ADVERTISEMENT

ಕೇರಳ ಪ್ರವೇಶಿಸಿದ ಮುಂಗಾರು: ನಾಳೆ ರಾಜ್ಯಕ್ಕೆ ಪ್ರವೇಶ, ಭಾರೀ ಮಳೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 14:30 IST
Last Updated 8 ಜೂನ್ 2019, 14:30 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಮಡಿಕೇರಿ: ನೈರುತ್ಯ ಮುಂಗಾರು ಮಳೆಯು ಕೇರಳ ರಾಜ್ಯದ ಕರಾವಳಿ ಪ್ರವೇಶಿಸಿದ್ದು, ವಾಯುಭಾರ ಕುಸಿತದಿಂದ ಜೂನ್ 9ರಿಂದ ಕೊಡಗು ಜಿಲ್ಲೆಯಲ್ಲೂ ಮಳೆ ಚುರುಕುಗೊಳ್ಳುವ ಸಾಧ್ಯತೆಯಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕೊಡಗು ಜಿಲ್ಲಾಡಳಿತವು ಕೋರಿದೆ.

ಕೊಡಗು, ದಕ್ಷಿಣ ಕನ್ನಡ, ಹಾಸನ ಮತ್ತು ಕೇರಳದ ವಯನಾಡ್ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಮಳೆಯಾಗುವ ಸಂಭವವಿದೆ. ಮಂದಿನ ಎರಡು, ಮೂರು ದಿನ ವೇಗವಾಗಿ ಗಾಳಿಯೂ ಬೀಸಲಿದೆ. ಜತೆಗೆ, ಮಳೆಯೂ ಸುರಿಯುವ ಮುನ್ಸೂಚನೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ತಿಳಿಸಿದ್ದಾರೆ.

ಈ ವರ್ಷ ಮುಂಗಾರು ನಿಧಾನವಾಗಿ ಜಿಲ್ಲೆಯನ್ನು ಪ್ರವೇಶಿಸುತ್ತಿದೆ. ಕಳೆದ ವರ್ಷ ಜೂನ್‌ ಮೊದಲ ವಾರದಲ್ಲಿ ಜಿಲ್ಲೆಗೆ ಮುಂಗಾರು ಕಾಲಿಟ್ಟಿತ್ತು. ಕಳೆದ ವರ್ಷ ಭಾರೀ ಮಳೆಯಿಂದ ಭೂಕುಸಿತ ಹಾಗೂ ಪ್ರವಾಹ ಸ್ಥಿತಿ ಉಂಟಾಗಿತ್ತು.

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದೆ. ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ನೀಡಿರುವ ಮುನ್ಸೂಚನೆಯಂತೆ ಸಾರ್ವಜನಿಕರು ಅಗತ್ಯ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಕೋರಿದ್ದಾರೆ.

ಕಳೆದವರ್ಷ ಸಂಭವಿಸಿದ್ದ ದುರಂತದಿಂದ ಜಿಲ್ಲೆಯ ಜನರು ಭಾರೀ ಆತಂಕದಲ್ಲಿ ಇದ್ದಾರೆ. ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕಾ ಕ್ರಮವನ್ನೂ ಕೈಗೊಂಡಿದೆ. ಎನ್‌ಡಿಆರ್‌ಎಫ್‌ ಸಿಬ್ಬಂದಿ ಜಿಲ್ಲೆಯಲ್ಲೇ ಬೀಡುಬಿಟ್ಟಿದೆ. ಜಿಲ್ಲಾ ಪೊಲೀಸರೂ ಅಗತ್ಯ ತಯಾರಿಯಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.