
ಸೋಮವಾರಪೇಟೆ: ಒಂದು ಕೋಣೆಯಲ್ಲಿ ಪ್ರಾರಂಭವಾದ ಸರ್ಕಾರಿ ಶಾಲೆಯೊಂದು ಬರೋಬರಿ ನೂರು ವಸಂತಗಳನ್ನು ಪೂರೈಸಿದ್ದು, ಶತಮಾನೋತ್ಸವ ಆಚರಣೆಗೆ ಅಣಿಯಾಗಿದೆ.
ಪಟ್ಟಣಕ್ಕೆ ಹೊಂದಿಕೊಂಡಂತಿರುವ ಬೇಳೂರಿನ ಅಂದಿನ ಪಟೇಲರ ಸ್ವಂತ ಮನೆಯಲ್ಲಿನ ಒಂದು ಕೊಠಡಿಯಲ್ಲಿ ಏಕೋಪಧ್ಯಾಯ ಶಾಲೆ 1925ರಲ್ಲಿ ಆರಂಭವಾಯಿತು. ಸುಮಾರು 23 ವರ್ಷಗಳಷ್ಟು ಕಾಲ ಮನೆಯಲ್ಲಿಯೇ ಶಾಲೆ ನಡೆದಿದ್ದು ವಿಶೇಷ. ನಂತರ, 1943ರಲ್ಲಿ ಬೇಳೂರು ಶ್ರೀ ಮುರುಘಾ ಮಠದ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಸ್ವಾತಂತ್ರ್ಯ ಬಂದ ನಂತರ ಬೇಳೂರಿನ ಮಠದ ಜಾಗದಲ್ಲಿ ನೂತನ ಎರಡು ಕೊಠಡಿಗಳನ್ನು ನಿರ್ಮಿಸಿ ಮೂವರು ಶಿಕ್ಷಕರನ್ನು ನೇಮಕ ಮಾಡಲಾಯಿತು.
ಈಗಿನ ಕಟ್ಟಡವನ್ನು ಅಂದು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಮತ್ತು ಜಾಫರ್ ಷರೀಫ್ ಅವರು ಉದ್ಘಾಟಿಸಿದರು. ಇಂದು ಶಾಲೆಯಲ್ಲಿ 1ರಿಂದ 7ನೇ ತರಗತಿಯವರೆಗೆ 75 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು, ದಿನದಿಂದ ದಿನಕ್ಕೆ ಶಾಲೆ ಅಭಿವೃದ್ಧಿ ಹೊಂದುತ್ತಿದೆ ಎಂದು ಹಳೆಯ ವಿದ್ಯಾರ್ಥಿ ಕೆ.ಟಿ.ಕುಮಾರ್ ಹೇಳುತ್ತಾರೆ.
ಶಾಲೆಯ ಹಳೆಯ ವಿದ್ಯಾರ್ಥಿ ಕೆ.ಜಿ.ಸುರೇಶ್ ಮಾತನಾಡಿ, ‘ಬೇಳೂರು ಮತ್ತು ಕುಸುಬೂರು ಜೋಡಿ ಗ್ರಾಮಗಳಾಗಿದ್ದು, ಇಲ್ಲಿ ಶಾಲೆ ಪ್ರಾರಂಭಿಸಲಾಯಿತು. ಸಾಕಷ್ಟು ವಿದ್ಯಾರ್ಥಿಗಳನ್ನು ಹೊಂದಿದ್ದ ಶಾಲೆಯಲ್ಲಿ ವಿದ್ಯಾರ್ಥಿಗಳ ಕೊರತೆ ಇದ್ದರೂ, ನಂತರದ ದಿನಗಳಲ್ಲಿ ಸುಧಾರಿಸುತ್ತಿದೆ. ಈಗ ದ್ವಿಭಾಷೆಯಲ್ಲಿ ತರಗತಿಗಳು ನಡೆಯುತ್ತಿದ್ದು, ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ ಎಂದರು.
ನ. 7 ಮತ್ತು 8ರಂದು ಶಾಲಾ ಆವರಣದಲ್ಲಿ ಶತಮಾನೋತ್ಸವದ ಪ್ರಯುಕ್ತ ಅದ್ಧೂರಿ ಕಾರ್ಯಕ್ರಮ ನಡೆಯಲಿದ್ದು, ಸ್ಮರಣ ಸಂಚಿಕೆ ಹೊರ ತರುವ ಯೋಜನೆ ಹಳೆಯ ವಿದ್ಯಾರ್ಥಿಗಳಲ್ಲಿದೆ.
ಈ ಶಾಲೆಯಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಗುಂಡೂರಾವ್ ಅವರು ಒಂದು ವರ್ಷ ಶಿಕ್ಷಣ ಪಡೆದಿದ್ದರೆ, ಇದೇ ಶಾಲೆಯಲ್ಲಿ ಗುಂಡೂರಾವ್ ಅವರ ತಂದೆ ಶಿಕ್ಷಕರಾಗಿ ಕೆಲಸ ಮಾಡಿದ್ದರು ಎಂದು ಸ್ಥಳೀಯರು ನೆನೆಯುತ್ತಾರೆ.
