ADVERTISEMENT

ಕೊಡಗು: ತಗ್ಗಿದ ಮಳೆ ಅಬ್ಬರ, ಇಳಿಯದ ನೆರೆ

ಬೂದಿ ಮುಚ್ಚಿದ ಕೆಂಡದಂತೆ ಕವಿದಿರುವ ದಟ್ಟ ಮೋಡ, ಮುಂದುವರಿದ ಆತಂಕ, ಎಲ್ಲೆಡೆ ಕಟ್ಟೆಚ್ಚರ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2024, 5:30 IST
Last Updated 2 ಆಗಸ್ಟ್ 2024, 5:30 IST
ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ರಾಜ ಕಾಲುವೆಯ ನೀರಿನ ಹೊಡೆತಕ್ಕೆ ಸಮೀಪದ ಮನೆಯ ತಡೆಗೋಡೆಯು ಕುಸಿದ ಸ್ಥಳಕ್ಕೆ ಪುರಸಭೆ ಸದಸ್ಯೆ ಫಸಿಯಾ ತಬಸುಮ್ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು
ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ರಾಜ ಕಾಲುವೆಯ ನೀರಿನ ಹೊಡೆತಕ್ಕೆ ಸಮೀಪದ ಮನೆಯ ತಡೆಗೋಡೆಯು ಕುಸಿದ ಸ್ಥಳಕ್ಕೆ ಪುರಸಭೆ ಸದಸ್ಯೆ ಫಸಿಯಾ ತಬಸುಮ್ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಮಳೆ ಮತ್ತು ಗಾಳಿ ಅಬ್ಬರ ಗುರುವಾರ ತಗ್ಗಿದ್ದರೂ, ಕವಿದಿರುವ ದಟ್ಟ ಮೋಡಗಳು ಹಾಗೂ ಆಗಾಗ್ಗೆ ಬಿರುಸಿನಿಂದ ಸುರಿಯುವ ಮಳೆ ಜನರ ಆತಂಕಕ್ಕೆ ಕಾರಣವಾಗಿದೆ. ನದಿ, ತೊರೆಗಳಲ್ಲಿ ನೀರಿನ ಮಟ್ಟ ಇನ್ನೂ ತಗ್ಗಿಲ್ಲ. ಎಂದಿನಂತೆ ಪ್ರವಾಹ ಭೀತಿಯಲ್ಲಿ ಜನರು ಕಾಲದೂಡುತ್ತಿದ್ದಾರೆ.

ಜಿಲ್ಲೆಯಲ್ಲಿ 10 ಕಾಳಜಿ ಕೇಂದ್ರಗಳು ಸಕ್ರಿಯವಾಗಿವೆ. 2 ಮನೆಗಳಿಗೆ ಹಾನಿಯಾಗಿದೆ. 37 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಸಂಪಾಜೆ– ಕಲ್ಲಳ್ಳ ರಸ್ತೆ ಮತ್ತು ಸಂಪಾಜೆ ಸಮೀಪದ ಚಡಾವು– ಮಂಗಳಪಾರೆ ರಸ್ತೆಯಲ್ಲಿ ಮಣ್ಣು ಕುಸಿತ ಉಂಟಾಗಿದೆ.

ಬುಧವಾರ ರಾತ್ರಿ ನಿಂತ ಮಳೆ ಗುರುವಾರ ಬೆಳಿಗ್ಗೆ ಹೊತ್ತಿಗೆ ಮತ್ತೆ ಆರಂಭವಾಯಿತು. ಕೆಲವೆಡೆ ಬಿರುಸಿನಿಂದ ಸುರಿದು ಮಧ್ಯಾಹ್ನದ ಹೊತ್ತಿಗೆ ನಿಂತಿತು. ಆದರೆ, ಮತ್ತೆ ಸಂಜೆ ಜೋರು ಮಳೆ ಆರಂಭವಾಯಿತು.

ADVERTISEMENT

ಮಡಿಕೇರಿ ನಗರದಲ್ಲಿ ಇಡೀ ದಿನ ಹಗುರ, ಸಾಧಾರಣ ಹಾಗೂ ಬಿರುಸಿನ ಮಳೆಯಾಟವೇ ನಡೆಯಿತು. ದಟ್ಟವಾಗಿ ಕವಿದಿರುವ ಮೋಡಗಳು ಸೂರ್ಯ ಕಿರಣಗಳನ್ನು ಒಂದರೆ ಗಳಿಗೆಯೂ ನೆಲಕ್ಕೆ ತಾಗಿಸಲಿಲ್ಲ. ಆವರಿಸಿದ್ದ ದಟ್ಟ ಮಂಜು ಮಬ್ಬುಗತ್ತಲೆ ಕವಿಸಿ, ಜನರನ್ನು ನಡುಗುವಂತೆ ಮಾಡಿತು.

