ADVERTISEMENT

‘ನೆರವಿನ ಯೋಜನೆಗಳು ಸತ್ಪಾತ್ರರಿಗೆ ದೊರಕಲಿ’

ರೋಟರಿ ಜಿಲ್ಲೆ 3181 ನ ಮಾಜಿ ಗವರ್ನರ್ ಎಚ್.ಆರ್.ಕೇಶವ್ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 6:13 IST
Last Updated 11 ಜುಲೈ 2025, 6:13 IST
ಮಡಿಕೇರಿಯ ಕೊಡವ ಸಮಾಜ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್‌ನ 2025-26 ನೇ ಸಾಲಿನ ಅಧ್ಯಕ್ಷರಾಗಿ ರತ್ನಾಕರ್ ರೈ ಮತ್ತು ಕಾರ್ಯದರ್ಶಿಯಾಗಿ ಕ್ಯಾರಿ ಕಾರ್ಯಪ್ಪ ಅವರ ಪದಗ್ರಹಣ ಸಮಾರಂಭದಲ್ಲಿ ಮದೆನಾಡಿನ ಯೋಗಪಟು ಬಾಲಕಿ ಸಿಂಚನಾ ಅವರನ್ನು ಗೌರವಿಸಲಾಯಿತು
ಮಡಿಕೇರಿಯ ಕೊಡವ ಸಮಾಜ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್‌ನ 2025-26 ನೇ ಸಾಲಿನ ಅಧ್ಯಕ್ಷರಾಗಿ ರತ್ನಾಕರ್ ರೈ ಮತ್ತು ಕಾರ್ಯದರ್ಶಿಯಾಗಿ ಕ್ಯಾರಿ ಕಾರ್ಯಪ್ಪ ಅವರ ಪದಗ್ರಹಣ ಸಮಾರಂಭದಲ್ಲಿ ಮದೆನಾಡಿನ ಯೋಗಪಟು ಬಾಲಕಿ ಸಿಂಚನಾ ಅವರನ್ನು ಗೌರವಿಸಲಾಯಿತು   

ಮಡಿಕೇರಿ: ರೋಟರಿ ಸಂಸ್ಥೆಗಳು ನೀಡುವ ನೆರವಿನ ಯೋಜನೆಗಳು ಸತ್ಪಾತ್ರರಿಗೆ ದೊರಕುವ ಕಡೆಗೆ ಗಮನ ಹರಿಸಬೇಕು. ಯಾವುದೇ ಯೋಜನೆ ಅಗತ್ಯವುಳ್ಳವರಿಗೆ ದೊರಕದೆ ವ್ಯರ್ಥವಾಗಬಾರದು ಎಂದು ರೋಟರಿ ಜಿಲ್ಲೆ 3181 ನ ಮಾಜಿ ಗವರ್ನರ್ ಎಚ್.ಆರ್.ಕೇಶವ್ ಕಿವಿಮಾತು ಹೇಳಿದರು.

ಇಲ್ಲಿನ ಕೊಡವ ಸಮಾಜ ಸಭಾಂಗಣದಲ್ಲಿ ರೋಟರಿ ಮಿಸ್ಟಿ ಹಿಲ್ಸ್‌ನ 2025-26ನೇ ಸಾಲಿನ ಅಧ್ಯಕ್ಷರಾಗಿ ರತ್ನಾಕರ್ ರೈ ಮತ್ತು ಕಾರ್ಯದರ್ಶಿಯಾಗಿ ಕ್ಯಾರಿ ಕಾರ್ಯಪ್ಪ ಅವರಿಗೆ ಪದಗ್ರಹಣ ನೆರವೇರಿಸಿ ಅವರು ಮಾತನಾಡಿದರು.

ಸಾಮಾಜಿಕ ಸೇವಾ ಸಂಸ್ಥೆಯಾಗಿ ವಿಶ್ವದಲ್ಲಿ ಪ್ರಮುಖ ಸ್ಥಾನ ಪಡೆದಿರುವ ರೋಟರಿ ಸಂಸ್ಥೆಯು ಜನಮಾನಸದಲ್ಲಿ ಸದಾ ಸ್ಮರಣೀಯವಾಗಿರವಂತಹ ವಿನೂತನ ಸೇವಾ ಕಾರ್ಯಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಅವರು ಹೇಳಿದರು.