ಶಾಲೆಯಲ್ಲಿ ಹಿರಿಯ ರಾಜಕರಣಿ ಕೆ.ಪಿ.ಚಂದ್ರಕಲಾ, ಅವರ ಸೋದರ ಚಿತ್ರನಟ ಜೈಜಗದೀಶ್ ಹಾಗೂ ಹಲವು ಉದ್ಯಮಿಗಳು, ವೈದ್ಯರು ಸೇರಿದಂತೆ ಸಾಕಷ್ಟು ಸಾಧಕರು ಈ ಶಾಲೆಯಲ್ಲಿ ಕಲಿತಿದ್ದರು.
ಶಾಲೆಯ ಶತಮಾನೋತ್ಸವ ಆಚರಣ ಸಮಿತಿ ಅಧ್ಯಕ್ಷ ಹಾಗೂ ಹಳೆಯ ವಿದ್ಯಾರ್ಥಿ ಪ್ರಭುದೇವ್ ಮಾತನಾಡಿ ‘ಶಾಲೆಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಒಂದು ಕಾರ್ಯಕ್ರಮ ನಡೆಸಬೇಕೆಂದು ತೀರ್ಮಾನಿಸಲಾಯಿತು. ಆದರೆ ಅದು ದೊಡ್ಡಮಟ್ಟದ ಕಾರ್ಯಕ್ರಮವಾಗಿ ತಿರುವು ಪಡೆದಿದೆ. ಕ್ಷೇತ್ರದ ಶಾಸಕ ಡಾ.ಮಂತರ್‌ಗೌಡ ಅವರು ಕಟ್ಟಡದ ಚಾವಣಿ ಮತ್ತು ದುರಸ್ತಿಗೆ ₹ 15 ಲಕ್ಷ ಹಣ ನೀಡಿದ ನಂತರ ಕಾರ್ಯಕ್ರಮದ ರೂಪುರೇಷೆಯೇ ಬದಲಾಯಿತು. ಹಳೆಯ ವಿದ್ಯಾರ್ಥಿಗಳು ಮತ್ತು ಸಂಘ ಸಂಸ್ಥೆಗಳು ನವೀಕರಣಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಶಾಲೆಯಲ್ಲಿ ಆಗಬೇಕಾದ ಕೆಲಸಗಳು ಬಿರುಸಿನಿಂದ ಸಾಗಿವೆ’ ಎಂದು ತಿಳಿಸಿದರು.
‘ಶಾಲೆಯ ಹಳೆಯ ವಿದ್ಯಾರ್ಥಿ ಈಗ ಅಮೆರಿಕದಲ್ಲಿ ವೈದ್ಯರಾಗಿರುವ ಚಂದ್ರಮೌಳಿ ಅವರು ಶಾಲೆಗಾಗಿ ₹ 75 ಸಾವಿರ ಹಣವನ್ನು ಮಾಸಿಕ ವ್ಯಯಿಸುತ್ತಿದ್ದಾರೆ’ ಎಂದು ಶಾಲೆಯ ಹಳೆಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕುಮಾರ್ ಹೇಳುತ್ತಾರೆ.
‘ವಿದ್ಯಾರ್ಥಿಗಳ ಕೊರತೆಯಿಂದ 2015ರಲ್ಲಿ ಶಾಲೆ ಮುಚ್ಚುವ ಸ್ಥಿತಿ ತಲುಪಿತ್ತು. ಅಂದಿನ ಶಾಲಾ ಮುಖ್ಯ ಶಿಕ್ಷಕ ಯೋಗೇಶ್ ಸುತ್ತಲಿನ ಗ್ರಾಮಗಳ ಮನೆ ಮನೆಗೆ ತೆರಳಿ ವಿದ್ಯಾಥಿಗಳನ್ನು ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡುವ ಮೂಲಕ ಶಾಲೆ ಉಳಿವಿಗೆ ಶ್ರಮಿಸಿದರು. ಇದರೊಂದಿಗೆ ಶಾಲೆಯ ಹಳೆಯ ವಿದ್ಯಾರ್ಥಿ ಚಂದ್ರಮೌಳಿ ಅವರನ್ನು ಸಂಪರ್ಕಿಸಿ ಸಾಕಷ್ಟು ಕೊಡುಗೆಗಳನ್ನು ನೀಡಲು ಮನವಿ ಮಾಡಿದರು. ಚಂದ್ರಮೌಳಿ ಅವರು ಇಂದು ಶಾಲೆಗೆ ಮಾಸಿಕ ₹ 75 ಸಾವಿರ ಖರ್ಚು ಮಾಡುತ್ತಿದ್ದಾರೆ. ಶಾಲೆಗೆ ಒಬ್ಬರು ಆಂಗ್ಲ ಮಾಧ್ಯಮ ಶಿಕ್ಷಕಿ ಕಂಪ್ಯೂಟರ್ ಶಿಕ್ಷಕಿ ಶಾಲಾ ವಿದ್ಯಾರ್ಥಿಗಳನ್ನು ಕರೆತಂದು ಮನೆಗೆ ಬಿಡಲು ಸ್ವಂತ ವಾಹನದ ವ್ಯವಸ್ಥೆ ಕಂಪ್ಯೂಟರ್ ಸೇರಿದಂತೆ ಹಲವು ಕೊಡುಗೆಯನ್ನು ನೀಡುವ ಮೂಲಕ ತಾವು ಓದಿದ ಶಾಲೆಯ ಬೆನ್ನಿಗೆ ನಿಂತಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.