
ಕುಶಾಲನಗರ: ಇಲ್ಲಿನ 4ನೇ ಬಡಾವಣೆಯ ಕೆ.ಎಚ್.ಬಿ.ಕಾಲೊನಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬುಧವಾರ ಷಷ್ಠಿ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೆಳಿಗ್ಗೆಯಿಂದಲೇ ದೇವಾಲಯದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ಅವರ ನೇತೃತ್ವದಲ್ಲಿ ಅಭಿಷೇಕ, ಪುಷ್ಪ ಅಲಂಕಾರ, ವಸ್ತ್ರಾಲಂಕಾರ, ಷಷ್ಠಿಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಸೇರಿದಂತೆ
ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಸುಬ್ರಹ್ಮಣ್ಯ ಸ್ವಾಮಿಯನ್ನು ವಿವಿಧ ಪುಷ್ಪಗಳಿಂದ ಶೃಂಗರಿಸಲಾಗಿತ್ತು. ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಮಹಿಳೆಯರು ಸಾಲಿನಲ್ಲಿ ತೆರಳಿ ಅಶ್ವತ್ಥ ಕಟ್ಟೆಯಲ್ಲಿರುವ ನಾಗದೇವರಿಗೆ ಹಾಲು ಮತ್ತು ಹಣ್ಣು ಎರೆದು ಪೂಜೆ ಸಲ್ಲಿಸಿದರು. ಸಮಿತಿಯಿಂದ ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ 6ಕ್ಕೆ ಅಲಂಕೃತ ಭವ್ಯಮಂಟಪದಲ್ಲಿ ಮಂಗಳವಾದ್ಯ ಮತ್ತು ಕಲಾ ತಂಡದೊಂದಿಗೆ ಸ್ವಾಮಿಯ ಉತ್ಸವವು ಹಾರಂಗಿ ಕಾಲೊನಿ, ಜನತಾ ಕಾಲೊನಿ, ಮುಳ್ಳುಸೋಗೆ, ರಥಬೀದಿ, ಬೈಚನಹಳ್ಳಿ ಮುಖಾಂತರ ಸಾಗಿ ಸನ್ನಿಧಿಗೆ ಹಿಂತಿರುಗಿತು.
ಅಶ್ವತ್ಥಕಟ್ಟೆಯಲ್ಲಿ ಪೂಜೆ : ಪಟ್ಟಣದ ಹಳೆಯ ಮಾರುಕಟ್ಟೆ ಬಳಿ ಇರುವ ನಾಗದೇವತೆ ಮೂರ್ತಿಗೆ ದೇವಸ್ತಾನ ಸಮಿತಿ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಭಕ್ತರಿಗೆ ಅನ್ನದಾನ ವ್ಯವಸ್ಥೆ ಕಲ್ಪಿಸಲಾಗಿತ್ತು.
ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಆರ್.ಚಿಕ್ಕೇಗೌಡ, ಗೌರವಾಧ್ಯಕ್ಷರಾದ ಎಂ.ಎಸ್.ಮೊಗಣ್ಣೇಗೌಡ, ಎಂ.ಕೆ.ಹನುಮರಾಜ್, ಉಪಾಧ್ಯಕ್ಷರಾದ ನಂಜುಂಡಸ್ವಾಮಿ, ಬಿ.ಎ.ಗಂಗಾಧರ್,
ಪ್ರಧಾನ ಕಾರ್ಯದರ್ಶಿ ಎಚ್.ಎಂ.ಮಧುಸೂದನ್, ಸಹ ಕಾರ್ಯದರ್ಶಿ ಎಚ್.ಡಿ.ಶಿವಾಜಿರಾವ್, ಎಂ.ಡಿ.ನಾಗೇಶ್, ಖಜಾಂಚಿ ಟಿ.ಜೆ.ರಾಜು, ನಿರ್ದೇಶಕರಾದ ಎ.ಎನ್.ರಮೇಶ್, ಕೆ.ವಾಮನ ಭಂಡಾರಿ, ಡಿ.ಕೆ.ರೇಣುಕುಮಾರ್, ಜೆ.ಕೃಷ್ಣೇಗೌಡ, ಎಂ.ಮುರಳಿ, ಪಿ.ಕಾರ್ತಿಶನ್, ವಿ.ಎನ್.ಉಮಾಶಂಕರ್, ಟಿ.ಡಿ.ಯಶೋಧಮ್ಮ, ಎಂ.ಪಾರ್ವತಿ, ಸುಚಿತ್ರಾತಮ್ಮಯ್ಯ, ಕಾನೂನು ಸಲಹೆಗಾರ ಎಸ್.ಕೆ.ಮಂಜುನಾಥ್ ಪಾಲ್ಗೊಂಡಿದ್ದರು.