ADVERTISEMENT

ಸೋಮವಾರಪೇಟೆ | ಒಣಗುತ್ತಿದೆ ಬೆಳೆ, ಕಷ್ಟದಲ್ಲಿ ರೈತ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2023, 6:35 IST
Last Updated 2 ಸೆಪ್ಟೆಂಬರ್ 2023, 6:35 IST
<div class="paragraphs"><p>ಸೋಮವಾರಪೇಟೆ ಸಮೀಪದ ಗರಗಂದುರು ಗ್ರಾಮದ ಸುಬ್ಬಯ್ಯ ಎಂಬುವವರ ಭತ್ತದ ಗದ್ದೆಯಲ್ಲಿ ನೀರು ಇಲ್ಲದೆ, ಒಣಗುತ್ತಿರುವುದು<br></p></div>

ಸೋಮವಾರಪೇಟೆ ಸಮೀಪದ ಗರಗಂದುರು ಗ್ರಾಮದ ಸುಬ್ಬಯ್ಯ ಎಂಬುವವರ ಭತ್ತದ ಗದ್ದೆಯಲ್ಲಿ ನೀರು ಇಲ್ಲದೆ, ಒಣಗುತ್ತಿರುವುದು

   

ಸೋಮವಾರಪೇಟೆ: ತಾಲ್ಲೂಕಿನಲ್ಲಿ ಬರದ ಛಾಯೆ ಢಾಳಾಗಿಯೇ ಗೋಚರಿಸುತ್ತಿದೆ. ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಶೇ 62ರಷ್ಟು ಮಳೆ ಕೊರತೆಯಾಗಿದ್ದರೆ, ಆಗಸ್ಟ್ ತಿಂಗಳಿನಲ್ಲಿ ಶೇ 88ರಷ್ಟು ಮಳೆಯೇ ಆಗಿಲ್ಲ. ಇದರಿಂದ ತಾಲ್ಲೂಕಿನ ರೈತಾಪಿ ಜನತೆ ಕಂಗಾಲಾಗಿದ್ದಾರೆ.

ಆಗಸ್ಟ್ ತಿಂಗಳಿನಲ್ಲಿ ಮನೆಯಿಂದ ಹೊರಬಾರದಷ್ಟು ಮುಂಗಾರು ಮಳೆ ತಾಲ್ಲೂಕಿನಲ್ಲಿ ಸುರಿಯುವುದು ವಾಡಿಕೆ. ಆದರೆ, ಪ್ರಸಕ್ತ ಸಾಲಿನಲ್ಲಿ ಮಳೆ ಇಲ್ಲದೆ, ಬೇಸಿಗೆಯನ್ನು ಮೀರಿಸುವಂತಹ ಬಿಸಿಲಿನ ಬೇಗೆ ಹೆಚ್ಚಾಗಿದ್ದು, ಕೃಷಿಕರು ಇನ್ನಿಲ್ಲದಂತೆ ಹೈರಾಣಾಗುತ್ತಿದ್ದಾರೆ.

ADVERTISEMENT

ತಾಲ್ಲೂಕಿನಲ್ಲಿ ಒಟ್ಟು 13,070 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಬೇಕಿತ್ತು. ಮಳೆ ಕೊರತೆಯಿಂದಾಗಿ ಕೇವಲ 9,566 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರವೇ ಬಿತ್ತನೆ ನಡೆದಿದೆ. ಹಾರಂಗಿ ಜಲಾಶಯದಲ್ಲಿ ಸಾಕಾಗುಷ್ಟು ನೀರು ಶೇಖರಣೆಗೊಂಡಿಲ್ಲದೇ ಇದ್ದುದ್ದರಿಂದ ಸಹಜವಾಗಿಯೇ ಈ ಜಲಾಶಯದ ನೀರನ್ನೇ ನಂಬಿಕೊಂಡಿದ್ದ ರೈತರು ನಿರಾಶರಾಗಿದ್ದಾರೆ. ಈ ಜಲಾಶಯದ ನೀರಿನಲ್ಲಿ ಕುಶಾಲನಗರ ತಾಲ್ಲೂಕೂ ಸೇರಿದಂತೆ ಒಟ್ಟು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯಾಗಬೇಕಿತ್ತು. ಆದರೆ, ಒಂದೇ ಒಂದು ಹೆಕ್ಟೇರ್ ಸಹ ಬಿತ್ತನೆಯಾಗಿಲ್ಲ.

ಮಳೆಯಾಶ್ರಿತದಡಿ 7,100 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ನಡೆಯಬೇಕಿತ್ತು. ಸದ್ಯ, 6,640 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರವೇ ಭತ್ತ ಬಿತ್ತನೆಯಾಗಿದೆ. ಇದೂ ಸಹ ಮಳೆ ಇಲ್ಲದೇ ಒಣಗುತ್ತಿದೆ.

ಮುಸುಕಿನ ಜೋಳದ ಬಿತ್ತನೆಗೂ ಹಿನ್ನಡೆಯಾಗಿದೆ. ರಾಗಿಯಂತೂ ಒಂದೂ ಹೆಕ್ಟೇರ್ ಸಹ ಬಿತ್ತನೆಯಾಗಿಲ್ಲ. ಇಡೀ ಸೋಮವಾರಪೇಟೆ ತಾಲ್ಲೂಕಿನ ಕೃಷಿ ಭೂಮಿ ಭಣಗುಡಲಾರಂಭಿಸಿದೆ.

ಬಿಸಿಲಿನ ತಾಪಕ್ಕೆ ಭತ್ತದ ಗದ್ದೆ ನೀರಿಗಾಗಿ ಬಾಯಿ ಬಿಡುತ್ತಿವೆ. ಕಾಫಿ ತೋಟಗಳಲ್ಲಿ ಕಾಫಿ ಉದುರಲು ಪ್ರಾರಂಭವಾದರೆ, ಕಾಳು ಮೆಣಸಿನ ಫಸಲಿನ ದಾರು ಉದುರುತ್ತಿದ್ದು, ಮುಸುಕಿನ ಜೋಳ ಒಣಗುತ್ತಿದೆ. ಕಳೆದ 15 ದಿನಗಳ ಹಿಂದೆ ಒಂದು ದಿನ ಬಂದ ಮಳೆಯಿಂದ ಗಿಡಗಳು ಹಸಿರಾಗಿತ್ತು. ಮತ್ತೆ ಸುಡುವ ಬಿಸಿಲಿನಿಂದಾಗಿ ಒಣಗುತ್ತಿದ್ದು, ರೈತರು ಆಕಾಶದತ್ತ ಮಳೆಗಾಗಿ ಮುಖಮಾಡಿದ್ದಾರೆ.

‘ಆಗಸ್ಟ್ ತಿಂಗಳಿನಲ್ಲಿ ಈ ರೀತಿಯ ಬಿಸಿಲನ್ನು ನೋಡಿಲ್ಲ. ನೀರು ಇದ್ದವರು ಕಾಫಿಗೆ ನೀರು ಹಾಯಿಸುವುದನ್ನು ಮೊದಲ ಬಾರಿಗೆ ನೋಡುತ್ತಿದ್ದೇನೆ. ಮೊದಲೇ ಆರೇಬಿಕಾ ಕಾಫಿ ಕಾಲ ಕಾಲಕ್ಕೆ ಮಳೆ ಬೇಡುತ್ತದೆ. ಬಿಸಿಲು ಹೆಚ್ಚಾದರೆ, ಬಿಳಿಕಾಂಡಕೊರಕದ ಹಾವಳಿ ಹೆಚ್ಚಾಗುತ್ತದೆ. ಈಗಾಗಲೇ ತೋಟಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಹಲವು ರೈತರು ಸರಿಯಾಗಿ ತೋಟ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿ ವರ್ಷ ಒಂದಿಲ್ಲೊಂದು ಕಾರಣದಿಂದ ಬೆಳೆ ನಷ್ಟ ಅನುಭವಿಸಬೇಕಾಗಿದೆ’ ಎಂದು ಕಾಫಿ ಬೆಳೆಗಾರರಾದ ಕಿತ್ತೂರು ಲಕ್ಪ್ಷ್ಮಯ್ಯ ಶೆಟ್ಟಿ ಹೇಳಿದರು.

ಕಾಫಿ ತೋಟ ಮತ್ತು ಇರುವ ಫಸಲನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬೆಳೆಗಾರರದ್ದು. ಇದರಿಂದ ಬಹುತೇಕ ಮಂದಿ ಸಾಲ ಮಾಡುವ ಸ್ಥಿತಿ ಎದುರಾಗಿದೆ.

‘ಮಳೆಯ ಕಣ್ಣಾಮುಚ್ಚಾಲೆಯಿಂದ ಯೋಜಿತ ಪ್ರದೇಶದಲ್ಲಿ ಭತ್ತದ ಕೃಷಿ ಮಾಡಲು ಸಾಧ್ಯವಾಗಿಲ್ಲ. ಜುಲೈ ತಿಂಗಳಿನಲ್ಲಿ ಒಂದು ವಾರ ಮಳೆ ಸುರಿದಿದ್ದನ್ನು ಹೊರತುಪಡಿಸಿದಂತೆ ಸರಿಯಾಗಿ ಮಳೆಯಾಗಲಿಲ್ಲ. ಇರುವ ನೀರಿನ ಸೌಲಭ್ಯದೊಂದಿಗೆ ಭತ್ತದ ಕೃಷಿ ಮಾಡಿದವರ ಗದ್ದೆ ಬಿಸಿಲಿನ ತಾಪಕ್ಕೆ ಒಣಗುತ್ತಿದೆ. ಲಾಭದಾಯಕ ದೃಷ್ಟಿಯಿಂದ ಭತ್ತದ ಕೃಷಿಯಿಂದ ಹಿಂದೆ ಸರಿಯುತ್ತಿರುವ ರೈತರಿಗೆ ಇಂತಹ ಪರಿಸ್ಥಿತಿಯಿಂದ ಇನ್ನೂ ಹೆಚ್ಚಿನ ನಷ್ಟ ಅನುಭವಿಸುವಂತಾಗಿದೆ’ ಎಂದು ಹೊಸತೋಟ ಗ್ರಾಮದ ಭತ್ತದ ಕೃಷಿಕ ಕೆ.ಪಿ.ದಿನೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.