ADVERTISEMENT

ನೆಹರೂ ನಗರ: ಪ್ರಮುಖ ರಸ್ತೆಯೇ ಹೊಂಡಮಯ

ವಿರಾಜಪೇಟೆ: ಪಟ್ಟಣ ಪಂಚಾಯಿತಿಯ 7, 8, 10ನೇ ವಾರ್ಡ್ ಒಳಗೊಂಡಿರುವ ಪ್ರದೇಶ

ಹೇಮಂತಕುಮಾರ್ ಎಂ.ಎನ್‌
Published 11 ಜುಲೈ 2020, 5:09 IST
Last Updated 11 ಜುಲೈ 2020, 5:09 IST
ವಿರಾಜಪೇಟೆಯ ನೆಹರೂನಗರದ ಮುಖ್ಯರಸ್ತೆಯ ದುಸ್ಥಿತಿ
ವಿರಾಜಪೇಟೆಯ ನೆಹರೂನಗರದ ಮುಖ್ಯರಸ್ತೆಯ ದುಸ್ಥಿತಿ   

ವಿರಾಜಪೇಟೆ: ಪಟ್ಟಣ ಪಂಚಾಯಿತಿಯ ಮೂರು ಪ್ರಮುಖ ವಾರ್ಡ್‌ಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದ್ದರೂ ಹೊಂಡಗಳಿಂದ ತುಂಬಿಕೊಂಡಿದೆ. ಈ ರಸ್ತೆ ದುರಸ್ತಿ ಕಾಣದೆ ಇರುವುದರಿಂದ ಇಲ್ಲಿನ ನಿವಾಸಿಗಳು ನಿತ್ಯ ಪರದಾಡುತ್ತಿದ್ದಾರೆ.

ಪಟ್ಟಣದ ಬೆಟ್ಟ ಪ್ರದೇಶವಾದ ನೆಹರೂ ನಗರದ ಮುಖ್ಯ ರಸ್ತೆಯ ಸ್ಥಿತಿ ಇದು. ಪಟ್ಟಣದ ಮೊಗರಗಲ್ಲಿಯಲ್ಲಿ ಕವಲೊಡೆದಲ್ಲಿಂದ ಆರಂಭಗೊಳ್ಳುವ ಈ ರಸ್ತೆ ನೆಹರೂ ನಗರದ ಕೊನೆಯ ವರೆಗೂ ಚಾಚಿಕೊಂಡಿದೆ. ಸುಮಾರು 1.5 ಕಿ.ಮೀ ಇರುವ ಈ ರಸ್ತೆ ಅಲ್ಲಲ್ಲಿ ಕಿತ್ತುಹೋಗಿ ಹೊಂಡಗಳು ನಿರ್ಮಾಣವಾಗಿವೆ. ಸುಮಾರು 2 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಈ ಪ್ರದೇಶದಲ್ಲಿ ಪಟ್ಟಣ ಪಂಚಾಯಿತಿಯ ಮೂವರು ಸದಸ್ಯರು ಇದ್ದಾರೆ.

ಸುಮಾರು 700 ಕುಟುಂಬಗಳು ಇಲ್ಲಿ ವಾಸಿಸುತ್ತಿದ್ದು, ಮಹಿಳಾ ಸಮಾಜ, ಅಂಗನವಾಡಿಗಳು, ನ್ಯಾಯಬೆಲೆ ಅಂಗಡಿ, ಸಮುದಾಯಭವನ, ಯುವಕ ಸಂಘ, ದೇವಾಲಯ ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳಿವೆ. ಆದರೆ, ರಸ್ತೆ ಮಾತ್ರ ಅಸಮರ್ಪಕವಾಗಿದೆ.

