
ಮಡಿಕೇರಿ: ಸರ್ವಜ್ಞ ಅವರ ತ್ರಿಪದಿಗಳನ್ನು ಎಲ್ಲ ಭಾಷೆಗಳಿಗೂ ಭಾಷಾಂತರ ಮಾಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕು ಎಂದು ಕುಶಾಲನಗರ ಅನುಗ್ರಹ ಪದವಿ ಕಾಲೇಜಿನ ಪ್ರಾಧ್ಯಾಪಕರಾದ ಲೀಲಾಕುಮಾರಿ ತೊಡಿಕಾನ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ನಗರದ ಗಾಂಧಿ ಭವನದಲ್ಲಿ ಶುಕ್ರವಾರ ನಡೆದ ‘ಕವಿ ಸರ್ವಜ್ಞ ಜಯಂತಿ’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ತ್ರಿಪದಿಗಳ ಬ್ರಹ್ಮ, ಚಕ್ರವರ್ತಿ ಎಂಬ ಬಿರುದು ಪಡೆದಿರುವ ಸರ್ವಜ್ಞ ಅವರು ಶ್ರೇಷ್ಠ ದಾರ್ಶನಿಕ, ಮಹಾನ್ ಮಾನವತಾವಾದಿಯಾಗಿದ್ದರು. ಕನ್ನಡ ಸಾಹಿತ್ಯ ಲೋಕದಲ್ಲಿ ಮೂರು ಸಾಲಿನಲ್ಲಿ ಪದ್ಯಗಳನ್ನು ರಚಿಸುವ ಮೂಲಕ ಪ್ರತಿಯೊಬ್ಬರಿಗೂ ಅರ್ಥವಾಗುವಂತೆ ಬರೆದಿರುವುದು ಶ್ಲಾಘನೀಯ ಎಂದರು.
ಸಾಮಾಜಿಕ ವಿಮರ್ಶೆ, ಜೀವನಾನುಭವ, ಬದುಕಿನ ಸತ್ಯಗಳನ್ನು ಸರಳವಾಗಿ ತ್ರಿಪದಿಗಳ ಮೂಲಕ ಸರ್ವಜ್ಞ ಅವರು ವಿವರಿಸಿದ್ದಾರೆ ಎಂದು ಅವರು ಹೇಳಿದರು.
ಸಮಾಜದಲ್ಲಿನ ಅಂಕುಡೊಂಕುಗಳನ್ನು ತ್ರಿಪದಿಗಳ ಮೂಲಕ ಬರೆದು ಸ್ವಸ್ಥ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅವರ ತ್ರಿಪದಿಗಳಲ್ಲಿ ವ್ಯಂಗ್ಯ, ವಿಡಂಬನೆ, ವಿಮರ್ಶೆ ಕಾಣಬಹುದು ಎಂದರು.
ಸರ್ವಜ್ಞ ಅವರ ತ್ರಿಪದಿಗಳಲ್ಲಿ ಸತ್ಯ, ಧರ್ಮ ಹಾಗೂ ನ್ಯಾಯನಿಷ್ಠೆ ಕಾಣಬಹುದಾಗಿದೆ. ಮೂರು ಸಾಲಿನ ತ್ರಿಪದಿಗಳು ಮೂರು ಪುಟಗಳಷ್ಟು ವಿವರವನ್ನು ಕೊಡುವಂತಿವೆ. ಅಂತಹ ಚಿಂತನೆಯನ್ನು ತ್ರಿಪದಿಗಳಲ್ಲಿ ವರ್ಣಿಸಲಾಗಿದೆ ಎಂದರು.
ಸರ್ವಜ್ಞ ಅವರ ತ್ರಿಪದಿಗಳು ಪ್ರಸ್ತುತ ಸಮಾಜಕ್ಕೆ ದಿವ್ಯ ಔಷಧಿಯಾಗಿದೆ. ಆತ್ಮವಿಮರ್ಶೆ, ಸಾಮಾಜಿಕ ಚಿಂತನೆ, ಸಮಾಜ ಸುಧಾರಣೆಯತ್ತ ತ್ರಿಪದಿಗಳು ಬೆಳಕನ್ನು ಚೆಲ್ಲುತ್ತವೆ. ಕವಿ ಸರ್ವಜ್ಞ ಅವರು ದಾರ್ಶನಿಕ, ತತ್ವಜ್ಞಾನಿ, ವಾಸ್ತವವಾಗಿ ತ್ರಿಪದಿಗಳನ್ನು ರಚಿಸಿದ್ದಾರೆ ಎಂದು ಅವರು ವಿವರಿಸಿದರು.
