ಸುಂಟಿಕೊಪ್ಪ: ಸಹೋದರಿಯ ರಕ್ಷಣೆಯನ್ನು ಪ್ರತಿಯೊಬ್ಬ ಸಹೋದರನು ಮಾಡಿದಲ್ಲಿ ರಾಮರಾಜ್ಯದ ಕಲ್ಪನೆ ನನಸಾಗಲಿದೆ ಎಂದು ಕುಶಾಲನಗರ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸತೀಶ್ ಪೂಜಾರಿ ಹೇಳಿದರು.
ಇಲ್ಲಿನ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಮತ್ತು ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘ , ಬಿಲ್ಲವ ವಿದ್ಯಾರ್ಥಿ ಘಟಕದ ವತಿಯಿಂದ ಶನಿವಾರ ರಾತ್ರಿ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರಿಗೆ ಸಮಸ್ಯೆಗಳು ಉಂಟಾದಲ್ಲಿ ಎಲ್ಲರೂ ತಮ್ಮ ಮನೆಯ ಸಮಸ್ಯೆ ಎಂದು ಭಾವಿಸಿ, ಬಗೆಹರಿಸಲು ಸಿದ್ಧರಿರಬೇಕು. ಹಾಗಾದಾಗ ಮಾತ್ರ ಮಹಿಳೆಯ ಮೇಲಿನ ದೌರ್ಜನ್ಯಕ್ಕೆ ಕಡಿವಾಣ ಹಾಕಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿ ಮಹಿಳೆಯ ಬೆಂಬಲಕ್ಕೆ ಪುರುಷ ಸಮಾಜ ಇದೆ ಎನ್ನುವ ನಿಟ್ಟಿನಲ್ಲಿ ರಕ್ಷಾಬಂಧನ ಒಂದು ಅಡಿಪಾಯವಾಗಿದೆ ಎಂದು ಬಣ್ಣಿಸಿದರು.
ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷ ಲಿಂಗಪ್ಪ ಪೂಜಾರಿ ಮಾತನಾಡಿ, ಒಂದೇ ಕುಲ, ಮನುಜರೆಲ್ಲ ಒಂದೇ ಎಂದು ಪ್ರತಿಪಾದಿಸಿದ ನಾರಾಯಣ ಗುರುಗಳ ಆದರ್ಶವನ್ನು ನಾವೆಲ್ಲರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಜಾತಿಯತೆ ಪ್ರಬಲವಾಗಿದ್ದ ಕಾಲಘಟ್ಟದಲ್ಲಿ ದೇವಾಲಯಗಳನ್ನು ನಿರ್ಮಿಸಿ ಶೋಷಿತ ವರ್ಗಕ್ಕೆ ದೇವಾಲಯಗಳ ಪ್ರವೇಶಕ್ಕೆ ನಾರಾಯಣ ಗುರುಗಳು ಅವಕಾಶ ಮಾಡಿಕೊಟ್ಟಿದ್ದರು. ನಾರಾಯಣ ಗುರುಗಳು ಸಮುದಾಯದ ಏಳಿಗೆಗೆ ನೀಡಿರುವ ಕೊಡುಗೆ ಮತ್ತು ಆದರ್ಶ ಪ್ರತಿಯೊಬ್ಬರೂ ನೆನಪಿಸಿಕೊಳ್ಳಬೇಕಾಗಿದೆ. ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಮಟ್ಟದ ಬಿಲ್ಲವ ಸಮಾವೇಶ ನಡೆಸಲು ತಯಾರಿ ನಡೆಯುತ್ತಿದೆ. ಎಲ್ಲರೂ ಸಹಕರಿಸುವಂತೆ ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮೊದಲು ನೆರೆದಿದ್ದ ಬಿಲ್ಲವ ಸಮಾಜದ ಸದಸ್ಯರು ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಿದರು.
ಹಾಗೆಯೇ, ಸಮಿತಿಯ ಸದಸ್ಯರು ಒಬ್ಬರಿಗೊಬ್ಬರು ರಾಖಿ ಕಟ್ಟುವ ಮೂಲಕ ರಕ್ಷಾಬಂಧನವನ್ನು ಆಚರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಉಪಾಧ್ಯಕ್ಷ ಬಾಲಕೃಷ್ಣ ವಹಿಸಿದ್ದರು. ದೇಯಿ ಬೈದೇತಿ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷರಾದ ಮಧು ನಾಗಪ್ಪ, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಪ್ಪ ಕೋಟ್ಯಾನ್, ಸಲಹಾ ಸಮಿತಿ ಸದಸ್ಯರಾದ ಡಾ. ಯಶೋಧರ ಪೂಜಾರಿ, ಕೆ.ಪಿ. ಜಗನ್ನಾಥ್, ರಮೇಶ್ ಪೂಜಾರಿ, ರಮೇಶ್ ಕೊಡಗರಹಳ್ಳಿ, ಅಂಜಲಿ ಯಶೋಧರ ಪೂಜಾರಿ, ಮಹಿಮಾ ಸತ್ಯ, ಪೂರ್ಣಿಮಾ ರವಿ, ಮಿಲನ್, ಯಶ್ವಿತ್, ಜಿಲ್ಲಾ ಬಿಲ್ಲವ ಸಮಾಜದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕರ್ಕೇರಾ, ಜಿಲ್ಲಾ ಮಹಿಳಾ ಘಟಕದ ಸಂಚಾಲಕಿ ಪೂರ್ಣಿಮಾ ಪ್ರಭಾಕರ್, ಯುವ ಘಟಕದ ಅಧ್ಯಕ್ಷ ವಿನೋದ್ ಪೂಜಾರಿ ಸೇರಿದಂತೆ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.