ADVERTISEMENT

ಕೊಡಗಿನಲ್ಲಿ ನೂರರ ಗಡಿಯಲ್ಲಿದೆ ಅಪರೂಪದ ಸೇವಾಶ್ರಮ

ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದ ಶತಮಾನೋತ್ಸವಕ್ಕೆ ಇನ್ನೊಂದೇ ವರ್ಷ ಬಾಕಿ

ಕೆ.ಎಸ್.ಗಿರೀಶ್
Published 12 ಜನವರಿ 2026, 7:44 IST
Last Updated 12 ಜನವರಿ 2026, 7:44 IST
ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದಲ್ಲಿರುವ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರ
ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದಲ್ಲಿರುವ ಸ್ವಾಮಿ ವಿವೇಕಾನಂದ ಅವರ ಭಾವಚಿತ್ರ   

ಮಡಿಕೇರಿ: ಸ್ವಾಮಿ ವಿವೇಕಾನಂದ ಅವರ ತತ್ವ, ಸಿದ್ದಾಂತಗಳನ್ನು ಪ್ರತಿಪಾದಿಸುವ ಕೊಡಗು ಜಿಲ್ಲೆಯ ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮ ಈಗ ಶತಮಾನೋತ್ಸವದ ಹೊಸ್ತಿಲಲ್ಲಿದೆ. 1927ರಲ್ಲಿ ನಿರ್ಮಲಾನಂದ ಸ್ವಾಮೀಜಿ ಹಾಗೂ ಶಾಂಭವಾನಂದರು ಸ್ಥಾಪಿಸಿದ ಈ ಆಶ್ರಮಕ್ಕೆ 99 ವರ್ಷ ತುಂಬಿದ್ದು, ನಿರಂತರವಾಗಿ ತನ್ನ ಸೇವಾ ಚಟುವಟಿಕೆಗಳನ್ನು ಸಮಾಜಕ್ಕೆ ನೀಡುತ್ತಿದೆ.

ಅಲೋಪತಿ ಪದ್ಧತಿಯ ಆಸ್ಪತ್ರೆ ಹಾಗೂ ಪ್ರಕೃತಿ ಚಿಕಿತ್ಸೆ ನೀಡುವ ನ್ಯಾಚರೋಪತಿ ಮತ್ತು ಯೋಗ ಆಸ್ಪತ್ರೆ ಎರಡನ್ನೂ ಹೊಂದಿರುವ ದಕ್ಷಿಣ ಭಾರತದ ಏಕೈಕ ರಾಮಕೃಷ್ಣಾಶ್ರಮ ಎಂಬ ಹೆಗ್ಗಳಿಕೆಗೆ ಈ ಆಶ್ರಮದ ಪಾತ್ರವಾಗಿದೆ. ಹೀಗಾಗಿ, ಇದು ದೇಶದ ರಾಮಕೃಷ್ಣಾಶ್ರಮಗಳಲ್ಲಿಯೇ ವಿಶಿಷ್ಟ ಸ್ಥಾನ ಪಡೆದಿದೆ.

ಈ ಆಶ್ರಮದ ಮೊದಲ ಅಧ್ಯಕ್ಷರಾಗಿದ್ದ ಸ್ವಾಮಿ ಶಾಂಭವಾನಂದರು ವಿರಾಜಪೇಟೆಯಲ್ಲಿ ಕೊಡಗಿನ ಮೊದಲ ಜೇನು ಕೃಷಿಕರ ಸಹಕಾರ ಸಂಘ ಸ್ಥಾಪಿಸಿದ್ದು, ಇವರನ್ನು ಜೇನು ಕೃಷಿಯ ಆದ್ಯ ಪ್ರವರ್ತಕ ಎಂದೇ ಕರೆಯಲಾಗುತ್ತಿದೆ. ಅಂದು ಕೊಡಗಿನಲ್ಲಿ ವ್ಯಾಪಿಸಿದ್ದ ಮಲೇರಿಯಾ ರೋಗವನ್ನು ಹೋಗಲಾಡಿಸಲು ಸಾಕಷ್ಟು ಕೆಲಸ ಮಾಡಿದ್ದರು.

ADVERTISEMENT

ಇಂತಹ ಸೇವಾಶ್ರಮದ ಬಗ್ಗೆ ತಿಳಿದಿದ್ದ ಮಹಾತ್ಮ ಗಾಂಧೀಜಿ ಅವರು 1934ರಲ್ಲಿ ಹಾಗೂ ವಿನೋಬಾ ಬಾವೆ ಅವರು 1957ರಲ್ಲಿ ಭೇಟಿ ನೀಡಿದ್ದರು ಎಂಬುದು ಈ ಆಶ್ರಮದ ಮಹತ್ವಕ್ಕೆ ಸಾಕ್ಷಿಯಾಗಿದೆ. ಮಹಾತ್ಮ ಗಾಂಧೀಜಿ ಅವರು ತಮ್ಮ ಕೈಬರಹದಲ್ಲಿ ಅಭಿಪ್ರಾಯ ದಾಖಲಿಸಿದ ಡೈರಿಯೂ ಸಹ ಇಲ್ಲಿದೆ.