ಕಲಾವತಿ ಮತ್ತು ತಂಡದವರು ನಾಡಗೀತೆ ಹಾಡಿದರು.
ಕುಲಾಲ, ಕುಂಬಾರ ಮಹಿಳಾ ಸಂಘದ ಅಧ್ಯಕ್ಷೆ ಕಾಂತಿಮಣಿ, ಚಂದ್ರಶೇಖರ್ ಕುಲಾಲ, ಗಿಡ್ಡಪ್ಪ, ಕನ್ನಡ ಮತ್ತು ಸಂಸ್ಖೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಸುಂಟಿಕೊಪ್ಪ ಪಿಡಿಒ ವಿ.ಜಿ.ಲೋಕೇಶ್ ಭಾಗವಹಿಸಿದ್ದರು.
ಜಯಂತಿ ವೇಳೆ ಕ್ರೀಡಾಕೂಟ ಆಯೋಜಿಸಿ
ಕುಲಾಲ ಕುಂಬಾರ ಸಂಘದ ಸ್ಥಾಪಕ ಅಧ್ಯಕ್ಷೆ ಮುತ್ತಮ್ಮ ಮಾತನಾಡಿ ‘ಕವಿ ಸರ್ವಜ್ಞ ಜಯಂತಿ ವೇಳೆ ಕುಲಾಲ ಕುಂಬಾರ ಸಂಘದವರು ಸಾಂಸ್ಕೃತಿಕ ಕ್ರೀಡಾಕೂಟವನ್ನು ಆಯೋಜಿಸಬೇಕು. ಇದಕ್ಕೆ ಜಿಲ್ಲಾಡಳಿತದ ಸಹಕಾರ ಅತ್ಯಗತ್ಯ’ ಎಂದು ತಿಳಿಸಿದರು. ಕುಲಾಲ ಕುಂಬಾರ ಸಂಘದ ಮಾಜಿ ಅಧ್ಯಕ್ಷ ಎಂ.ಡಿ.ನಾಣಯ್ಯ ಮಾತನಾಡಿ ‘ಕವಿ ಸರ್ವಜ್ಞರ ಜಯಂತಿಯನ್ನು ಪ್ರತಿವರ್ಷ ಆಚರಿಸಿಕೊಂಡು ಬರಲಾಗುತ್ತಿದ್ದು ಸರ್ವಜ್ಞರ ಹೆಸರಿನಲ್ಲಿ ಎಲ್ಲರೂ ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.
ಕುಲಾಲ ಕುಂಬಾರ ಸಂಘದ ಕಾರ್ಯದರ್ಶಿ ಅರುಣ್ ಕುಮಾರ್ ಕೂಡಿಗೆ ಮಾತನಾಡಿ ಸಾಲ ಕೊಳ್ಳುವಾಗ ಹೆಜ್ಜೇನು ಸವಿದಂತೆ ಸಾಲ ನೀಡುವಾಗ ಹೆಜ್ಜೇನು ಕಡಿದಂತೆ ಎಂದು ವಿವರಿಸಿದ್ದಾರೆ ಎಂದು ಹೇಳಿದರು. ಕುಲಾಲ ಕುಂಬಾರ ಸಂಘದ ಜಿಲ್ಲಾ ಅಧ್ಯಕ್ಷ ಕೆ.ಕುಶಾಲಪ್ಪ ಮೂಲ್ಯ ಮಾತನಾಡಿ ‘ಕವಿ ಸರ್ವಜ್ಞ ಅವರು ಹಾವೇರಿ ಜಿಲ್ಲೆಯ ಹಿರೆಕೆರೂರು ತಾಲ್ಲೂಕು ಅಂಬಲೂರು ಗ್ರಾಮದಲ್ಲಿ ಜನಿಸಿ ಕನ್ನಡ ಭಾಷೆಯಲ್ಲಿ ತ್ರಿಪದಿಗಳನ್ನು ರಚಿಸುವ ಮೂಲಕ ಎಲ್ಲರಿಗೂ ಅರ್ಥವಾಗುವಂತೆ ವಿವರಿಸಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.