ADVERTISEMENT

ಕೊಡಗು | ಎಮ್ಮೆಮಾಡು ಗ್ರಾಮದಲ್ಲಿ ಹೆಮ್ಮೆ ಪಡುವ ರಸ್ತೆಗಳಿಲ್ಲ

ಕೊಡಗು ಜಿಲ್ಲೆಯ ಗ್ರಾಮೀಣ ರಸ್ತೆಗಳಿಗೆ ಬೇಕಿದೆ ಕಾಯಕಲ್ಪ

ಸಿ.ಎಸ್.ಸುರೇಶ್
Published 19 ಫೆಬ್ರುವರಿ 2024, 7:08 IST
Last Updated 19 ಫೆಬ್ರುವರಿ 2024, 7:08 IST
ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ರಸ್ತೆಯ ಡಾಮರು ಮಾಯವಾಗಿ ಜಲ್ಲಿ ಕಲ್ಲುಗಳೇ ತುಂಬಿವೆ.
ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ರಸ್ತೆಯ ಡಾಮರು ಮಾಯವಾಗಿ ಜಲ್ಲಿ ಕಲ್ಲುಗಳೇ ತುಂಬಿವೆ.   

ನಾಪೋಕ್ಲು: ಎಮ್ಮೆಮಾಡು ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿದ್ದು, ಇಲ್ಲಿಗೆ ಹೊರ ಜಿಲ್ಲೆ ಮಾತ್ರವಲ್ಲ ಹೊರರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಆದರೆ, ಇಲ್ಲಿಗೆ ತೆರಳುವ ರಸ್ತೆಗಳು ಮಾತ್ರ ಹೆಮ್ಮೆಪ‍ಡುವ ಸ್ಥಿತಿಯಲ್ಲಿ. ತೀರಾ ದುಸ್ಥಿತಿಯಿಂದ ಕೂಡಿವೆ.

ಸುತ್ತಮುತ್ತಲಿನ ಗ್ರಾಮಗಳನ್ನು ಸಂಪರ್ಕಿಸುವ ಸಂಪರ್ಕ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಸಂಚಾರ ದುಸ್ತರವಾಗಿದೆ. ನಾಪೋಕ್ಲು ಭಾಗಮಂಡಲ ಮುಖ್ಯರಸ್ತೆಯಿಂದ ತಿರುವು ಪಡೆದು ಎಮ್ಮೆಮಾಡು ಗ್ರಾಮದತ್ತ ಸಾಗುವ ಕುರುಳಿ ರಸ್ತೆ ಕಾಂಕ್ರೀಟೀಕರಣಗೊಂಡಿದೆ. ಹಾಗೆಯೇ, ಎಮ್ಮೆಮಾಡು ದರ್ಗಾಕ್ಕೆ ತೆರಳುವ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಆದರೆ ಎಮ್ಮೆಮಾಡು ಸುತ್ತಮುತ್ತಲಿನ ಗ್ರಾಮೀಣ ರಸ್ತೆಗಳು ಮಾತ್ರ ಹೊಂಡ- ಗುಂಡಿಗಳಿಂದ ಕೂಡಿದ್ದು ವಾಹನ ಸವಾರರು ಹಿಡಿ ಶಾಪ ಹಾಕುವಂತಾಗಿದೆ.

ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮದ ರಸ್ತೆಯ ದುಸ್ಥಿತಿ.

ಎಮ್ಮೆಮಾಡು ಪ್ರಮುಖ ದರ್ಗಾ ಬಳಿಯ ರಸ್ತೆಗಳೆಲ್ಲ ಗುಂಡಿ ಬಿದ್ದಿದ್ದು ಡಾಂಬರು ಮಾಯವಾಗಿದೆ. ರಸ್ತೆಯಲ್ಲಿ ಜಲ್ಲಿ ಕಲ್ಲುಗಳೆಲ್ಲವೂ ಮೇಲದ್ದು, ವಾಹನ ಸವಾರರಲ್ಲಿ ಭೀತಿ ತರಿಸುವಂತಿವೆ. ಕುರುಳಿ ರಸ್ತೆಯಲ್ಲಿ ಸುಮಾರು 3 ಕಿಲೋ ಮೀಟರ್ ದೂರ ಸಾಗಿ ಬರುವ ಸವಾರರು ಕಾಂಕ್ರೀಟ್ ರಸ್ತೆಯಲ್ಲಿ ಹೆಮ್ಮೆಯಿಂದ ಚಲಿಸಿ ಮುಂದಕ್ಕೆ ಬರುತ್ತಿದ್ದಂತೆ ರಸ್ತೆಗಳೇ ಮಾಯವಾಗಿ ಏಕಾದರೂ ಈ ರಸ್ತೆಯಲ್ಲಿ ಬಂದೆವು ಎಂದು ಹಳಹಳಿಸುವ ಸ್ಥಿತಿ ಇದೆ.