1927ರಲ್ಲಿ ಸ್ಥಾಪನೆಯಾದ ನಂತರ ಈ ಆಶ್ರಮದ ಪ್ರಾರ್ಥನಾ ಮಂದಿರವು 2008ರವರೆಗೂ ಹೆಂಚಿನ ಚಾವಣಿ ಹೊಂದಿತ್ತು. 2007–08ರಲ್ಲಿ ಆಶ್ರಮದ ಅಧ್ಯಕ್ಷರಾಗಿದ್ದ ಜಗದಾತ್ಮಾನಂದ ಸ್ವಾಮೀಜಿ ಕೊಡಗು ಮತ್ತು ದೇಶದ ಜನರ ಬೆಂಬಲದೊಂದಿಗೆ ಹೆಂಚಿನ ಮನೆಯ ಕಟ್ಟಡ ಕೆಡವಿ ಅದೇ ಜಾಗದಲ್ಲಿ ರಾಮಕೃಷ್ಣ, ಶಾರದಾಮಾತೆ ಮತ್ತು ಸ್ವಾಮಿ ವಿವೇಕಾನಂದರು ಇರುವ ಬೃಹತ್ ಆಲಯ ನಿರ್ಮಿಸಿದರು.

ಪ್ರಸ್ತುತ ಈ ಆಶ್ರಮವು ಯಾವುದೇ ಹೆಚ್ಚಿನ ಪ್ರಚಾರ ಇಲ್ಲದೇ ತನ್ನ ಸೇವಾಕೈಂಕರ್ಯಗಳನ್ನು ಮಾಡುತ್ತಿದೆ. ಹಾಡಿ ಜನರಲ್ಲಿ ಆರೋಗ್ಯದ ಕುರಿತು ಅರಿವು ಮೂಡಿಸುವುದು, ಶುದ್ಧ ಕುಡಿಯುವ ನೀರಿನ ಸಂಪರ್ಕ ನೀಡುವುದು, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಪಠ್ಯಪುಸ್ತಕಗಳನ್ನು ನೀಡುವುದು ಸೇರಿದಂತೆ ಇನ್ನೂ ಅನೇಕ ಬಗೆಯ ಸೇವಾ ಚಟುವಟಿಕೆಗಳನ್ನು ಮಾಡುತ್ತಿದೆ.

ಇಲ್ಲಿರುವ 25 ಹಾಸಿಗೆ ಸಾಮರ್ಥ್ಯದ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆಯಲ್ಲಿ ಎಕ್ಸರೆ, ದಂತ ಚಿಕಿತ್ಸೆ, ಇಸಿಜಿ, ಸ್ಕ್ಯಾನಿಂಗ್, ಫಿಜಿಯೊಥೆರಪಿ ಮೊದಲಾದ ಸೌಲಭ್ಯಗಳಿವೆ. ರೋಗಿಗಳಿಗೆ ಕನಿಷ್ಠ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 25 ಹಾಸಿಗೆ ಸಾಮರ್ಥ್ಯದ ವಿವೇಕಾನಂದ ಆರೋಗ್ಯಧಾಮದಲ್ಲಿ ಪ್ರಕೃತಿ ಮತ್ತು ಯೋಗ ಚಿಕಿತ್ಸೆ ನೀಡಲಾಗುತ್ತಿದೆ.

ಆಶ್ರಮದ ಅಧ್ಯಕ್ಷ ಸ್ವಾಮಿ ಪರಾಹಿತಾನಂದ ಸ್ವಾಮೀಜಿ  ಅವರೊಂದಿಗೆ ಇತರ ಐವರು ಕಿರಿಯ ಸ್ವಾಮೀಜಿಗಳೂ ಇದ್ದಾರೆ. ಆಶ್ರಮದಲ್ಲಿ ರಾಮಕೃಷ್ಣ ಪರಮಹಂಸ, ವಿವೇಕಾನಂದ, ಶಾರದಾಮಾತೆ ಹಾಗೂ ಇತರ ಧಾರ್ಮಿಕ ಪುರುಷರ ಮತ್ತು ಆಧ್ಯಾತ್ಮಿಕತೆಗೆ ಸಂಬಂಧಿಸಿದ ನೂರಾರು ಪುಸ್ತಕಗಳಿವೆ.

