ADVERTISEMENT

ಸೋಮವಾರಪೇಟೆ ಬಿರುಗಾಳಿ ಸಹಿತ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:55 IST
Last Updated 28 ಜುಲೈ 2025, 6:55 IST
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ, ಸಕಲೇಶಪುರ ರಾಜ್ಯಹೆದ್ದಾರಿಯ ಜೇಡಿಗುಂಡಿ ಬಳಿ ರಸ್ತೆ ಮೇಲೆ ಬರೆ ಕುಸಿದಿದ್ದು, ತೆರವಿನ ಕಾರ್ಯ ಭಾನುವಾರ ನಡೆಯಿತು
ಸೋಮವಾರಪೇಟೆ ತಾಲ್ಲೂಕಿನ ಶಾಂತಳ್ಳಿ, ಸಕಲೇಶಪುರ ರಾಜ್ಯಹೆದ್ದಾರಿಯ ಜೇಡಿಗುಂಡಿ ಬಳಿ ರಸ್ತೆ ಮೇಲೆ ಬರೆ ಕುಸಿದಿದ್ದು, ತೆರವಿನ ಕಾರ್ಯ ಭಾನುವಾರ ನಡೆಯಿತು   

ಸೋಮವಾರಪೇಟೆ: ತಾಲ್ಲೂಕಿನಾದ್ಯಂತ 4 ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ತಾಲ್ಲೂಕಿನ ಬಹುತೇಕ ಗ್ರಾಮಗಳು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ. ಕುಡಿಯುವ ನೀರು ಸೇರಿದಂತೆ ಹಲವು ಸಮಸ್ಯೆಗಳು ತಲೆದೋರಿದೆ.

ನದಿ ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಸಮಸ್ಯೆ ಎದುರಾಗಿದೆ. ಗ್ರಾಮೀಣ ಭಾಗದಲ್ಲಿ ತೋಟ, ರಸ್ತೆ ಹಾಗೂ ಮನೆಗಳ ಮೇಲೆ ಮರಗಿಡಗಳು ಬೀಳುತ್ತಿವೆ. ಕೃಷಿ ಭೂಮಿಗೆ ತೆರಳಲು ಕೃಷಿಕರು ಮತ್ತು ಕಾರ್ಮಿಕರು ಭಯಪಡುವಂತಾಗಿದೆ. ಹಲವೆಡೆ ಭತ್ತದ ಗದ್ದೆಗಳಲ್ಲಿ ನೀರು ನಿಂತು ಸಮಸ್ಯೆಯಾಗಿದೆ. ಅಲ್ಲಲ್ಲಿ ರಸ್ತೆಗಳ ಮೇಲೆ ಮರಗಳು ಬೀಳುತ್ತಿದ್ದು ಸಂಚಾರ ಮಾಡಲು ಜನರು ಭಯಭೀತರಾಗಿದ್ದಾರೆ. ಅರಣ್ಯ, ಸೆಸ್ಕ್ ಹಾಗೂ ಅಗ್ನಿಶಾಮಕ ಠಾಣಾ ಸಿಬ್ಬಂದಿ ಸುರಿಯುವ ಮಳೆಯಲ್ಲೇ ಕೆಲಸ ಮಾಡಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ವಿದ್ಯುತ್ ಮಾರ್ಗದ ಮೇಲೆ ಮರಗಳು ಬಿದ್ದು ಹಾನಿಯಾಗಿದ್ದು, ಅವುಗಳ ದುರಸ್ತಿಗೆ ಸೆಸ್ಕ್ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಸೋಮವಾರಪೇಟೆ, ಶಾಂತಳ್ಳಿ, ಸಕಲೇಶಪುರ, ಸುಬ್ರಮಣ್ಯ ರಾಜ್ಯ ಹೆದ್ದಾರಿಯ ಜೇಡಿಗುಂಡಿ ಬಳಿ ಬರೆ ಕುಸಿಯಲು ಪ್ರಾರಂಭಿಸಿದೆ. ಶನಿವಾರ ರಾತ್ರಿ ಮನೆಗೆ ವಾಹನದಲ್ಲಿ ತೆರಳುತ್ತಿದ್ದಾಗ, ಶಾಂತಳ್ಳಿ ರಸ್ತೆಯ ಜೆಡಿಗುಂಡಿ ಎಂಬಲ್ಲಿ ವಾಹನದ ಮೇಲೆ ಮರ ಬಿದ್ದು ಹರಗ ಗ್ರಾಮದ ಡಿ.ಜಿ. ಶರಣ್ ಗೌಡ ಜೀವಾಪಾಯದಿಂದ ಪಾರಾಗಿದ್ದಾರೆ. ಮಾರುತಿ ವ್ಯಾನ್ ಸಂಪೂರ್ಣ ಜಖಂಗೊಂಡಿದೆ. ಅರಣ್ಯ, ಸೆಸ್ಕ್ ಇಲಾಖೆಯವರು ಮರ ತೆರವುಗೊಳಿಸಿ, ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ADVERTISEMENT

