ಸುಂಟಿಕೊಪ್ಪ: ಸುಂಟಿಕೊಪ್ಪ ಗ್ರೇಡ್-1 ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕರು ತಮ್ಮ ಸೇವೆಯ ಅನುಮೋದನೆಗಾಗಿ ಹಾಗೂ ಕನಿಷ್ಠ ವೇತನಕ್ಕಾಗಿ ಆಗ್ರಹಿಸಿ ಬುಧವಾರ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಸಾಂಕೇತಿಕವಾಗಿ ಧರಣಿ ನಡೆಸಿದರು.
ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಅಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಸರ್ಕಾರದಿಂದ ಕಳೆದ ಹಲವು ತಿಂಗಳುಗಳ ಹಿಂದೆಯೇ ಪೌರಕಾರ್ಮಿಕರ ಸೇವೆ ಅನುಮೋದನೆ ಗೊಳಿಸುವಂತೆ ಸಿಇಒ ಅವರಿಗೆ ಆದೇಶ ಬಂದಿದೆ. ಆದರೆ ಅನುಮೋದನೆಗೆ ಸಹಿ ಮಾಡಬೇಕಾದ ಸಿಇಒ ನಿರ್ಲಕ್ಷ್ಯ ತೋರಿ, ಸಹಿ ಮಾಡದೆ, ತನಗೆ ಸಂಬಂಧವೇ ಇಲ್ಲವೆಂಬಂತೆ ಬೆಂಗಳೂರು ಕಚೇರಿಗೆ ಕಳುಹಿಸಿರುವುದು ಕಾರ್ಮಿಕ ವರ್ಗಕ್ಕೆ ಮಾಡಿದ ದೊಡ್ಡ ಅನ್ಯಾಯ ಎಂದು ಆರೋಪಿಸಿದರು.
ಸೆ. 21ರ ಒಳಗಾಗಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಮಿಕರಿಗೆ ಅನುಮೋದನೆ ಮಾಡಿಕೊಡದಿದ್ದರೆ ಸೆ.22ನೇ ಸೋಮವಾರ ಬೆಳಿಗ್ಗೆ 5 ಗಂಟೆಯಿಂದ ಸಂಜೆ 5ರವರೆಗೆ ಒಂದು ದಿನ ಸಾಂಕೇತಿಕವಾದ ಧರಣಿ ನಡೆಸುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲಾಗುವುದು ಎಂದು ಅವರು ತಿಳಿಸಿದರು.
ಅಲ್ಲದೇ, ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯಿತಿಯ ಕಾರ್ಮಿಕರಿಗೆ ಅನುಮೋದನೆ ನೀಡಬೇಕು. ಕಾರ್ಮಿಕರಿಗೆ ಕನಿಷ್ಠ ವೇತನ ನೀಡಬೇಕು. ಸೂರು ಇಲ್ಲದವರಿಗೆ ಸೂರು ಒದಗಿಸುವ ಮೂಲಕ ಅವರ ಬದುಕನ್ನು ಹಸನಾಗಿಸಬೇಕು. ದಾಖಲೆ ಇಲ್ಲದ ಜಾಗಗಳಿಗೆ ದಾಖಲೆ ಒದಗಿಸಿಕೊಡುವ ಮೂಲಕ ಹಕ್ಕುಪತ್ರಗಳನ್ನು ವಿತರಿಸುವಂತೆ ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಕಾರ್ಮಿಕ ವೀರಭದ್ರ ಮಾತನಾಡಿ, ಸೆ. 22ರಂದು ನಡೆಯಲಿರುವ ಕಾರ್ಮಿಕರ ಧರಣಿಯ ಕಾರಣಕ್ಕೆ ಅಂದು ಸ್ವಚ್ಛತಾ ಕಾರ್ಯ ಅಥವಾ ನೀರು ಬಿಡುವ ಕೆಲಸ ಸೇರಿ ಎಲ್ಲ ಕೆಲಸ ಸ್ಥಗಿತಗೊಳಿಸಲಾಗುವುದು. ಅಂದು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದರು.
ಒಂದು ವೇಳೆ ಇದಕ್ಕೂ ಸಿಇಒ ನಿರ್ಲಕ್ಷ್ಯ ತೋರಿದ್ದಲ್ಲಿ ಮುಂದಿನ ದಿನಗಳಲ್ಲಿ ಅನಿರ್ದಿಷ್ಟಾವಧಿಯವರೆಗೆ ಎಲ್ಲ ಕೆಲಸ ಸ್ಥಗಿತಗೊಳಿಸಿ, ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಧರಣಿ ವೇಳೆ, ರಂಗಸ್ವಾಮಿ, ಗಾಯತ್ರಿ, ಮಣಿಕಂಠ, ಮುನಿಸ್ವಾಮಿ, ರಾಮಚಂದ್ರ, ವಿಶ್ವ, ರವಿ, ರಾಜ, ಮುರುಗೇಶ್, ರಮೇಶ, ಸಣ್ಣ ಉಪಸ್ಥಿತರಿದ್ದರು.
ಸರ್ಕಾರದಿಂದ ಬಂದಿರುವ ಆದೇಶ ಪರಿಶೀಲಿಸಿ ಮತ್ತೊಮ್ಮೆ ಪ್ರಸ್ತಾವನೆಗೆ ಸರ್ಕಾರಕ್ಕೆ ಕಳುಹಿಸಲಾಗಿದೆ. ಕೆಲವು ನಿಯಮಗಳನ್ನು ಪಾಲಿಸಬೇಕಾಗಿರುವುದರಿಂದ ಸರ್ಕಾರದ ನಿರ್ದೇಶನ ಬಂದ ಕೂಡಲೇ ಅನುಮೋದನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಆನಂದ ಪ್ರಕಾಶ ಮೀನಾ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.