ADVERTISEMENT

ಶನಿವಾರಸಂತೆ ರಾಮಮಂದಿರದಲ್ಲಿ ಇಂದು ರಾಮೋತ್ಸವ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 7:54 IST
Last Updated 6 ಏಪ್ರಿಲ್ 2025, 7:54 IST
ಶನಿವಾರಸಂತೆ ಮುಖ್ಯ ರಸ್ತೆಯಲ್ಲಿರುವ 60 ವರ್ಷದ ಇತಿಹಾಸವುಳ್ಳ ಶ್ರೀ ರಾಮಮಂದಿರ
ಶನಿವಾರಸಂತೆ ಮುಖ್ಯ ರಸ್ತೆಯಲ್ಲಿರುವ 60 ವರ್ಷದ ಇತಿಹಾಸವುಳ್ಳ ಶ್ರೀ ರಾಮಮಂದಿರ   

ಶನಿವಾರಸಂತೆ: ಇಲ್ಲಿನ ಮುಖ್ಯ ರಸ್ತೆಯಲ್ಲಿರುವ 60 ವರ್ಷದ ಇತಿಹಾಸವುಳ್ಳ ಶ್ರೀ ರಾಮಮಂದಿರದಲ್ಲಿ ಭಾನುವಾರ ರಾಮೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಶನಿವಾರಸಂತೆಯ ಕುರುಹಿನ ಶೆಟ್ಟಿ ಸಮಾಜದವರು ಒಂದು ಪುಟ್ಟ ಮನೆಯಲ್ಲಿ ಶ್ರೀರಾಮಚಂದ್ರನ ಚಿತ್ರವನ್ನಿಟ್ಟು ಭಜನೆ ಪ್ರಾರಂಭಿಸಿದರು. ಅಂದಿನ ಹಿರಿಯರು ಎಲ್ಲರೂ ಸೇರಿ ಸಮಯ ಸಿಕ್ಕಾಗಲ್ಲ ಸಂಜೆ ಹೊತ್ತು ಭಜನೆ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಭಗವದ್ಗೀತೆ ಪ್ರವಚನ ಹಾಗೂ ರಾಮಾಯಣ, ಮಹಾಭಾರತದ ಪ್ರವಚನವನ್ನು ಹಿರಿಯರು ಬೋಧಿಸತೊಡಗಿದರು. ನಂತರ, ಅಲ್ಲಿ ಒಂದು ರಾಮನ ಮಂದಿರವನ್ನು ಸ್ಥಾಪನೆ ಮಾಡುವ ನಿರ್ಧಾರಕ್ಕೆ ಬಂದರು.

ಅಂದಿನ ಸ್ವತಂತ್ರ್ಯ ಹೋರಾಟಗಾರ ಶಾಂತವೀರಪ್ಪನವರು ಆ ಸ್ಥಳದಲ್ಲಿ ಗರ್ಭಗುಡಿಯನ್ನು ಸ್ಥಾಪನೆ ಮಾಡಿ ಶ್ರೀರಾಮಚಂದ್ರ, ಲಕ್ಷ್ಮಣ, ಸೀತೆ ಮತ್ತು ಆಂಜನೇಯನ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ನಂತರ, ಶನಿವಾರಸಂತೆ ಸುತ್ತಮುತ್ತಲಿನ ಗ್ರಾಮದ ಅನೇಕ ಭಕ್ತಾದಿಗಳು ಶ್ರೀರಾಮ ಮಂದಿರಕ್ಕೆ ಆಗಮಿಸಿ ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಲು ಪ್ರಾರ್ಥನೆಯನ್ನು ಮಾಡಿಕೊಂಡು ಹೋಗುತ್ತಿದ್ದರು. ನಂತರದ ದಿನಗಳಲ್ಲಿ ಶ್ರೀರಾಮ ಮಂದಿರ ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಾ ಬಂತು. ಕರುಹಿನಶೆಟ್ಟಿ ಸಮಾಜದ ಪ್ರಮುಖ ಮುಖಂಡರೆಲ್ಲರೂ ಸೇರಿ ದೇವಸ್ಥಾನದ ಕಟ್ಟಡವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಿದರು. 2019ರಲ್ಲಿ ದೇವಸ್ಥಾನದ ಮೇಲ್ಭಾಗ ಸಮುದಾಯ ಭವನವನ್ನು ನಿರ್ಮಾಣ ಮಾಡಿ, ಅನೇಕ ಶುಭ ಸಮಾರಂಭಗಳು ನಡೆಸಲು ಅವಕಾಶ ಮಾಡಿಕೊಟ್ಟರು. ಪ್ರತಿನಿತ್ಯ ಮುಖ್ಯ ರಸ್ತೆಯಲ್ಲಿ ಹಾದು ಹೋಗುವ ಹಲವು ಜನರು ಈ ರಾಮಮಂದಿರಕ್ಕೆ ಭೇಟಿ ನೀಡಿ ದೇವರ ಪ್ರಾರ್ಥನೆಯನ್ನು ಮಾಡುತ್ತಿದ್ದಾರೆ.

