ಸಿದ್ದಾಪುರ: ಕಾಡಾನೆ ದಾಳಿಯಿಂದ ಯುವಕ ಗಾಯಗೊಂಡಿರುವ ಘಟನೆ ಘಟ್ಟದಳ ಬಳಿ ಶುಕ್ರವಾರ ನಡೆದಿದೆ.
ಮಾಲ್ದಾರೆ ಗ್ರಾಮದ ಹಂಚಿತಿಟ್ಟು ನಿವಾಸಿ ದಿಲೀಪ್, ಪೂಜೆಗೆ ಹೂವನ್ನು ತರಲು ಸಿದ್ದಾಪುರ ಪಟ್ಟಣಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಘಟ್ಟದಳ ಸಮೀಪ ಅರಣ್ಯ ಇಲಾಖೆಯ ವಸತಿ ಗೃಹದ ಬಳಿ ಕಾಡಾನೆಯೊಂದು ದಾಳಿ ನಡೆಸಿದೆ. ಪರಿಣಾಮ ದಿಲೀಪ್ ಅವರ ಕಾಲು ಹಾಗೂ ಕೈಗೆ ಗಾಯವಾಗಿದ್ದು, ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಸ್ಥಳಕ್ಕೆ ಉಪವಲಯ ಅರಣ್ಯ ಅಧಿಕಾರಿಗಳಾದ ಹಂಸ ಮತ್ತು ಶಶಿ ಪಿ.ಟಿ. ಹಾಗೂ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಆಸ್ಪತ್ರೆಗೆ ಭೇಟಿ ನೀಡಿ, ದಿಲೀಪ್ ಆರೋಗ್ಯ ವಿಚಾರಿಸಿದರು. ಬಳಿಕ ಮಾತನಾಡಿದ ಅವರು, ಬಾಡಗ-ಬಾಣಂಗಾಲ, ಘಟ್ಟದಳ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಉಪಟಳ ನೀಡುತ್ತಿದ್ದು, ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಲು ಸಿಬ್ಬಂದಿಗೆ ಸೂಚಿಸಲಾಗುವುದು ಎಂದರು. ಕಾಡಾನೆ ಹಾವಳಿ ತಡೆಗೆ ಶಾಶ್ವತ ಯೋಜನೆ ರೂಪಿಸುವ ನಿಟ್ಟಿನಲ್ಲಿ ಶಾಸಕರಾದ ಎ.ಎನ್ ಪೊನ್ನಣ್ಣ ಸ್ಟಾಪ್ ರಿಲಿಯಸ್ ಯೋಜನೆಯನ್ನು ಜಾರಿಗೆ ತರಲು ಶ್ರಮಿಸುತ್ತಿದ್ದಾರೆ. ಯೋಜನೆ ಜಾರಿಗೆ ಬಂದಲ್ಲಿ ಕಾಡಾನೆ ಹಾವಳಿ ಕಡಿಮೆಯಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.