
ಕುಶಾಲನಗರ: ‘ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ, ಅಕ್ಷರ, ಅನ್ನ ದಾಸೋಹ ಹಾಗೂ ಸಾಮಾಜಿಕ ಸೇವಾ ಕಾರ್ಯಗಳ ಮೂಲಕ ಇಂದಿಗೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ’ ಎಂದು ಶಾಸಕ ಡಾ.ಮಂತರ್ ಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಬಲಮುರಿ ಗಣಪತಿ ದೇವಾಲಯ ಬಳಿ ಶಿವರಾಮಕಾರಂತ ಬಡಾವಣೆಯ ಉದ್ಯಾನದಲ್ಲಿ ವೀರಶೈವ ಸಮಾಜ ಹಾಗೂ ಪುರಸಭೆಯಿಂದ ₹3 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶಿವಕುಮಾರ ಸ್ವಾಮೀಜಿ ಪ್ರತಿಮೆಯನ್ನು ಭಾನುವಾರ ಅನಾವರಣಗೊಳಿಸಿ ಅವರು ಮಾತನಾಡಿದರು.
‘ಸಿದ್ಧಗಂಗಾ ಶ್ರೀಗಳು ಲಕ್ಷಾಂತರ ಬಡ ಮಕ್ಕಳ ಪಾಲಿನ ಆರಾಧ್ಯ ದೇವವಾಗಿ ಅನ್ನ, ಅಕ್ಷರ, ಆಶ್ರಯ ನೀಡುವ ಮೂಲಕ ಅವರ ಬದುಕು ಹಸನುಗೊಳಿಸಿದ್ದಾರೆ. ಜಾತಿ ಬೇಧವಿಲ್ಲದೆ ಎಲ್ಲಾ ಧರ್ಮಗಳ ಆರಾಧ್ಯ ದೇವವಾಗಿರುವ ಶ್ರೀಗಳ ಮಂಟಪ ಇಲ್ಲಿ ದೇವಾಲಯ ಸ್ವರೂಪವಾಗಿದೆ’ ಎಂದರು.
ಮಾಜಿ ಶಾಸಕ ಅಪ್ಪಚ್ಚು ರಂಜನ್, ವೃತ್ತದ ನಾಮಫಲಕ ಉದ್ಘಾಟಿಸಿ ಮಾತನಾಡಿ, ‘ಸಿದ್ಧಗಂಗಾ ಸ್ವಾಮೀಜಿ ಅನುಗ್ರಹದಿಂದ ಇಡೀ ನಾಡು ಸಮೃದ್ಧವಾಗಿದೆ. ತ್ರಿವಿಧ ದಾಸೋಹದ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಅವರ ಸೇವೆ ಅಜರಾಮರ’ ಎಂದರು.
ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಮಾತನಾಡಿ, ‘ಶಿವಕುಮಾರ ಸ್ವಾಮೀಜಿ ತಪೋಕ್ಷೇತ್ರ ಸರ್ವಜನರ ಶಾಂತಿಯ ತೋಟವಾಗಿದ್ದು, 52 ಕೋಮಿನ ವಿದ್ಯಾರ್ಥಿಗಳಿಗೆ ತ್ರಿವಿಧ ದಾಸೋಹ ಸೇವೆ ನಿರಂತರವಾಗಿ ನಡೆದುಕೊಂಡು ಬರುತ್ತಿದೆ’ ಎಂದು ಹೇಳಿದರು.
ತಾಲ್ಲೂಕು ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಎಚ್.ವಿ.ಶಿವಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಟ್ಟಣದ ಬಸವೇಶ್ವರ ಸೌಹಾರ್ದ ಸಹಕಾರ ಸಂಘದ ವತಿಯಿಂದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು.
ಪುರಸಭೆ ಮಾಜಿ ಅಧ್ಯಕ್ಷ ಬಿ. ಜೈವರ್ಧನ್, ಉಪಾಧ್ಯಕ್ಷೆ ಸುರಯ್ಯ ಭಾನು ಹಾಗೂ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಅಮ್ಮತ್ತಿಯ ಕನ್ನಡ ಮಠದ ಚನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ, ಕಲ್ಲುಮಠದ ಮಹಾಂತ ಸ್ವಾಮೀಜಿ, ಶನಿವಾರಸಂತೆ ಮುದ್ದಿನ ಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕೊಡ್ಲಿಪೇಟೆ ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ, ಕೊಡಗು ಜಿಲ್ಲಾ ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್, ಹಿರಿಯ ಸಹಕಾರಿ ಟಿ.ಆರ್.ಶರವಣಕುಮಾರ್, ಜಿಲ್ಲಾ ಸರ್ಕಾರಿ ನೌಕರರ ವೀರಶೈವ ಸಮುದಾಯದ ಅಧ್ಯಕ್ಷ ಎಸ್.ನಂದೀಶ್, ಅಕ್ಕನ ಬಳಗದ ಅಧ್ಯಕ್ಷೆ ಕಮಲಾ ಉದಯಕುಮಾರ್, ಲೇಖನಾ ಧರ್ಮೇಂದ್ರ, ಗುಡ್ಡೆಹೊಸೂರು ವೀರಶೈವ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ, ಕುಶಾಲನಗರ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಎಚ್.ಎಂ.ಮಧುಸೂದನ್, ಲಿಂಗಾಯತ ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಕಿರಣ್, ಬಸವೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ ಎಂ.ಕೆ.ಧನರಾಜು, ಕಾರ್ಯದರ್ಶಿ ಎಂ.ಬಿ.ಸುರೇಶ್, ಜಿಲ್ಲಾ ವೀರಶೈವ ಸಮಾಜದ ಪ್ರಧಾನ ಕಾರ್ಯದರ್ಶಿ ಸಾಂಭಶಿವಮೂರ್ತಿ, ಸುಮಾ ಸುದೀಪ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಬಿ.ನಟರಾಜು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಬಲಮುರಿ ದೇವಾಲಯದಿಂದ ಶಿರಂಗಾಲದ ನಂದೀಶ್ ತಂಡದಿಂದ ಆಕರ್ಷಕ ವೀರಗಾಸೆ ಪ್ರದರ್ಶನ ನಡೆಯಿತು. ಶಿಕ್ಷಕ ಎಸ್.ಪಿ.ಪರಮೇಶ್ ನಿರೂಪಿಸಿದರು. ಸಾಂಬಶಿವಯ್ಯ ಸ್ವಾಗತಿಸಿದರು. ಶಿಕ್ಷಕಿ ಟಿ.ವಿ.ಶೈಲಾ ವಂದಿಸಿದರು.