ADVERTISEMENT

ಇಂದು ರಾಮೋತ್ಸವ

ಕುರುಹಿನ ಶೆಟ್ಟಿ ಸಮಾಜದವರು ಪ್ರತಿವರ್ಷದಂತೆ ರಾಮನವಮಿಯ ಉತ್ಸವ ಮಾಡುತ್ತಿದ್ದಾರೆ. ಒಂದು ವಾರದಿಂದ ರಾಮಮಂದಿರದಲ್ಲಿ ವಿಶೇಷ ಪೂಜೆ ಪುರಸ್ಕಾರಗಳನ್ನು ನಡೆಸುತ್ತಾ ರಾಮನವಮಿಯಂದು ವಿಜೃಂಭಣೆಯಿಂದ ರಾಮೋತ್ಸವವನ್ನು ಆಚರಣೆ ಮಾಡುತ್ತಾ ಬಂದಿದ್ದಾರೆ.

ಅದೇ ರೀತಿ ಭಾನುವಾರ ರಾಮಮಂದಿರದಲ್ಲಿ ಬೆಳಿಗ್ಗೆ 8 ಗಂಟೆಗೆ ಫಲಪಂಚಾಮೃತ ಅಭಿಷೇಕ ಪೂಜೆ ಅಲಂಕಾರ, ವಿಷ್ಣು ಸಹಸ್ರನಾಮ ರಾಮ ತಾರಕ ಹೋಮ ಪೂರ್ಣಹುತಿ ಕಾರ್ಯಕ್ರಮಗಳು ನೆರವೇರುತ್ತವೆ. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗದ ನಂತರ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಮಧ್ಯಾಹ್ನ 3.30ಕ್ಕೆ ಶ್ರೀ ಸೀತಾಲಕ್ಷ್ಮಣ ಆಂಜನೇಯ ಸಹಿತ ಶ್ರೀ ರಾಮದೇವರ ಉತ್ಸವ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಇರಿಸಿ ವಿಜೃಂಭಣೆಯಿಂದ ವಾದ್ಯಗೋಷ್ಠಿಯೊಂದಿಗೆ ಶನಿವಾರದಂತೆಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುತ್ತದೆ. ನಂತರ ಸಂಜೆ 7.30ಕ್ಕೆ ಮಹಾಮಂಗಳಾರತಿ ನೆರವೇರಿಸಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ.

ಶನಿವಾರಸಂತೆ ಮುಖ್ಯ ರಸ್ತೆಯಲ್ಲಿರುವ 60 ವರ್ಷದ ಇತಿಹಾಸವುಳ್ಳ ಶ್ರೀ ರಾಮಮಂದಿರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.