ರಾತ್ರಿ ಮಾದಾಪುರದಿಂದ ಸೋಮವಾರಪೇಟೆಗೆ ಬರುವ ಮಾರ್ಗದಲ್ಲಿ ಬೃಹತ್ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿತ್ತು. ಕೋವರ್ ಕೊಲ್ಲಿ ಬೃಹತ್ ಮರ ರಸ್ತೆಗೆ ಉರುಳಿ ಸಂಚಾರಕ್ಕೆ ಅಡಚಣೆಯಾಗಿತ್ತು. ದುದ್ನಗಲ್ಲು ಗ್ರಾಮದ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಮಸ್ಯೆಯಗಿತ್ತು. ಜಂಬೂರು ಗ್ರಾಮದ ರಸ್ತೆಯ ಮೇಲೆ ಬಿದ್ದ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

ಜೇಡಿಗುಂಡಿಯಲ್ಲಿ ಭೂ ಕುಸಿತ ಪ್ರಾರಂಭವಾಗಿದ್ದು, ಭಾನುವಾರ ರಸ್ತೆಯ ಮೇಲಿದ್ದ ಮಣ್ಣನ್ನು ಜೇಸಿಬಿ ಮೂಲಕ ತೆರವುಗೊಳಿಸಿ, ರಸ್ತೆಯ ಮೇಲೆ ನಿಂತಿದ್ದ ನೀರನ್ನು ಖಾಲಿ ಮಾಡಿ ವಾಹನ ಸಂಚಾರಕ್ಕೆ ಅವಕಾಶ ಮಾಡಿದರು. ಈ ರಸ್ತೆಯಲ್ಲಿ ಇನ್ನೂ ಸಾಕಷ್ಟು ಮರಗಳು ರಸ್ತೆಯತ್ತ ವಾಲಿದ್ದು, ಅಪಾಯ ಎದುರಾಗಿದೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರಿನ ಕೆಲವು ಅಂಗಡಿಗಳ ಹಿಂದಿನ ಬರೆ ಕುಸಿಯುತ್ತಿದ್ದು, ಸುರಕ್ಷತೆಯ ದೃಷ್ಟಿಯಿಂದ ಅಂತಹ ಅಂಗಡಿಗಳ ಮಾಲೀಕರಿಗೆ ಮನವರಿಕೆ ಮಾಡಿಕೊಡುವ ಮೂಲಕ ಅಂಗಡಿ ಬಾಗಿಲು ಮುಚ್ಚಿಸಲಾಯಿತು. ತಾಲ್ಲೂಕಿನ ಗೌಡಳ್ಳಿ ಗ್ರಾಮ ಪಂಚಾಯಿತಿಯ ಗ್ರಂಥಾಲಯದ ಮೇಲ್ಚಾವಣಿ ಗಾಳಿ ಮಳೆಗೆ ಸಂಪೂರ್ಣ ಹಾರಿಹೋಗಿದ್ದು, ನಷ್ಟವಾಗಿದೆ.

ಸೋಮವಾರಪೇಟೆ ತಾಲ್ಲೂಕಿನ ಜೆಡಿಗುಂಡಿ ಬಳಿ ಮಾರುತಿ ವ್ಯಾನ್ ಮೇಲೆ ಬೃಹತ್ ಮರ ಬಿದ್ದು ಚಾಲಕ ಅಪಾಯದಿಂದ ಪಾರಾದರು
ಸೋಮವಾರಪೇಟೆ ತಾಲ್ಲೂಕಿನ ಬಾಣಾವಾರ ಗ್ರಾಮದ ಗೇಟ್ ಬಳಿಯಲ್ಲಿ ರಸ್ತೆಗೆ ಬಿದ್ದ ಮರವನ್ನು ತೆರವುಗೊಳಿಸುತ್ತಿರುವುದು
ಸೋಮವಾರಪೇಟೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರಿನ ಕೆಲವು ಅಂಗಡಿಗಳ ಹಿಂದಿನ ಬರೆ ಕುಸಿಯುವ ಭೀತಿ ಎದುರಾಗಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.