
ಮಡಿಕೇರಿ: ಕೊಡಗಿನಲ್ಲಿ ಸದ್ಯದಲ್ಲೇ ಕಾರ್ಡಿಯೊ ಪಲ್ಮನರಿ ರಿಸಸಿಟೇಶನ್ (ಸಿಪಿಆರ್) ತರಬೇತಿ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದು ರೋಟರಿ ಜಿಲ್ಲಾ ಗವರ್ನರ್ ಪಿ.ಕೆ.ರಾಮಕೃಷ್ಣ ತಿಳಿಸಿದರು.
ಇದರೊಂದಿಗೆ ಹೆಣ್ಣು ಮಕ್ಕಳಿಗೆ ಗರ್ಭಕೊರಳಿನ ಕ್ಯಾನ್ಸರ್ ತಡೆ ಲಸಿಕೆ ನೀಡಲೂ ನಿರ್ಧರಿಸಲಾಗಿದೆ. ಈಗಾಗಲೆ ಕೆಲವು ವಿದ್ಯಾರ್ಥಿನಿಯರಿಗೆ ನೀಡಲಾಗಿದೆ. ಪೋಷಕರ ಒಪ್ಪಿಗೆ ಪಡೆದೆ ಲಸಿಕೆ ನೀಡಲಾಗುತ್ತಿದೆ. ಇದರಿಂದ ಭವಿಷ್ಯದಲ್ಲಿ ಗರ್ಭಕೊರಳಿನ ಕ್ಯಾನ್ಸರ್ ಬರುವುದಿಲ್ಲ ಎಂದು ಅವರು ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೆ ಮೈಸೂರು ಮತ್ತು ಮಂಗಳೂರು ಆಸ್ಪತ್ರೆಗಳಲ್ಲಿ ತಾಯಿಯ ಎದೆಹಾಲು ಬ್ಯಾಂಕನ್ನು ತೆರೆಯಲಾಗಿದ್ದು, ನೂರಾರು ಮಕ್ಕಳ ಪ್ರಾಣ ಇದರಿಂದ ಉಳಿದಿದೆ ಎಂದರು.
ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಮೊದಲಿಗೆ ಭಾರತದಲ್ಲಿ ರೋಟರಿ ಸಂಸ್ಥೆಯೇ ಪರಿಚಯಿಸಿತು. ಭಾರತದಲ್ಲಿ ಪೋಲಿಯೋ ಪ್ರಕರಣಗಳು ಇಲ್ಲವಾದರೂ, ನೆರೆಯ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ 59 ಪೋಲಿಯೋ ಪ್ರಕರಣಗಳು ದಾಖಲಾಗಿದೆ. ಈ ಹಿನ್ನೆಲೆ ಭಾರತದಲ್ಲಿ ಪೋಲೀಯೋ ಲಸಿಕಾ ಕಾರ್ಯಕ್ರಮ ಮುಂದುರಿಸಲಾಗಿದೆ ಎಂದು ಹೇಳಿದರು.
ರೋಟರಿ ಜಿಲ್ಲಾ ಸಹಾಯಕ ಗವರ್ನರ್ ದಿಲನ್ ಚಂಗಪ್ಪ ಅವರು ಮಾತನಾಡಿ, ಹೆಣ್ಣು ಮಕ್ಕಳಲ್ಲಿನ ‘‘ಗರ್ಭ ಕೊರಳಿನ ಕ್ಯಾನ್ಸರ್’ ತಡೆಗೆ ಪೂರಕವಾಗಿ ರೋಟರಿ ಸಂಸ್ಥೆಯು ವಿವಿಧ ಶಾಲೆಗಳಲ್ಲಿ ಮಕ್ಕಳು ಮತ್ತು ಅವರ ಪೋಷಕರಿಗೆ ಅರಿವು ನೀಡುವ ಕಾರ್ಯಕ್ರಮವನ್ನು ಪ್ರಮುಖವಾಗಿ ಕೈಗೆತ್ತಿಕೊಂಡು ನಡೆಸುತ್ತಿದೆ’ ಎಂದು ತಿಳಿಸಿದರು.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರತ್ನಾಕರ ರೈ ಮಾತನಾಡಿ, ‘ಮೇಕೇರಿ ಮತ್ತು ಕಗ್ಗೋಡ್ಲು ಅಂಗನವಾಡಿ ಕೇಂದ್ರಗಳಿಗೆ ಅಗತ್ಯವಾದ ಪರಿಕರಗಳನ್ನು ಇದೀಗ ವಿತರಿಸಲಾಗುತ್ತಿದೆ, ವಿವಿಧ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಪ್ರೇರಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಶೀಘ್ರದಲ್ಲೆ ಕೃತಕ ಕಾಲು ಜೋಡಣೆ ಶಿಬಿರವನ್ನು ಆಯೋಜಿಸುವ ಉದ್ದೇಶ ಹೊಂದಲಾಗಿದೆ’ ಎಂದು ಹೇಳಿದರು.
ರೊಟರಿ ಮುಖಂಡರಾದ ಬಿ.ಜಿ.ಅನಂತಶಯನ, ಬಿ.ಕೆ.ಕಾರ್ಯಪ್ಪ, ರೋಟರಿ ಪಬ್ಲಿಕ್ ಇಮೇಜ್ ಕಮಿಟಿ ಉಪಾಧ್ಯಕ್ಷ ಎಚ್.ಟಿ.ಅನಿಲ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.