ADVERTISEMENT

ಸೋಮವಾರಪೇಟೆ: ಮಿತಿ ಮೀರಿದ ಬೀಡಾಡಿ ದನ, ನಾಯಿ ಹಾವಳಿ

ಯಾವುದೇ ಕ್ರಮಗಳನ್ನೂ ಕೈಗೊಳ್ಳದ ಪಟ್ಟಣ ಪಂಚಾಯಿತಿ, ಸಾರ್ವಜನಿಕರ ಆಕ್ರೋಶ

ಡಿ.ಪಿ.ಲೋಕೇಶ್
Published 6 ಡಿಸೆಂಬರ್ 2024, 7:22 IST
Last Updated 6 ಡಿಸೆಂಬರ್ 2024, 7:22 IST
ಸೋಮವಾರಪೇಟೆ ಪಟ್ಟಣದ ಬಸವೇಶ್ವರ ದೇವಾಲಯ ರಸ್ತೆಯಲ್ಲಿದ್ದ ಬೀಡಾಡಿ ದನಗಳು
ಸೋಮವಾರಪೇಟೆ ಪಟ್ಟಣದ ಬಸವೇಶ್ವರ ದೇವಾಲಯ ರಸ್ತೆಯಲ್ಲಿದ್ದ ಬೀಡಾಡಿ ದನಗಳು    

ಸೋಮವಾರಪೇಟೆ: ಪಟ್ಟಣದ ಎಲ್ಲೆಂದರಲ್ಲಿ ಬೀಡಾಡಿ ದನಗಳು ಹಾಗೂ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನ ಸಾಮಾನ್ಯರು ರಸ್ತೆಯಲ್ಲಿ ಸಂಚರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ‌ಸಂಬಂಧಿಸಿದ ಪಂಚಾಯಿತಿ ಆಡಳಿತ ಮಾತ್ರ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.

ಪಟ್ಟಣದ ಯಾವುದೇ ರಸ್ತೆಯಲ್ಲಿ ಸಂಚರಿಸಲು ಭಯಪಡುವಂತಾಗಿದೆ. ನಾಯಿ, ದನಗಳ ಹಿಂಡು ಹಗಲು ರಾತ್ರಿಗಳಲ್ಲಿ ರಸ್ತೆಗಳಲ್ಲಿ ಸಂಚರಿಸುತ್ತಿವೆ. ರಾತ್ರಿಯಾದೊಡನೆ ಮನೆಗಳ ಸುತ್ತ ದಾಳಿಮಾಡುತ್ತಿದ್ದು, ಇರುವ ಹೂವಿನ ಗಿಡಗಳು ಸೇರಿದಂತೆ ಎಲ್ಲವನ್ನು ದನಗಳು ತಿಂದು ಹಾಳುಮಾಡುತ್ತಿವೆ. ಪ್ರಮುಖ ರಸ್ತೆಗಳಲ್ಲಿಯೇ ವಿಶ್ರಾಂತಿ ಪಡೆಯುವುದರಿಂದ ರಾತ್ರಿ ವಾಹನ ಸವಾರರು ಸಾಕಷ್ಟು ಬಾರಿ ಇವುಗಳಿಗೆ ಗುದ್ದಿ ಬಿದ್ದಿದ್ದಾರೆ. ಆದರೂ, ಈ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ಗ್ರಾಮೀಣ ಪ್ರದೇಶದ ಕೆಲವರು ಬೆಳಿಗ್ಗೆ ಹಾಲು ಕರೆದುಕೊಂಡ ನಂತರ ಜಾನುವಾರುಗಳನ್ನು ಪಟ್ಟಣಕ್ಕೆ ತಂದು ಬಿಡುತ್ತಿದ್ದಾರೆ. ಇನ್ನೂ ಕೆಲವು ಜಾನುವಾರುಗಳಿಗೆ ಯಾರು ಮಾಲೀಕರೆಂದೇ ತಿಳಿದಿಲ್ಲ. ಸಾಕಷ್ಟು ಬಾರಿ ಪಂಚಾಯಿತಿ ಆಡಳಿತಕ್ಕೆ ಮನವಿ ಮಾಡಿದರೂ ಯಾವ ಕ್ರಮವನ್ನು ತೆಗೆದುಕೊಳ್ಳದೆ, ಜನರಿಗೆ ತೊಂದರೆಯಾಗಿದೆ ಎಂದು ಪಟ್ಟಣದ ನಿವಾಸಿ ಹರೀಶ್ ತಿಳಿಸಿದರು.

