ADVERTISEMENT

‘ರಸ್ತೆ ಕಾಮಗಾರಿ ಶೀಘ್ರ ಪೂರ್ಣ’-ಕೆ.ಜಿ.ಬೋಪಯ್ಯ

ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಶಾಸಕ ಕೆ.ಜಿ.ಬೋಪಯ್ಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2021, 16:59 IST
Last Updated 4 ಏಪ್ರಿಲ್ 2021, 16:59 IST
ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿಪೂಜೆ ಮಾಡಿದರು
ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಕೆ.ಜಿ.ಬೋಪಯ್ಯ ಭೂಮಿಪೂಜೆ ಮಾಡಿದರು   

ವಿರಾಜಪೇಟೆ: ‘ಮಳೆಗಾಲ ಆರಂಭ ಆಗುವುದಕ್ಕೂ ಮುಂಚಿತವಾಗಿ ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸಲು ಯತ್ನಿಸಲಾಗುವುದು’ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಹಾಗೂ ಕಾಮಗಾರಿ ಪೂರ್ಣಗೊಂಡ ರಸ್ತೆಗಳನ್ನು ಈಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಾಗೃತರಾಗಿರಬೇಕು. 45 ವರ್ಷ ಮೇಲ್ಪಟ್ಟವರು ಲಸಿಕೆ ಪಡೆದುಕೊಳ್ಳಬೇಕು. ಜತೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

ತೋರಾ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ ಮಳೆ ಹಾನಿ ಪರಿಹಾರದಡಿ ₹12 ಲಕ್ಷ ಅನುದಾನದಲ್ಲಿ ವಿರಾಜಪೇಟೆ-ಕರಡ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಬಳಿಕ ಕೆ.ಜಿ.ಬೋಪಯ್ಯ ಅವರು, ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾರಿಕಾಡು ಕೆಂಬ್ಕೊಲ್ಲಿ ನಿವಾಸಿಗಳಿಗೆ ಕಿರು ನೀರು ಯೋಜನೆಗೆ ಜಿಲ್ಲಾ ಪಂಚಾಯಿತಿಯಿಂದ ₹5 ಲಕ್ಷ ಹಾಗೂ ಗ್ರಾಮ ಪಂಚಾಯಿತಿಯಿಂದ ₹3 ಲಕ್ಷ ಸೇರಿ ಒಟ್ಟು ₹8 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ನೀರಿನ ಘಟಕ ಹಾಗೂ ₹5 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಂಡ ಕೆದಮುಳ್ಳೂರು ಕೊಟ್ಟಚ್ಚಿಯಿಂದ ಬೀಟಿಕಾಡು ರಸ್ತೆ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹಾಗೂ ಅಕ್ರಮ-ಸಕ್ರಮ ಸಮಿತಿಯ ತಾಲ್ಲೂಕು ಅಧ್ಯಕ್ಷ ಗಿರೀಶ್ ಗಣಪತಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶಶಿ ಸುಬ್ರಮಣಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ರಘು ನಾಣಯ್ಯ, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶೀಲಾ, ಉಪಾಧ್ಯಕ್ಷೆ ಮೀನಾಕ್ಷಿ, ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಯಶೋದಾ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಎಂ.ಇ.ಸುರೇಶ್ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.