
ಕುಶಾಲನಗರ: ಸಮೀಪದ ಮುಳ್ಳುಸೋಗೆ ಪೈಸಾರಿಯಲ್ಲಿ ಜಿಲ್ಲೆಯ ಅರೆಸೇನಾಪಡೆಯ ನಿವೃತ್ತ ಯೋಧರ ಒಕ್ಕೂಟಕ್ಕೆ ಗುರುತಿಸಿರುವ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿರ್ಮಿಸಿರುವ ತಡೆಗೋಡೆಯನ್ನು ತೆರವುಗೊಳಿಸುವಂತೆ ಯೋಧರ ಒಕ್ಕೂಟದ ಪದಾಧಿಕಾರಿಗಳು ಪುರಸಭೆ ಅಧಿಕಾರಿಗೆ ಮನವಿ ಸಲ್ಲಿಸಿದರು.
ಅರೆಸೇನಾಪಡೆಯ ಯೋಧರ ಒಕ್ಕೂಟಕ್ಕೆ ಈ ಪೈಸಾರಿ ಜಾಗವನ್ನು ಮಂಜೂರು ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಅನಿರ್ದಿಷ್ಟ ಅವಧಿ ಪ್ರತಿಭಟನೆ ಹಾಗೂ ಚಳವಳಿ ನಡೆಸುವುದಾಗಿ ಒಕ್ಕೂಟದ ಪದಾಧಿಕಾರಿಗಳು ತಿಳಿಸಿದರು.
‘ಕೊಡಗು ಜಿಲ್ಲೆಯಲ್ಲಿ ಹಾಲಿ ಕರ್ತವ್ಯದಲ್ಲಿ ಇರುವ ಮತ್ತು ನಿವೃತ್ತ ಯೋಧರ ಸಂಖ್ಯೆ ಸುಮಾರು 5 ಸಾವಿರದಷ್ಟಿದ್ದು, ಇದುವರೆಗೂ ಯೋಧರ ಹಿತರಕ್ಷಣೆಗಾಗಿ ಸಂಘವು ಜಾಗವನ್ನು ಕೂಡ ಹೊಂದಲು ಸಾಧ್ಯವಾಗಿಲ್ಲ. ಮಡಿಕೇರಿಯ ಮಹದೇವಪೇಟೆಯಲ್ಲಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ತೆರೆದು ಕಾರ್ಯನಿರ್ವಹಿಸುತ್ತಿದ್ದೇವೆ. ಈಗಾಗಲೇ ಮೃತ ಯೋಧರ ಪತ್ನಿಯರು ಹಾಗೂ ಕುಟುಂಬ ಸದಸ್ಯರ ಸಂಕಷ್ಟಗಳಿಗೆ ನೆರವಾಗುವ ಮೂಲಕ ಆ ಕುಟುಂಬಗಳಿಗೆ ಸರ್ಕಾರದ ಸವಲತ್ತುಗಳ ಮಾಹಿತಿ ನೀಡಲಾಗುತ್ತಿದೆ. ಹಾಗಾಗಿ ಕುಶಾಲನಗರದ ಪುರಸಭಾ ವ್ಯಾಪ್ತಿಯ ಮುಳ್ಳುಸೋಗೆಯಲ್ಲಿ ನಾವುಗಳು ಈಗಾಗಲೇ 60 ಸೆಂಟುಗಳಷ್ಟು ಸರ್ಕಾರದ ಜಾಗವನ್ನು ಗುರುತಿಸಿದ್ದು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ’ ಎಂದು ಅರೆಸೇನಾಪಡೆಯ ಯೋಧರ ಒಕ್ಕೂಟದ ಅಧ್ಯಕ್ಷ ಎಂ.ಜಿ.ಯತೀಶ್, ಉಪಾಧ್ಯಕ್ಷ ಪುಲಿಯಂಡ ದೇವಯ್ಯ ಹಾಗೂ ಸಂಚಾಲಕ ಜಿ.ಕೆ.ದಿನೇಶ ಕುಮಾರ್ ಹೇಳಿದರು.
ಜಿಲ್ಲಾಧಿಕಾರಿಗಳು ಖುದ್ದಾಗಿ ಸ್ಥಳ ಪರಿಶೀಲಿಸಿ ನಮಗೆ ಆ ಭೂಮಿಯನ್ನು ಮಂಜೂರಾತಿ ಮಾಡಿಕೊಡಬೇಕೆಂದು ಯೋಧರು ಆಗ್ರಹಿಸಿದರು. ಒಕ್ಕೂಟದ ಉಪಾಧ್ಯಕ್ಷರಾದ ನಿರ್ದೇಶಕರಾದ ಹರೀಶ್ ಕುಮಾರ್, ಜಿ.ಕೆ. ದಿನೇಶ್ ಕುಮಾರ್, ಬಿ.ಯು.ಲೋಕೇಶ್, ಎನ್.ಎಂ.ಭೀಮಯ್ಯ, ಲೀಲವೇಣಿ, ಗೋಪಾಲಕೃಷ್ಣ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.