ADVERTISEMENT

ಕಷ್ಟಪಟ್ಟು ಹೂವಿನ ಗಿಡಗಳನ್ನು ಮನೆಯ ಸುತ್ತ ಬೆಳೆಸಲಾಗಿದೆ. ರಾತ್ರಿಯಾದೊಡನೆ ದನಗಳ ಹಿಂಡು ಬೇಲಿಯನ್ನು ನುಗ್ಗಿ ಹಾಳುಮಾಡುತ್ತಿವೆ. ದುಡ್ಡುಕೊಟ್ಟು ತಂದ ಗಿಡಗಳು ಹಾಳಾಗುತ್ತಿರುವುದು ಬೇಸರವಾಗಿದೆ. ಇನ್ನಾದರೂ ದನಗಳ ಹಾವಳಿಯನ್ನು ನಿಯಂತ್ರಿಸಬೇಕೆಂದು ನಿವಾಸಿ ಮಮತಾ ಆಗ್ರಹಿಸಿದರು.

‘ಬೆಳಿಗ್ಗೆ ಮತ್ತು ಸಂಜೆ ಶಾಲೆಗೆ ನಡೆದುಕೊಂಡು ತೆರಳಲು ಹೆದರಿಕೆಯಾಗುತ್ತದೆ. ಯಾವ ರಸ್ತೆಗಳಲ್ಲಿ ನೋಡಿದರೂ, ನಾಯಿಗಳ ಹಿಂಡು ಇರುತ್ತದೆ’ ಎಂದು ವಿದ್ಯಾರ್ಥಿನಿ ಧನ್ಯಾ ತಿಳಿಸಿದರು.

‘ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗೆ ಯಾವ ಕೆಲಸ ಮೊದಲು ಮಾಡಿಸಬೇಕೆಂದು ತಿಳಿದಿಲ್ಲ. ಬೇಡದ ಕೆಲಸ ಮಾಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಹಲವು ತಿಂಗಳುಗಳಿಂದ ದನಗಳ ಹಾವಳಿ ಮಿತಿ ಮೀರಿದೆ. ಸಮಸ್ಯೆ ಪರಿಹರಿಸುವ ಭರವಸೆಯನ್ನು ಪಂಚಾಯಿತಿಯವರು ನೀಡುತ್ತಿದ್ದರೂ, ಪ್ರಯೋಜನಕ್ಕೆ ಬರುತ್ತಿಲ್ಲ. ರಾತ್ರಿ ಗೋ ಕಳ್ಳರು ದನಗಳನ್ನು ಹಿಡಿದು ಸಾಗಿಸುತ್ತಿದ್ದಾರೆ. ಇನ್ನಾದರೂ ದನಗಳ ಮಾಲೀಕರುಗಳನ್ನು ಗುರುತಿಸಿ ಅವರಿಗೆ ಜಾಗೃತಿ ಮೂಡಿಸಿ ದನಗಳನ್ನು ಕಟ್ಟಿ ಸಾಕುವಂತೆ ಮನವರಿಕೆ ಮಾಡಿಕೊಡಬೇಕಿದೆ’ ಎಂದು ವಾಹನ ಚಾಲಕ ಪಿ. ಮಧು ಹೇಳಿದರು.

ಡಿ. 11ರಂದು ಪಂಚಾಯಿತಿ ಸಾಮಾನ್ಯ ಸಭೆ ನಡೆಯಲಿದ್ದು, ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಶಕ್ತಿ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಲು ತೀರ್ಮಾನ ತೆಗೆದುಕೊಳ್ಳಲಾಗುವುದು. ಪಟ್ಟಣದೆಲ್ಲೆಡೆ ಬೀದಿ ದನಗಳನ್ನು ಕಟ್ಟಿ ಸಾಕುವಂತೆ ಪ್ರಚಾರ ಮಾಡಿಸಲಾಗುವುದು. ಆದರೂ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಸೂಕ್ತ ಕಾನೂನುಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್ ತಿಳಿಸಿದರು.

ಸೋಮವಾರಪೇಟೆ ಪಟ್ಟಣದ ಮಹಿಳಾ ಸಮಾಜ ರಸ್ತೆಯಲ್ಲಿ ಬೀದಿನಾಯಿಗಳ ಹಿಂಡು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.