ADVERTISEMENT

ನಾಪೋಕ್ಲು: ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ

ಸದ್ಯ ಒಬ್ಬ ವೈದ್ಯರ ಕಾರ್ಯ ನಿರ್ವಹಣೆ; ರೋಗಿಗಳಿಗೆ ಚಿಕಿತ್ಸೆ ನೀಡಲು ದುಸ್ತರ

​ಪ್ರಜಾವಾಣಿ ವಾರ್ತೆ
Published 11 ಜೂನ್ 2021, 1:59 IST
Last Updated 11 ಜೂನ್ 2021, 1:59 IST
ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರ
ನಾಪೋಕ್ಲುವಿನ ಸಮುದಾಯ ಆರೋಗ್ಯ ಕೇಂದ್ರ   

ನಾಪೋಕ್ಲು: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲಾಉಸ್ತುವಾರಿ ಸಚಿವರು, ಆರೋಗ್ಯ ಸಚಿವರು ಹಾಗೂ ಆರೋಗ್ಯ ಇಲಾಖಾಧಿಕಾರಿಗಳು ಕೂಡಲೇ ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೈದ್ಯರೊಬ್ಬರು ಕೆಲಸ ಕಾಯಂ ಆದ ಹಿನ್ನೆಲೆಯಲ್ಲಿ ಮತ್ತೊಂದೆಡೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹಿರಿಯ ವೈದ್ಯಾಧಿಕಾರಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದು, ಇಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾಗಿದೆ.

ಈ ಆರೋಗ್ಯ ಕೇಂದ್ರಕ್ಕೆ ಪ್ರತಿ ದಿನ 250ರಿಂದ 300 ಜನ ಹೊರ ರೋಗಿಗಳು ಆಗಮಿಸುತ್ತಾರೆ. ಒಬ್ಬ ವೈದ್ಯರೇ ಎಲ್ಲ ರೋಗಿಗಳಿಗೆ ಚಿಕಿತ್ಸೆ ನೀಡಲು ಸಮಸ್ಯೆಯಾಗುತ್ತಿದೆ. ಅದರೊಂದಿಗೆ ಆರೋಗ್ಯ ಇಲಾಖೆಯ ಸಭೆಗಳಿಗೆ ಅವರು ಕಡ್ಡಾಯವಾಗಿ ಹಾಜರಾಗಬೇಕು. ಆ ಸಂದರ್ಭದಲ್ಲಿ ರೋಗಿಗಳ ಚಿಕಿತ್ಸೆಗೆ ಸಮಸ್ಯೆಯಾಗುತ್ತಿದೆ.

ADVERTISEMENT

ವಾರದಲ್ಲಿ 3 ದಿನ ಮೂರ್ನಾಡು ಆರೋಗ್ಯ ಕೇಂದ್ರದಿಂದ ಮತ್ತು 3 ದಿನ ಭಾಗಮಂಡಲ ಆರೋಗ್ಯ ಕೇಂದ್ರದಿಂದ ವೈದ್ಯರನ್ನು ನೇಮಿಸುವ ವ್ಯವಸ್ಥೆ ಮಾಡುವುದಾಗಿ ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ. ಮಂಜುನಾಥ್ ಭರವಸೆ ನೀಡಿದ್ದಾರೆ. ಆದರೆ, ಈ ವ್ಯಾಪ್ತಿಯಲ್ಲಿ ಮಳೆಗಾಲ ಆರಂಭಗೊಳ್ಳಲಿದ್ದು, ಮಳೆಗಾಲದಲ್ಲಿ ಮೂರ್ನಾಡು, ಭಾಗಮಂಡಲದ ಸಂಪರ್ಕವನ್ನು ನಾಪೋಕ್ಲು ಪಟ್ಟಣ ಕಳೆದುಕೊಳ್ಳುತ್ತದೆ. ಕಾಯಂ ವೈದ್ಯರನ್ನು ನೇಮಕ ಮಾಡಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ನಾಪೋಕ್ಲು ವ್ಯಾಪ್ತಿಯ ಸುಮಾರು 30 ಗ್ರಾಮಗಳ ಜನರು ಆಗಮಿಸುತ್ತಾರೆ. ಇಲ್ಲಿ ವೈದ್ಯರಿಲ್ಲದ ಕಾರಣ ದೂರದ ಮಡಿಕೇರಿ, ವಿರಾಜಪೇಟೆಗೆ ತೆರಳುವಂತಾಗಿದೆ.

ಎರಡಂತಸ್ತಿನ ವಿಶಾಲವಾದ ಕಟ್ಟಡದಲ್ಲಿ ಸಂದರ್ಶಕರಿಗೆ ಕೂರಲು ವಿಶಾಲವಾದ ಸ್ಥಳಾವಕಾಶ, ವೈದ್ಯರ ಕೊಠಡಿಗಳು, ಔಷಧಿ ದಾಸ್ತಾನು ಕೊಠಡಿ, ಲ್ಯಾಬ್, ಲೇಬರ್ ಥಿಯೇಟರ್, ಲೇಬರ್ ವಾರ್ಡ್, ಕಣ್ಣು ಪರೀಕ್ಷಾ ಕೊಠಡಿ, ಐಸಿಟಿಸಿ ವಿಭಾಗ, ಎಚ್ಐವಿ ಆಪ್ತ ಸಮಾಲೋಚನೆ ಹಾಗೂ ಪರೀಕ್ಷೆ, ಎಕ್ಸರೇ ಕೊಠಡಿ ಸೇರಿದಂತೆ ಎಲ್ಲಾ ವ್ಯವಸ್ಥೆಗಳೂ ಇವೆ. ಆದರೆ, ಮಕ್ಕಳ ತಜ್ಞರು, ಪ್ರಸೂತಿ ತಜ್ಞರು ಮತ್ತು ಅರಿವಳಿಕೆ ತಜ್ಞ ವೈದ್ಯರ ಕೊರತೆ ಇದೆ. ಇಲ್ಲಿಗೆ ಕರ್ತವ್ಯಕ್ಕೆ ಹಾಜರಾಗಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ವೈದ್ಯರ ನೇಮಕಕ್ಕೆ ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರಾದ ಬಿದ್ದಾಟಂಡ ಎಸ್.ತಮ್ಮಯ್ಯ, ಎಂ.ಎ.ಮನ್ಸೂರ್ ಅಲಿ, ಬಾಚಮಂಡ ಲವ ಚಿಣ್ಣಪ್ಪ ಆಗ್ರಹಿಸಿದ್ದಾರೆ.

***

ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ಮೂವರು ತಜ್ಞ ವೈದ್ಯರ ನೇಮಕವಾಗಿದ್ದು, ಸದ್ಯದಲ್ಲೇ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.

–ಡಾ.ಮೋಹನ್, ಜಿಲ್ಲಾ ವೈದ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.