ADVERTISEMENT

ಕಾಫಿ ನಾಡಿನಾದ್ಯಂತ ಶಾಂತಿದೂತನಿಗೆ ನಮನ

ಎಲ್ಲಾ ಚರ್ಚ್‌ಗಳಲ್ಲೂ ವಿಶೇಷ ಆರಾಧನೆ, ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 6:39 IST
Last Updated 26 ಡಿಸೆಂಬರ್ 2025, 6:39 IST
ಮಡಿಕೇರಿಯ ಸಂತ ಮೈಕಲರ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ಗುರುವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೂರಾರು ಮಂದಿ ಕಣ್ತುಂಬಿಕೊಂಡರು
ಮಡಿಕೇರಿಯ ಸಂತ ಮೈಕಲರ ಚರ್ಚ್‌ನಲ್ಲಿ ಕ್ರಿಸ್‌ಮಸ್‌ ಪ್ರಯುಕ್ತ ಗುರುವಾರ ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೂರಾರು ಮಂದಿ ಕಣ್ತುಂಬಿಕೊಂಡರು   

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಗುರುವಾರ ಸಡಗರ, ಸಂಭ್ರಮದಿಂದ ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಾಯಿತು.

ಕ್ರೈಸ್ತರು ಶ್ರದ್ಧಾಭಕ್ತಿಯಿಂದ ಏಸುವನ್ನು ಆರಾಧಿಸಿದರು. ಕಳೆದ ಹಲವು ದಿನಗಳಿಂದ ಉಪವಾಸ ಹಾಗೂ ಮತ್ತಿತ್ತರ ಧಾರ್ಮಿಕ ಕ್ರಿಯೆಗಳ ಮೂಲಕ ಹಬ್ಬಕ್ಕೆ ಮುನ್ನುಡಿ ಬರೆದಿದ್ದರು. ಅಂತಿಮವಾಗಿ ಗುರುವಾರ ಕ್ರಿಸ್‌ಮಸ್‌ ದಿನ ಭಕ್ತಿಭಾವದ ಪರಾಕಾಷ್ಠೆ ಮೆರೆದರು.

ಇಲ್ಲಿನ ಸಂತ ಮೈಕಲರ ಚರ್ಚ್, ಶಾಂತಿ ಚರ್ಚ್ ಸೇರಿದಂತೆ ಎಲ್ಲ ಚರ್ಚ್‌ಗಳಲ್ಲೂ ವಿಶೇಷ ಪ್ರಾರ್ಥನೆಗಳು ಜರುಗಿದವು. ಸಂತ ಮೈಕಲರ ಚರ್ಚ್‌ನಲ್ಲಿ ಬುಧವಾರ ರಾತ್ರಿಯಿಂದಲೇ ಜನಸಾಗರವೇ ಸೇರತೊಡಗಿತು. ರಾತ್ರಿ 12 ಗಂಟೆಯ ನಂತರ ಏಸುವಿಗೆ ಭಕ್ತಿಭಾವದಿಂದ ನಮಿಸಿದರು. ಗೋದಲಿಯಲ್ಲಿ ಬಾಲ ಏಸುವಿನ ಪ್ರತಿಕೃತಿಯನ್ನಿರಿಸಿ ಪ್ರಾರ್ಥಿಸಲಾಯಿತು. ಪರಸ್ಪರ ಹಬ್ಬದ ಶುಭಾಶಯ ಕೋರಿದರು.

ADVERTISEMENT

ಗುರುವಾರ ದಿನವಡೀ ನಿಗದಿತ ಸಮಯಗಳಲ್ಲಿ ಸಂತ ಮೈಕಲರ ಚರ್ಚ್ ಹಾಗೂ ಶಾಂತಿ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆಗಳು ಜರುಗಿದವು. ಎಲ್ಲ ಚರ್ಚ್‌ಗಳ ಧರ್ಮಗುರುಗಳು ಶಾಂತಿ ಸಂದೇಶ ನೀಡಿದರು.

ಮತ್ತೊಂದೆಡೆ, ಕ್ರೈಸ್ತರು ಮನೆ ಮನೆಗಳಲ್ಲಿ ಹಬ್ಬ ಆಚರಿಸಿದರು. ಮೋಂಬತ್ತಿ ಹೊತ್ತಿಸಿ ಪ್ರಾರ್ಥಿಸಿದರು. ವಿಶೇಷ ತಿನಿಸುಗಳನ್ನು ತಯಾರಿಸಿ ಪರಸ್ಪರ ಹಂಚಿಕೊಂಡರು. ಸ್ನೇಹಿತರಿಗೆ ಕೇಕ್ ಹಂಚಿ ಶುಭ ಕೋರಿದರು.

ಸುಂಟಿಕೊಪ್ಪ, ಕುಶಾಲನಗರ, ಸೋಮವಾರಪೇಟೆ, ವಿರಾಜಪೇಟೆ, ಗೋಣಿಕೊಪ್ಪಲು, ಸಿದ್ದಾಪುರ ಸೇರಿದಂತೆ ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಪ್ರಯುಕ್ತ ವಿಶೇಷ ಪ್ರಾರ್ಥನೆಗಳು ನಡೆದವು. ಕ್ರೈಸ್ತರು ತಮ್ಮ ಮನೆಗಳಲ್ಲಿ ಕೊಟ್ಟಿಗೆಯನ್ನು ನಿರ್ಮಿಸಿ ಅದರಲ್ಲಿ ಬಾಲ ಏಸುವಿನ ಮೂರ್ತಿ ಮಲಗಿಸಿ ಪ್ರಾರ್ಥಿಸಿದರು.

ಮಡಿಕೇರಿಯ ಸಂತ ಮೈಕಲರ ಚರ್ಚ್‌ನಲ್ಲಿ ಕ್ರಿಸ್‌ಮಸ್ ಪ್ರಯುಕ್ತ ಗುರುವಾರ ರಾತ್ರಿ ವೈವಿಧ್ಯಮಯವಾದ ಕಾರ್ಯಕ್ರಮಗಳು ಜರುಗಿದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.