ADVERTISEMENT
ಎಮ್ಮೆಮಾಡು-ಪಡಿಯಾಣಿ ಗ್ರಾಮೀಣ ರಸ್ತೆಯ ದುಸ್ಥಿತಿ.

ಈ ರಸ್ತೆಯಲ್ಲಿ ಹಲವು ಖಾಸಗಿ ವಾಹನಗಳು ಸೇರಿದಂತೆ ಶಾಲಾ ವಾಹನಗಳು ದಿನನಿತ್ಯ ಸಂಚರಿಸುತ್ತಿವೆ. ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಗುಂಡಿ ಬಿದ್ದ ರಸ್ತೆಯಲ್ಲಿ ಸಾಗುವುದು ಸಾಹಸವೇ ಸರಿ. ಎಮ್ಮೆಮಾಡು ಮೂಲಕ ಪಡಿಯಾಣಿ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಎದ್ದು, ಬಿದ್ದು ಸಾಗುತ್ತವೆ. ಶಾಲಾ ವಾಹನಗಳಂತೂ ಗುಂಡಿಯಲ್ಲಿ ಬಿದ್ದು ಸಾಗಿ ಗ್ಯಾರೇಜು ಸೇರುವ ಪರಿಸ್ಥಿತಿ ಬಂದಾಗಿದೆ.

ಗ್ರಾಮೀಣ ರಸ್ತೆಗಳನ್ನು ಶೀಘ್ರ ಅಭಿವೃದ್ಧಿಪಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ‘ಕುರುಳಿ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ದಿಪಡಿಸಲಾಗಿದೆ. ಎಮ್ಮೆಮಾಡು ದರ್ಗಾದವರೆಗೆ ಮುಖ್ಯರಸ್ತೆಯು ಡಾಮರೀಕರಣವಾಗಿದೆ. ದರ್ಗಾ ಸುತ್ತಮುತ್ತಲಿನ ಗುಂಡಿ ಬಿದ್ದ ರಸ್ತೆಗಳನ್ನು ದುರಸ್ಥಿಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು’ ಎಂದು ಗುತ್ತಿಗೆದಾರ ಅಶ್ರಫ್ ಮಾಹಿತಿ ನೀಡಿದರು.

ಪಡಿಯಾಣಿ –ಎಮ್ಮೆಮಾಡು ರಸ್ತೆ ಹದಗೆಟ್ಟಿರುವುದು.
ಕೊಡಗು ಜಿಲ್ಲೆ ಪುಟ್ಟ ಜಿಲ್ಲೆಯಾಗಿದ್ದು ವರ್ಷದ ಹಲವು ತಿಂಗಳು ಮಳೆಯಿಂದ ಕೂಡಿರುತ್ತದೆ. ಈ ಸಂದರ್ಭದಲ್ಲಿ ಗ್ರಾಮೀಣ ರಸ್ತೆಗಳು ಹದಗೆಡುತ್ತಿವೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿಗಾಗಿ ₹ 100 ಕೋಟಿಯನ್ನು ಮೀಸಲಿಡಬೇಕು.
ಡಾ.ಸಣ್ಣುವಂಡ ಕಾವೇರಪ್ಪ ಕೊಡಗು ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ.
ಈ ರಸ್ತೆಯಲ್ಲಿ ಶಾಲಾ ವಾಹನವನ್ನು ಓಡಿಸುವುದು ಸಾಹಸದ ಕೆಲಸವೇ ಸರಿ ವಾರಕ್ಕೊಮ್ಮೆ ವಾಹನ ದುರಸ್ತಿ ಒಳಗಾಗುತ್ತಿದೆ. ರಸ್ತೆಯನ್ನು ಶೀಘ್ರ ದುರಸ್ತಿ ಪಡಿಸಬೇಕು.
ಅರುಣ ಶಾಲಾ ಬಸ್ ವಾಹನ ಚಾಲಕ.
ಎಮ್ಮೆಮಾಡು ದರ್ಗಾ ಸುತ್ತಮುತ್ತಲಿನ ಗುಂಡಿ ಬಿದ್ದ ರಸ್ತೆಗಳನ್ನು ದುರಸ್ತಿಪಡಿಸಲಾಗುವುದು ಹದಗೆಟ್ಟ ರಸ್ತೆಗಳನ್ನು ಮರು ಡಾಮರಿಕರಣ ಮಾಡಲಾಗುವುದು.
ಅಶ್ರಫ್ ಗುತ್ತಿಗೆದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.