ADVERTISEMENT

ಮಹಿಳೆಯರ ಸದಸ್ಯತ್ವ ಹೆಚ್ಚಿಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ಗಮನ ನೀಡಬೇಕು ಎಂದು ಅವರು ಸೂಚಿಸಿದರು.

ರೋಟರಿ ವಲಯ 6ರ ಸಹಾಯಕ ಗವರ್ನರ್ ಪಿ.ಎಂ.ಧಿಲನ್ ಚಂಗಪ್ಪ ಅವರು ಪ್ರಮೋದ್ ರೈ ಸಂಪಾದಕತ್ವದಲ್ಲಿ ಪ್ರಕಟಿತ ರೋಟೋ ಮಿಸ್ಟ್ ವಾರ್ತಾ ಸಂಚಿಕೆ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಅವರು, ‘ಮಹಿಳಾ ಸ್ವಾವಲಂಬಿ ಯೋಜನೆ, ಅಂಗನವಾಡಿಗಳಿಗೆ ಕಾಯಕಲ್ಪ ಸೇರಿದಂತೆ ಈ ವರ್ಷದಲ್ಲಿ 11 ಜಿಲ್ಲಾ ಯೋಜನೆಗಳನ್ನು 86 ರೋಟರಿ ಸಂಸ್ಥೆಗಳು ರೋಟರಿ ಜಿಲ್ಲೆಯಾದ್ಯಂತ ಜಾರಿಗೊಳಿಸಲಿವೆ’ ಎಂದು ತಿಳಿಸಿದರು.

ರೋಟರಿಯ ವಲಯ ಸೇನಾನಿ ಕೆ.ಸಿ.ಕಾರ್ಯಪ್ಪ ಮೇಕೇರಿ ಮತ್ತು ಅಪ್ಪಂಗಳ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಮಡಿಕೇರಿಯ ಉದ್ಯಮಿ ಹರೀಶ್ ಕುಮಾರ್ ಸಹಯೋಗದಲ್ಲಿ ನೀಡಲಾದ ಆಟಿಕೆ, ಹಾಸಿಗೆ, ಕುರ್ಚಿ, ಕುಕ್ಕರ್, ತಟ್ಟೆಗಳು, ನೀರಿನ ಘಟಕಗಳನ್ನು ವಿತರಿಸಿದರು.

ರೋಟರಿ ನಿಕಟಪೂರ್ವ ಅಧ್ಯಕ್ಷ ಪೊನ್ನಚ್ಚನ ಮಧುಸೂದನ್, ನಿಕಟಪೂರ್ವ ಕಾರ್ಯದರ್ಶಿ ಕಟ್ಟೆಮನೆ ಸೋನಜಿತ್, ನೂತನ ಕಾರ್ಯದರ್ಶಿ ಕ್ಯಾರಿ ಕಾರ್ಯಪ್ಪ, ರೋಟರಿ ಮಿಸ್ಟಿ ಹಿಲ್ಸ್ ಮುಖಂಡರಾದ ಬಿ.ಜಿ.ಅನಂತಶಯನ, ಎಚ್.ಟಿ.ಅನಿಲ್, ಎ.ಕೆ.ವಿನೋದ್, ಸತೀಶ್ ಸೋಮಣ್ಣ, ರಶ್ಮಿದೀಪಾ, ಡಾ.ಚೇತನ್, ಗಾನಾ ಪ್ರಶಾಂತ್ ಭಾಗವಹಿಸಿದ್ದರು.

ಸಾಧಕರಿಗೆ ಸನ್ಮಾನ ಯೋಗಪಟು ಮದೆನಾಡಿನ ಬಾಲಕಿ ಸಿಂಚನಾ ಹಾಗೂ ರಾಜ್ಯಕ್ಕೇ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಮಡಿಕೇರಿಯ ಎಂ.ಎನ್.ತನ್ಮಯಿ ಅವರನ್ನು ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ರೋಟರಿ ಜಿಲ್ಲಾ ಮಾಜಿ ಗವರ್ನರ್ ಎಚ್.ಆರ್.ಕೇಶವ್ ಗೌರವಿಸಿದರು. ತನ್ಮಯಿ ತಂದೆ ಎಂ.ಎ.ನಿರಂಜನ್ ಸಿಂಚನಾ ತಂದೆ ಕೀರ್ತಿಕುಮಾರ್ ಮತ್ತು ತಾಯಿ ರೇಣುಕಾ ಈ ವೇಳೆ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.