ADVERTISEMENT

ಇಲ್ಲಿನ ನಿವಾಸಿಗಳ ಪೈಕಿ ಶೇ 90ರಷ್ಟು ಮಂದಿ ಕೂಲಿ ಕಾರ್ಮಿಕರೇ ಆಗಿದ್ದಾರೆ. ಹೊಂಡಗಳಿಂದ ಕೂಡಿರುವ ರಸ್ತೆಯಿಂದಾಗಿ ಬೈಕ್‌ ಅಪಘಾತಗಳೂ ನಡೆದಿವೆ. ಗ್ಯಾಸ್ ಸಿಲಿಂಡರ್ ಸೇರಿದಂತೆ ಅಗತ್ಯವಸ್ತುಗಳ ಸಾಗಾಟಕ್ಕೆ ತೊಂದರೆ ಆಗುತ್ತಿದೆ. ರಸ್ತೆ ಹೊಂಡಮಯವಾಗಿರುವುದರಿಂದ ಆಟೊ ಚಾಲಕರು ಇಲ್ಲಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಬಂದರೂ ದುಪ್ಪಟ್ಟು ಬಾಡಿಗೆ ನೀಡಬೇಕಾಗುತ್ತದೆ. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲೂ ಸಮಸ್ಯೆಯಾಗುತ್ತಿದೆ ಎಂದು ಇಲ್ಲಿನ ನಿವಾಸಿ ಅಗಸ್ಟಿನ್ ಕ್ಸೆವೀಯರ್ ಅಳಲು ತೋಡಿಕೊಂಡರು.

ಸ್ಥಳೀಯ ನಿವಾಸಿ ರವಿ ನಾರಾಯಣ್, ‘ಕಳೆದ ವರ್ಷ ಇಲ್ಲಿನ ಯುವಕರು ಸೇರಿ ರಸ್ತೆ ಹೊಂಡಗಳಿಗೆ ಕಾಂಕ್ರೀಟ್ ಹಾಕಿ ದುರಸ್ತಿ ಮಾಡಿದ್ದರು. ಕಳೆದ ಬಾರಿ ಸುರಿದ ಭಾರಿ ಮಳೆಯಿಂದಾಗಿ ಮತ್ತೆ ರಸ್ತೆ ಹದಗೆಟ್ಟಿದೆ. ಈ ಕುರಿತು ಪಂಚಾಯಿತಿಗೆ ದೂರು ನೀಡಿದರೆ, ರಸ್ತೆ ದುರಸ್ತಿಗೆ ಅನುದಾನ ಬಂದಿದ್ದರೂ ಕೊರೊನಾದಿಂದಾಗಿ ಅನುದಾನ ಬಳಸಲಾಗುತ್ತಿಲ್ಲ. ಜತೆಗೆ ಮಳೆ ಆರಂಭಗೊಂಡಿರುವುದರಿಂದ ದುರಸ್ತಿಕಾರ್ಯ ಕೈಗೊಳ್ಳಲಾಗುವುದಿಲ್ಲ ಎನ್ನುತ್ತಾರೆ. ತಾತ್ಕಾಲಿಕವಾಗಿ ಗುಂಡಿ ಮುಚ್ಚುವ ಕಾರ್ಯವಾದರೂ ಕೈಗೊಳ್ಳಲಿ’ ಎಂದು ಒತ್ತಾಯಿಸಿದರು.

ರಸ್ತೆ ದುರಸ್ತಿಗೆ ಸಂಬಂಧಿಸಿ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಸಮರ್ಪಕ ಉತ್ತರ ನೀಡುತ್ತಿಲ್ಲ. ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸಬೇಕಾದ ಅನಿವಾರ್ಯತೆ ಉಂಟಾಗುತ್ತಿದೆ. 15 ದಿನಗಳೊಳಗೆ ರಸ್ತೆ ದುರಸ್ತಿ ಮಾಡದೆ ಇದ್ದರೆ ಪ್ರತಿಭಟನೆ ನಡೆಸಲಾಗುವುದು ಎಂದು ಸ್ಥಳೀಯ ನಿವಾಸಿ ಡಿ.ಕೆ.ಸೋಮಶೇಖರ್ ಹಾಗೂ ಮತ್ತಿತರರು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.