ಇತ್ತ ಭಾಗಮಂಡಲದಲ್ಲಿ ಮಳೆ ಕೊಂಚ ತಗ್ಗಿದ್ದರಿಂದ ಪ್ರವಾಹ ಪರಿಸ್ಥಿತಿ ಇಳಿಮುಖಗೊಂಡಿತು. ರಸ್ತೆಗಳಲ್ಲಿ ನೀರು ಇಳಿಯಿತು. ತ್ರಿವೇಣಿ ಸಂಗಮ ಭರ್ತಿಯಾಗಿದ್ದರೂ ಉದ್ಯಾನದಲ್ಲಿ ನೀರು ಇಳಿಕೆಯಾಗಿ, ಹಸಿರು ಹುಲ್ಲು ಗೋಚರಿಸಿತು.

ಇತ್ತ ನಾಪೋಕ್ಲು ಭಾಗದಲ್ಲೂ ಮಡಿಕೇರಿ ರಸ್ತೆಯಲ್ಲಿ ನೀರು ಇಳಿದು ಸಂಪರ್ಕ ಸಾಧ್ಯವಾಯಿತು. ಹಾಲು, ದಿನಪತ್ರಿಕೆಗಳ ಸರಬರಾಜಾಗಿ ಜನರು ತುಸು ನಿರಾಳರಾದರು. ಆದರೆ, ಮೂರ್ನಾಡು ರಸ್ತೆಯಲ್ಲಿ ಇನ್ನೂ ನೀರು ಹರಿಯುತ್ತಿದೆ.

ಹಾರಾಂಗಿ ಜಲಾಶಯಕ್ಕೆ ಹರಿದು ಬರುತ್ತಿದ್ದ ನೀರಿನ ಪ್ರಮಾಣ ಬೆಳಿಗ್ಗೆ 8,446 ಕ್ಯುಸೆಕ್‌ನಿಂದ 12,460 ಕ್ಯುಸೆಕ್‌ಗೆ ಏರಿಕೆಯಾಯಿತು. ಸದ್ಯ, ನದಿಗೆ 4,000 ಕ್ಯುಸೆಕ್‌ ನೀರನ್ನು ಮಾತ್ರವೇ ಹೊರಬಿಡುತ್ತಿರುವುದರಿಂದ ಪ್ರವಾಹದ ಆತಂಕ ತುಸು ಕಡಿಮೆಯಾಗಿದೆ.

ಆದರೆ, ಕಾವೇರಿ, ಲಕ್ಷ್ಮಣತೀರ್ಥ ನದಿಗಳ ಉಬ್ಬರ ಎಂದಿನಂತೆ ಮುಂದುವರಿದೇ ಇದೆ. ಮಳೆ ಸಂಪೂ‌ರ್ಣ ನಿಯಂತ್ರಣಕ್ಕೆ ಬಾರದ ಹೊರತು ನದಿಗಳ ನೀರಿನಮಟ್ಟ ಇಳಿಕೆಯಾಗುವ ಸಾಧ್ಯತೆ ಕಡಿಮೆ ಇರುವುದರಿಂದ ನದಿ ತೀರದ ಬಹಳಷ್ಟು ಜನರನ್ನು ಕಾಳಜಿ ಕೇಂದ್ರಗಳಲ್ಲೇ ಇರಿಸಲಾಗಿದೆ.

ಮರ ಬಿದ್ದು ಹಾನಿ

ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಇಳಿಮುಖಗೊಂಡಿದ್ದರೂ ಅಲ್ಲಲ್ಲಿ ಮರಗಳು ಬಿದ್ದು ಅಡ್ಡಿ ಉಂಟಾಗುತ್ತಿವೆ. ಸಮೀಪದ ಕೊಡಗರಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಮಧ್ಯಾಹ್ನ ಮರ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು.

ವಿಚಾರ ತಿಳಿದು ಕಾರ್ಯಪ್ರವೃತ್ತರಾದ ಕೊಡಗರಹಳ್ಳಿ ಗ್ರಾಮ ಪಂಚಾಯತಿ ಪಿಡಿಒ ಸುಮೇಶ್ ಮರವನ್ನು ತೆರವುಗೊಳಿಸಲು ಕ್ರಮ ಕೈಗೊಂಡರು. ಇದರಿಂದಾಗಿ ವಾಹನಗಳ ಸುಗಮ ಸಂಚಾರ ಸಾಧ್ಯವಾಯಿತು. ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಧನಂಜಯ ಇದ್ದರು.

