ಗೋಣಿಕೊಪ್ಪಲು: ದಕ್ಷಿಣ ಕೊಡಗಿನಲ್ಲಿ ಗುರುವಾರ ಮಳೆ ರಭಸ ತುಸು ಕಡಿಮೆಯಾಗಿದ್ದರೂ, ಲಕ್ಷ್ಮಣತೀರ್ಥ ಪ್ರವಾಹದಲ್ಲಿ ಯಾವುದೇ ಇಳಿಕೆ ಕಂಡು ಬರಲಿಲ್ಲ. ಬ್ರಹ್ಮಗಿರಿ ಪರ್ವತ ಸಾಲಿನಲ್ಲಿ ಮಳೆ ರಭಸ ಎಂದಿನಂತೆ ಮುಂದುವರಿದಿರುವುದರಿಂದ ಲಕ್ಷ್ಮಣತೀರ್ಥ ನದಿಯಲ್ಲಿನ ಪ್ರವಾಹ ಮುಂದುವರಿದಿದೆ.
ಪೊನ್ನಂಪೇಟೆ ತಾಲ್ಲೂಕಿನಾದ್ಯಂತ ನಿರಂತರವಾಗಿ ಬೀಳುತ್ತಿರುವ ಮಳೆಗೆ ನಾಗರಹೊಳೆ ಅರಣ್ಯದಂಚಿನ ಹಲವು ಹಾಡಿಗಳು ಜಲಾವೃತಗೊಂಡಿವೆ. ಅರಣ್ಯದಂಚಿನಲ್ಲಿ ಅರಣ್ಯ ಇಲಾಖೆ ತೋಡಿರುವ ಆನೆ ಕಂದಕದಲ್ಲಿ ನೀರು ತುಂಬಿ ಕೆಲವು ಕಡೆ ದಡಮೀರಿ ಹರಿಯುತ್ತಿದೆ. ಈ ನೀರು ಕಂದಕದಂಚಿನಲ್ಲಿರುವ ಹಾಡಿಗಳ ಗುಡಿಸಲುಗಳಿಗೆ ನುಗ್ಗುತ್ತಿದೆ. ಇದರಿಂದ ಗುಡಿಸಲುಗಳನ್ನಿ ಶೀತ ಹೆಚ್ಚಾಗಿ ಹಾಡಿಜನರ ವಾಸಕ್ಕೆ ಕಷ್ಟವಾಗಿದೆ.
ಬಾಳೆಲೆ ನಿಟ್ಟೂರು ಕಾರ್ಮಾಡು ನಾಗರಹೊಳೆ ರಕ್ಷಿತಾರಣ್ಯದ ಅಂಚಿನಲ್ಲಿರುವ ಚಿಣ್ಣರ ಹಾಡಿಯ ತೋಡು ತುಂಬಿ ಹರಿಯುತ್ತಿದೆ. ಇದರ ನೀರು ಗಿರಿಜನರ ಅಪ್ಪು ಎಂಬವರ ಗುಡಿಸಲಿಗೆ ನುಗ್ಗಿ ಹಾನಿ ಮಾಡಿದೆ.
‘ಕಳೆದ ವರ್ಷವೂ ಈ ತೋಡಿನ ಸಣ್ಣ ಸೇತುವೆ ಕೊಚ್ಚಿ ಹೋಗಿತ್ತು. ಆ ವೇಳೆ ಶಾಸಕ ಎ.ಎಸ್.ಪೊನ್ನಣ್ಣ ಸ್ಥಳಕ್ಕೆ ಆಗಮಿಸಿ ತಾತ್ಕಾಲಿಕವಾಗಿ ಸೇತುವೆ ನಿರ್ಮಿಸಿ ಜನರ ಓಡಾಡುವುದಕ್ಕೆ ಅನುವು ಮಾಡಿಕೊಟ್ಟಿದ್ದರು. ಒಂದು ತಿಂಗಳ ಒಳಗೆ ಉತ್ತಮ ಸೇತುವೆ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಅಧಿಕಾರಿ ಅತ್ತ ತಿರುಗಿ ನೋಡಿಲ್ಲ. ಇದೀಗ ತಾತ್ಕಾಲಿಕ ಸೇತುವೆ ಕುಸಿದು ಬಿದ್ದು ಮತ್ತೆ ಹಾಡಿ ಜನರ ಸಂಚಾರಕ್ಕೆ ತೊಂದರೆಯಾಗಿದೆ’ ಎಂದು ಹಾಡಿ ನಿವಾಸಿ ಅಪ್ಪು ಅಳಲು ತೋಡಿಕೊಂಡರು.
ಇಳಿಯದ ಲಕ್ಷ್ಮಣತೀರ್ಥ ನದಿಯ ಪ್ರವಾಹ ಗದ್ದೆಗಳಲ್ಲಿ ಇನ್ನೂ ಆವರಿಸಿದ ನದಿ ನೀರು ಹಾಡಿಗಳ ನಿವಾಸಿಗಳಿಗೂ ತಟ್ಟಿದ ಪ್ರವಾಹದ ಬಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.