
ಕುಶಾಲನಗರ : ಸಮೀಪದ ಅತ್ತೂರು ಜ್ಞಾನಗಂಗಾ ವಸತಿ ಶಾಲೆಯಲ್ಲಿ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಗಿಲ್ ಯೋಧ ದೇವಂಗೋಡಿ ದೇವಯ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ‘ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಬೇಕು. ಸೈನಿಕರಿಗೆ ಸದಾ ಗೌರವ ಸಲ್ಲಿಸುವುದರ ಜೊತೆಗೆ ಪೋಷಕರು ಹಾಗೂ ಶಿಕ್ಷಕರಿಗೆ ವಿಧೇಯರಾಗುವ ಮೂಲಕ ಉತ್ತಮ ಸಂಸ್ಕಾರ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ವಸತಿ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಟಿ.ಕೆ.ಸುಧೀರ್ ಮಾತನಾಡಿ, ‘ನಾವು ಸರಿ ಇದ್ದರೆ ದೇಶ ಅಭಿವೃದ್ದಿಯಾಗುತ್ತದೆ. ಈ ದೇಶದ ಭವಿಷ್ಯದ ಸತ್ಪ್ರಜೆಗಳಾದ ವಿದ್ಯಾರ್ಥಿಗಳು ಆದರ್ಶ ವ್ಯಕ್ತಿಗಳ ಚರಿತ್ರೆಗಳನ್ನು ಓದುವ ಮೂಲಕ ಸಚ್ಚಾರಿತ್ರ್ಯ ಉಳ್ಳವರಾಗಬೇಕು’ ಎಂದು ಹೇಳಿದರು.
ಶಾಲೆಯ ಕಾರ್ಯದರ್ಶಿ ಬಿ.ಎಸ್.ನಿಂಗಪ್ಪ ಮಾತನಾಡಿ, ‘ಜಾತ್ಯತೀತ ಭಾರತದಲ್ಲಿ ಜೀವಂತವಾಗಿರುವ ಜಾತಿಯ ವ್ಯವಸ್ಥೆಯಿಂದಾಗಿ ಪರಸ್ಪರ ದ್ವೇಷ ಅಸೂಯೆ, ಗಲಾಟೆಗಳು ತಾಂಡವವಾಡುತ್ತಿವೆ. ಇಂದಿನ ವಿದ್ಯಾರ್ಥಿಗಳು ಹಾಗೂ ಯುವಕರು ನೈಜ ಜಾತ್ಯತೀತ ರಾಷ್ಟ್ರ ಕಟ್ಟುವಲ್ಲಿ ಪಣ ತೊಡಗಬೇಕು’ ಎಂದರು.
ಶಾಲೆಯ ಪ್ರಾಂಶುಪಾಲೆ ಸತ್ಯಸುಲೋಚನಾ, ಉಪಪ್ರಾಂಶುಪಾಲ ನಾಗರಾಜು ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳಿಂದ ದೇಶ ಪ್ರೇಮ, ರಾಷ್ಟ್ರೀಯ ಭಾವೈಕ್ಯ ಪ್ರತಿಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿದ್ಯಾರ್ಥಿ ಕುಲದೀಪ್ ಸ್ವಾಗತಿಸಿದರು. ಯಶಿಕಾರಾಜ್ ನಿರೂಪಿಸಿದರು. ಹಿತೇನ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.