ನಾಕೂರು, ಎಮ್ಮೆಗುಂಡಿ, ಅಂದಗೋವೆ ಭಾಗಗಳಲ್ಲೂ ಗಾಳಿಗೆ ಮರಗಳು ಧರೆಗುರುಳಿವೆ.

ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯ ರಾಜ ಕಾಲುವೆಯ ನೀರಿನ ಹೊಡೆತಕ್ಕೆ ಸಮೀಪದ ಮನೆಯ ತಡೆಗೋಡೆಯು ಕುಸಿದ ಸ್ಥಳಕ್ಕೆ ಪುರಸಭೆ ಸದಸ್ಯೆ ಫಸಿಯಾ ತಬಸುಮ್ ಅವರು ಗುರುವಾರ ಭೇಟಿ ನೀಡಿ ಪರಿಶೀಲಿಸಿದರು
ಮಳೆ ಪ್ರಮಾಣ ಇಳಿಕೆಯಾಗಿರುವುದರಿಂದ ಭಾಗಮಂಡಲದಲ್ಲಿ ಪ್ರವಾಹದ ನೀರು ಕಡಿಮೆಯಾಗಿ ಗುರುವಾರ ಉದ್ಯಾನ ಗೋಚರಿಸಿತು
ತೆರೆದಿರುವ ಕಾಳಜಿ ಕೇಂದ್ರಗಳು 10 ಬಿದ್ದಿರುವ ವಿದ್ಯುತ್ ಕಂಬಗಳು 37 ಭೂಕುಸಿತ ಉಂಟಾದ ಸ್ಥಳಗಳು 02
ಸಿದ್ದಾಪುರದಲ್ಲಿ ತಗ್ಗದ ಪ್ರವಾಹ ಭೀತಿ
ಸಿದ್ದಾಪುರ: ಕಾವೇರಿ ನದಿ ತೀರದಲ್ಲಿ ಎದುರಾಗಿರುವ ಪ್ರವಾಹ ಭೀತಿ ಇನ್ನೂ ಕಡಿಮೆಯಾಗಿಲ್ಲ. ನದಿ ಪಾತ್ರದ 24 ಕುಟುಂಬಗಳ ಒಟ್ಟು 76 ಮಂದಿಯನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಕರಡಿಗೋಡು ಗ್ರಾಮದಲ್ಲಿ 16 ಮನೆಗಳು ಜಲಾವೃತಗೊಂಡಿವೆ. ಚಿಕ್ಕನಹಳ್ಳಿ ಕರಡಿಗೋಡು ಗ್ರಾಮದ ನದಿ ದಡದ ಅಪಾಯದಂಚಿನಲ್ಲಿ ಇರುವವರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕರಡಿಗೋಡು ಚಿಕ್ಕನಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಜಲಾವೃತಗೊಂಡಿದೆ. ಗುಹ್ಯ ಗ್ರಾಮದಲ್ಲೂ ಪ್ರವಾಹ ಭೀತಿ ಎದುರಾಗಿದ್ದು ಗುಹ್ಯ ಗ್ರಾಮದ ಕಕ್ಕಟ್ಟುಕಾಡುವಿಗೆ ತೆರಳುವ ರಸ್ತೆ ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ. ಕೂಡುಗದ್ದೆ ಭಾಗದಲ್ಲೂ ನದಿ ದಡದ ನಿವಾಸಿಗಳ ಮನೆಗಳ ಸಮೀಪದಲ್ಲೇ ನದಿ ತುಂಬಿ ಹರಿಯುತ್ತಿದೆ. ಹಚ್ಚಿನಾಡು ವ್ಯಾಪ್ತಿಯಲ್ಲಿ ನದಿ ತೀರದಲ್ಲಿ ಪ್ರವಾಹ ಭೀತಿ ಎದುರಾಗಿದ್ದು ಹಚ್ಚಿನಾಡು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ನದಿ ದಡದ 10 ಕುಟುಂಬಗಳ 44 ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ವಿರಾಜಪೇಟೆ ತಹಶೀಲ್ದಾರ್ ರಾಮಚಂದ್ರ ಅಮ್ಮತ್ತಿ ಕಂದಾಯ ಪರಿವೀಕ್ಷಕ ಅನಿಲ್ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ. ನೆಲ್ಯಹುದಿಕೇರಿ ಗ್ರಾಮದ ಬೆಟ್ಟದಕಾಡು ಬರಡಿ ಹಾಗೂ ಕುಂಬಾರಗುಂಡಿ ವ್ಯಾಪ್ತಿಯಲ್ಲೂ ಪ್ರವಾಹದ ಭೀತಿ ಎದುರಾಗಿದ್ದು ಸ್ಥಳಕ್ಕೆ ಕುಶಾಲನಗರ ತಹಶೀಲ್ದಾರ್ ಕಿರಣ್ ಗೌರಯ್ಯ ಕಂದಾಯ ಪರಿವೀಕ್ಷಕ ಸಂತೋಷ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಮಳೆ ಇಳಿಕೆಯಾದರೂ ಮುಂದುವರೆದ ಹಾನಿ
ವಿರಾಜಪೇಟೆ: ಕಳೆದ 3 ದಿನಗಳಿಂದ ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳ ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆಯ ಆರ್ಭಟ ಗುರುವಾರ ಇಳಿಮುಖಗೊಂಡಿತು. ಆದರೂ ಸಮೀಪದ ಭೇತ್ರಿಯಲ್ಲಿ ಕಾವೇರಿ ಹೊಳೆ ಹಾಗೂ ಕದನೂರು ಹೊಳೆ ಉಕ್ಕಿ ಹರಿಯುತ್ತಿವೆ. ಕೆಲವೆಡೆ ಗದ್ದೆಗಳು ಗುರುವಾರವೂ ಜಲಾವೃತಗೊಂಡ ಸ್ಥಿತಿಯಲ್ಲಿಯೇ ಇವೆ. ಪಟ್ಟಣದ ಅಪ್ಪಯ್ಯಸ್ವಾಮಿ ರಸ್ತೆಯ ರಾಜ ಕಾಲುವೆಯ ನೀರಿನ ಹೊಡೆತಕ್ಕೆ ಸಮೀಪದ ಮನೆಯ ತಡೆಗೋಡೆಯು ಕುಸಿದಿದೆ. ಸ್ಥಳಕ್ಕೆ ಪುರಸಭೆಯ ಸ್ಥಳೀಯ ಸದಸ್ಯೆ ಫಸಿಯಾ ತಬಸುಮ್ ಪುರಸಭೆಯ ಆರೋಗ್ಯ ಅಧಿಕಾರಿ ರಫಿಕ್ ಹಾಗೂ ಇತರರೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ಪ್ರವಾಹದಿಂದ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಕಸ ತುಂಬಿದ್ದ ಕಾಲುವೆಯನ್ನು ಕಾರ್ಮಿಕರ ಮೂಲಕ ಸ್ವಚ್ಛಗೊಳಿಸಿದರು. ಇದರಿಂದ ಮಳೆ ನೀರು ಕಾಲುವೆಯಲ್ಲಿ ಸರಾಗವಾಗಿ ಹರಿಯುವಂತಾಯಿತು. ಕೆದಮುಳ್ಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಟ್ಟೋಳಿಯ ನಿವಾಸಿ ಎಂ.ಯು.ನಬೀಸಾ ಎಂಬುವವರ  ಮನೆಯು ಕುಸಿದು ಬಿದ್ದಿದೆ. ಮೊದಲು ಮನೆಯು ಭಾಗಶಃ ಕುಸಿದ್ದರಿಂದ ಎಚ್ಚೆತ್ತುಕೊಂಡ ನಬೀಸ ಅವರು ಸಂಬಂಧಿಕರ ಮನೆಗೆ ಹೋಗಿದ್ದರು. ಇದರಿಂದ ಮನೆ ಕುಸಿದ ಸಂದರ್ಭ ಯಾರೂ ಮನೆಯಲ್ಲಿ ಇಲ್ಲದ್ದರಿಂದ ಅಪಾಯವಾಗಲಿಲ್ಲ. ಸ್ಥಳಕ್ಕೆ ಕೆದಮುಳ್ಳೂರು ಗ್ರಾಮ ಪಂಚಾಯತಿಯ ಅಧ್ಯಕ್ಷ ಜೆಫ್ರಿ ಉತ್ತಪ್ಪ ಅಭಿವೃದ್ಧಿ ಅಧಿಕಾರಿ ಬಿ. ಮಣಿ ಸದಸ್ಯರಾದ ಎಂ.ಎಂ.ಇಸ್ಮಾಯಿಲ್ ಮತ್ತು ಗ್ರಾಮ ಲೆಕ್ಕಿಗರಾದ ಅನುಷಾ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.