾಫಿ ತೋಟ ಪ್ರವಾಹದಲ್ಲಿ ಮುಳುಗಿದೆ.

ಯಾವ್ಯಾವ ರಸ್ತೆ ಬಂದ್‌?

* ಮೂರ್ನಾಡು– ನಾಪೋಕ್ಲು

* ಮಡಿಕೇರಿ–ಭಾಗಮಂಡಲ

* ಮಡಿಕೇರಿ –ವಿರಾಜಪೇಟೆ

* ಪಾಲಿಬೆಟ್ಟ – ಗೋಣಿಕೊಪ್ಪಲು

ಮೈಸೂರು– ಕಲ್ಲಿಕೋಟೆ ಬಸ್‌ ಸಂಚಾರ ಸ್ಥಗಿತ

ಮೈಸೂರು: ಕೇರಳದ ವೈನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕಬಿನಿ ಜಲಾಶಯ ಗರಿಷ್ಠ ಮಟ್ಟ ತಲುಪಿದ್ದು, ನದಿಗೆ 90 ಸಾವಿರ ಕ್ಯುಸೆಕ್‌ಗೂ ಅಧಿಕ ಪ್ರಮಾಣದ ನೀರನ್ನು ಬಿಡಲಾಗುತ್ತಿದೆ.ಇದರಿಂದ ಎಚ್.ಡಿ.ಕೋಟೆ ತಾಲ್ಲೂಕಿನ ಹಲವು ಗ್ರಾಮಗಳು ಸಂಕಷ್ಟಕ್ಕೆ ತುತ್ತಾಗಿವೆ.

ಕೇರಳದ ನೀಲಾಂಬುರ್‌ನಲ್ಲಿ ರಸ್ತೆ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿರುವುದರಿಂದ ಮೈಸೂರು– ಕಲ್ಲಿಕೋಟೆ ನಡುವಿನ ಬಸ್‌ ಸಂಚಾರ ಸ್ಥಗಿತಗೊಂಡಿದೆ.

ಸರಗೂರು– ಮೈಸೂರು ನಡುವಿನ ಮುಖ್ಯ ರಸ್ತೆಕೊಚ್ಚಿ ಹೋಗಿದೆ. ಬಿದರಹಳ್ಳಿ– ಸರಗೂರನ್ನು ಸಂಪರ್ಕಿಸುವ ಸೇತುವೆ, ಮಾದಾಪುರ– ಬೆಳತ್ತೂರು ಸಂಪರ್ಕ ಕಲ್ಪಿಸುವ ಸೇತುವೆಗಳು ಸಂಪೂರ್ಣಮುಳುಗಿದ್ದು, ವಾಹನಗಳು ಪರ್ಯಾಯಮಾರ್ಗದಲ್ಲಿ ಸಂಚರಿಸುತ್ತಿವೆ.

ಕೆಆರ್‌ಎಸ್‌:ತಮಿಳುನಾಡಿಗೆ ನೀರು ಸ್ಥಗಿತ

ಮಂಡ್ಯ: ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ 93 ಅಡಿ ದಾಟಿದೆ.ಗುರುವಾರ ಸಂಜೆ ಜಲಾಶಯದ ಮಟ್ಟ 93.50 ಅಡಿ ಇತ್ತು. 37,375 ಕ್ಯುಸೆಕ್‌ ಒಳಹರಿವು, 421 ಕ್ಯುಸೆಕ್‌ ಹೊರ ಹರಿವು ಇತ್ತು. ನಾಲ್ಕು ದಿನಗಳಿಂದ ಜಲಾಶಯಕ್ಕೆ 9.40 ಅಡಿ ನೀರು ಹರಿದು ಬಂದಿದೆ.

ತಮಿಳುನಾಡಿಗೆ ನೀರು ಸ್ಥಗಿತ: ತಮಿಳುನಾಡಿಗೆ ಹರಿಸುತ್ತಿದ್ದ ನೀರನ್ನು ಗುರುವಾರ ಸಂಜೆ ಸ್ಥಗಿತಗೊಳಿಸಲಾಗಿದೆ. ಬುಧವಾರ ಸಂಜೆ 6,149 ಇದ್ದ ಹೊರಹರಿವು, ಗುರುವಾರ ಬೆಳಿಗ್ಗೆ 3,276 ಕ್ಯುಸೆಕ್‌ಗೆ ಇಳಿದಿತ್ತು. ಮತ್ತೆ ಸಂಜೆಯ ವೇಳೆ 420 ಕ್ಯುಸೆಕ್‌ಗೆ ಇಳಿಯಿತು. ಜುಲೈ 19ರಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿತ್ತು.ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲ್ಲೂಕಿನಲ್ಲಿ ಬಿರುಸಿನ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.