ನೂತನ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಶಂಕುಸ್ಥಾಪನೆಯನ್ನು ರಾಮಕೃಷ್ಣ ಮಿಷನ್ನಿನ ಹಿರಿಯ ಉಪಾಧ್ಯಕ್ಷ ಸ್ವಾಮಿ ಸುಹಿತಾನಂದ ಮಹಾರಾಜ್ ಅವರು ನೆರವೇರಿಸಿದ್ದಾರೆ. ಕಟ್ಟಡ ಕಟ್ಟಲು ಧನಸಂಗ್ರಹ ಕಾರ್ಯ ನಡೆಯುತ್ತಿದ್ದು, ದಾನಿಗಳು ಸಹಕರಿಸಬಹುದು ಎಂದು ಆಶ್ರಮ ತಿಳಿಸಿದೆ. ಮತ್ತಷ್ಟು ಮಾಹಿತಿಗೆ https://ponnampet.rkmm.org

ಪೊನ್ನಂಪೇಟೆಯಲ್ಲಿರುವ ರಾಮಕೃಷ್ಣ ಶಾರದಾ ಆಶ್ರಮ
ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದಲ್ಲಿರುವ ರಾಮಕೃಷ್ಣ ಪರಮಹಂಸ ಶಾರದಾ ಮಾತೆ ಸ್ವಾಮಿ ವಿವೇಕಾನಂದ ಅವರ ಚಿತ್ರಗಳು ಹಾಗೂ ಪುತ್ಥಳಿಗಳು
ಆಶ್ರಮದಲ್ಲಿರುವ ಬೃಹತ್ ಗ್ರಂಥಾಲಯ
ಪೊನ್ನಂಪೇಟೆಯಲ್ಲಿರುವ ರಾಮಕೃಷ್ಣ ಸೇವಾಶ್ರಮ ಆಸ್ಪತ್ರೆ
ಗೋಣಿಕೊಪ್ಪಲು ಬಳಿಯ ಪೊನ್ನಂಪೇಟೆ ರಾಮಕೃಷ್ಣ ಶಾರದಾ ಆಶ್ರಮದ ಪ್ರಾರ್ಥನಾ ಮಂದಿರ

ಇಂದು ಬೃಹತ್ ಮೆರವಣಿಗೆ

ಜ. 12ರಂದು ಬೆಳಿಗ್ಗೆ 10 ಗಂಟೆಗೆ ಜೂನಿಯರ್‌ ಕಾಲೇಜಿನಿಂದ ವಿವೇಕಾನಂದರ ಪುತ್ಥಳಿ ಹೊತ್ತ ರಥದ ಮೆರವಣಿಗೆ ಆರಂಭವಾಗಲಿದೆ. ಪಟ್ಟಣದ ಬಹುತೇಕ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದರಲ್ಲಿ ಭಾಗಿಯಾಗಲಿದ್ದು ಆಶ್ರಮದ ತನಕ ಮೆರವಣಿಗೆ ಸಾಗಲಿದೆ. ಬಳಿಕ ಆಶ್ರಮದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ನಿರ್ದೇಶಕ ಕಾರ್ತಿಕ್ ಸರಗೂರು ಮುಖ್ಯ ಭಾಷಣ ಮಾಡಲಿದ್ದಾರೆ. ಆಶ್ರಮದ ಅಧ್ಯಕ್ಷ ಪರಹಿತಾನಂದ ಸ್ವಾಮೀಜಿ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ ಭಾಗವಹಿಸಲಿದ್ದಾರೆ.

‘ಆತ್ಮವಿಶ್ವಾಸದಿಂದ ಮುನ್ನಡೆಯಿರಿ’

ಸ್ವಾಮಿ ವಿವೇಕಾನಂದ ಅವರು ಇಡೀ ಜಗತ್ತಿನ ಯುವಶಕ್ತಿಗೆ ಮಾದರಿಯಾಗಿದ್ದಾರೆ. ತಮ್ಮಲ್ಲಿರುವ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಸಕರಾತ್ಮಕ ಚಟುವಟಿಕೆಗಳಲ್ಲಿ ಯುವಸಮುದಾಯ ತೊಡಗಿಸಿಕೊಳ್ಳಬೇಕು. ಪರಿಶುದ್ಧವಾದ ಜೀವನ ನಡೆಸಿ ಪರರ ಹಿತಕ್ಕಾಗಿ ಸೇವೆ ಸಲ್ಲಿಸಬೇಕು ಪರಹಿತಾನಂದ ಸ್ವಾಮೀಜಿ ಪೊನ್ನಂಪೇಟೆಯ ರಾಮಕೃಷ್ಣ ಶಾರದಾ ಆಶ್ರಮದ ಅಧ್ಯಕ್ಷರು.

ಸ್ವಾಮಿ ವಿವೇಕಾನಂದರ ಆದರ್ಶದಲ್ಲಿ ಯುವ ಸಮುದಾಯ ಮುನ್ನಡೆಬೇಕು. ಮೊಬೈಲ್ ಮಾದಕವಸ್ತುಗಳಿಂದ ಸೇವಾ ಚಟುವಟಿಕೆಗಳೆಡೆಗೆ ಗಮನ ಕೊಡಬೇಕು
-ಸುಕುಮಾರ್, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.