ADVERTISEMENT

ಸೋಮವಾರಪೇಟೆ| ಹದಗೆಟ್ಟ ಗ್ರಾಮೀಣ ರಸ್ತೆಗಳು; ಜನರ ಪರದಾಟ

ಲೋಕೇಶ್ ಡಿ.ಪಿ
Published 12 ಏಪ್ರಿಲ್ 2023, 11:13 IST
Last Updated 12 ಏಪ್ರಿಲ್ 2023, 11:13 IST
ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮದ ರಸ್ತೆ ಕಿತ್ತು ಹೋಗಿದ್ದು, ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ
ಸೋಮವಾರಪೇಟೆ ಸಮೀಪದ ದೊಡ್ಡಮಳ್ತೆ ಗ್ರಾಮದ ರಸ್ತೆ ಕಿತ್ತು ಹೋಗಿದ್ದು, ಚರಂಡಿ ವ್ಯವಸ್ಥೆ ಕಲ್ಪಿಸಿಲ್ಲ   

ಸೋಮವಾರಪೇಟೆ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇಂದಿಗೂ ರಸ್ತೆ ದುಸ್ಥಿತಿಯಲ್ಲಿದ್ದು, ಜನರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ.

ರಾಜ್ಯ ಹೆದ್ದಾರಿಗೆ ಹೊಂದಿಕೊಂಡಂತೆ ಸ್ವಲ್ಪ ದೂರದವರೆಗೂ ಗ್ರಾಮದ ರಸ್ತೆಗಳನ್ನು ಸರಿಪಡಿಸಿ, ಉಳಿದ ರಸ್ತೆಯನ್ನು ಹಾಗೆಯೇ ಬಿಟ್ಟಿದ್ದು, ಸಂಚಾರಕ್ಕೆ ತೊಡಕಾಗಿದೆ. ಮಳೆ ಬಂದರಂತೂ, ಈ ರಸ್ತೆಗಳಲ್ಲಿ ತಿರುಗಾಡಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಿದ್ದು, ಈ ಭಾಗಕ್ಕೆ ಯಾವುದೇ ಬಾಡಿಗೆ ವಾಹನಗಳು ಬರುವುದಿಲ್ಲ. ಬಂದರೂ, ದುಪ್ಪಟ್ಟು ಬಾಡಿಗೆ ನೀಡಬೇಕಾಗಿದೆ. ಹಲವು ಕಡೆಗಳಲ್ಲಿ ಕಾರ್ಮಿಕರಿದ್ದು, ಹೆಚ್ಚಿನ ಬಾಡಿಗೆ ನೀಡಿ ಹೋಗಲು ಸಾಧ್ಯವಾಗದೆ, ನಡೆದುಕೊಂಡೇ ಮುಖ್ಯ ರಸ್ತೆಗಳನ್ನು ತಲುಪಬೇಕಾಗಿದೆ ಎಂದು ಗ್ರಾಮಸ್ಥರ ದೂರು ನೀಡುತ್ತಾರೆ.

ಕಳೆದೆರಡು ದಶಕದಿಂದ ಐತಿಹಾಸಿಕ ಹೊನ್ನಮ್ಮನ ಕೆರೆಯಿಂದ ಸುತ್ತಮುತ್ತಲ ಗ್ರಾಮೀಣ ಭಾಗಕ್ಕೆ ಸಂಪರ್ಕ ಕಲ್ಪಿಸುವ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ದೊಡ್ಡಮಳ್ತೆ ಹೊನ್ನಮ್ಮನ ಕೆರೆ ಮಾರ್ಗವಾಗಿ ಸುಳಿಮಳ್ತೆ, ದೊಡ್ಡಮಳ್ತೆ, ಮೂಕನ ಕಟ್ಟೆ, ಬಳಗೇರಿ ಬಸವಣ್ಣ ದೇವಾಲಯ ಸಂಪರ್ಕ ರಸ್ತೆಗಳು ತೀರಾ ಹಾಳಾಗಿದ್ದು, ರಸ್ತೆಯ ಡಾಂಬರು ಕಿತ್ತು ಬಂದಿದೆ. ಬಾಡಿಗೆ ವಾಹನಗಳು ಈ ರಸ್ತೆಗಾಗಿ ಬರುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಜನಸಾಮಾನ್ಯರಿಗೆ ತೊಂದರೆ ಆಗಿದೆ. ಬಾಡಿಗೆ ದುಬಾರಿ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

‘ಈ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕುಟುಂಬಗಳು ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೂ, ಸಮಸ್ಯೆ ಪರಿಹಾರವಾಗದಿರುವುದು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ’ ಎಂದು ಗ್ರಾಮದ ಡಿ.ಕೆ. ತಿಮ್ಮಯ್ಯ, ಡಿ.ಎಸ್. ನಿರಂಜನ್ ದೂರಿದರು.‌

‘ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇತಿಹಾಸ ಪ್ರಸಿದ್ಧ ಹೊನ್ನಮ್ಮನ ಕೆರೆಯಿದ್ದು, ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಹಲವಾರು ಪ್ರವಾಸಿಗರು ಬಂದು ಹೋಗುತ್ತಾರೆ. ಆದರೆ, ಇಲ್ಲಿಗೆ ಸಂಪರ್ಕಿಸುವ ರಸ್ತೆಗಳು ಮಾತ್ರ ಗುಂಡಿ ಬಿದ್ದು, ವರ್ಷಗಳು ಕಳೆದಿದ್ದು, ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ, ಸರಿಪಡಿಸಲು ಯಾರೂ ಮುಂದಾಗುತ್ತಿಲ್ಲ’ ಎಂದು ಈ ಭಾಗದ ಗ್ರಾಮಸ್ಥರ ಅಳಲಾಗಿದೆ.

‘ರಸ್ತೆ ಮತ್ತು ಚರಂಡಿ ಅವ್ಯವಸ್ಥೆ ಎರಡು ದಶಕಗಳಿಂದರೂ, ಇಂದಿಗೂ ಸರಿ ಪಡಿಸಿಲ್ಲ. ಹಲವಾರು ದ್ವಿಚಕ್ರ ವಾಹನ ಸವಾರರು ಬೀಳುತ್ತಿದ್ದಾರೆ. ಕೂಡಲೇ ರಸ್ತೆ ಸಮಸ್ಯೆ ಬಗೆಹರಿಸದಿದ್ದಲ್ಲಿ ಗಾಂಧಿ ಪ್ರತಿಮೆ ಎದುರು ಆಹೋರಾತ್ರಿ ಧರಣಿ ನಡೆಸಲಾಗುವುದು. ಇದಕ್ಕೂ ಸ್ಪಂದಿಸದಿದ್ದಲ್ಲಿ ಅನಿವಾರ್ಯವಾಗಿ ಚುನಾವಣಾ ಬಹಿಷ್ಕಾರ ಮಾಡಲಾಗುವುದು’ ಎಂದು ದೊಡ್ಡಮಳ್ತೆ ಗ್ರಾಮದ ಪ್ರಮುಖ ಡಿ.ಆರ್. ಪುಟ್ಟರಾಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.