ಮಡಿಕೇರಿ: ‘ಬಾ ಬಾರೆ ಗುಬ್ಬಿ ಮರಿ ತಂದಿರುವೆ ಕಡ್ಲೆಪುರಿ, ಇಬ್ಬರು ತಿನ್ನೋಣ ಬಾ...’ ಇದು ಕೇವಲ ಶಿಶುಸಾಹಿತ್ಯ ಮಾತ್ರವಲ್ಲ, ಇಂದಿಗೆ ಅತ್ಯಂತ ಅಗತ್ಯವಾಗಿ ಮಕ್ಕಳಲ್ಲಿ ಮೂಡಿಸಬೇಕಾದ ಮನೋಭಾವ.
ಗುಬ್ಬಿಗಳೆಂದರೆ ತಕ್ಷಣಕ್ಕೆ ನೆನಪಾಗುವುದು ಎಚ್.ಎಸ್.ವೆಂಕಟೇಶಮೂರ್ತಿ ಅವರ ‘ಗುಬ್ಬಿ ಮರಿ ಪುರ್ ಪುರ್ರಂತ ಹಾರಿ ಬಂತು ಅಮ್ಮನ ಹತ್ರ’ ಎಂಬ ಪದ್ಯ. ಇದನ್ನು ಬಿಟ್ಟರೆ, ‘ಮಲಗೇ ಮಲಗೇ ಗುಬ್ಬಿ ಮರಿ’ ಎಂಬ ಹಾಡೂ ನೆನಪಿನಪಟಲದಲ್ಲಿ ಸುಳಿಯುತ್ತದೆ.
ಇಂತಹ ಗುಬ್ಬಚ್ಚಿಗಳು ಇದೀಗ ಗೂಡು ಕಟ್ಟಲು ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸುವಂತಹ ಸ್ಥಿತಿಗೆ ತಲುಪಿವೆ.
ಹೌದು. ಆಧುನಿಕತೆಯ ಭರಾಟೆಯಲ್ಲಿ ಹೆಂಚಿನ ಮನೆಗಳೆಲ್ಲವೂ ಆರ್‌ಸಿಸಿ ಮನೆಗಳಾಗಿ ಬದಲಾಗುತ್ತಿವೆ. ಬೇರೆ ಜಿಲ್ಲೆಗೆ ಹೋಲಿಸಿದರೆ ಹಿಂದೆ ಇದ್ದ ಕೊಡಗಿನಲ್ಲಿ ಈಗ ಎಲ್ಲೆಂದರಲ್ಲಿ ಆರ್‌ಸಿಸಿ ಮನೆ ನಿರ್ಮಾಣ ಕಾಮಗಾರಿಗಳೇ ಕಾಣಿಸುತ್ತಿವೆ. ಇವುಗಳು ಗುಬ್ಬಚ್ಚಿಯ ಗೂಡು ಕಟ್ಟುವ ತಾಣವನ್ನೇ ಕಸಿದುಕೊಳ್ಳುತ್ತಿವೆ.
ಗುಬ್ಬಚ್ಚಿಗಳು ಸಾಮಾನ್ಯವಾಗಿ ರೆಂಬೆ, ಕೊಂಬೆಗಳಲ್ಲಿ, ದೊಡ್ಡ ಮರಗಳಲ್ಲಿ ಗೂಡು ಕಟ್ಟುವುದು ಕಡಿಮೆ. ಅವುಗಳು ಮನೆಯ ಜಂತಿಗಳಲ್ಲಿ, ಸಂದುಗೊಂದುಗಳಲ್ಲಿ ಗೂಡು ಕಟ್ಟುತ್ತವೆ. ಆದರೆ, ಮನೆಗಳೆಲ್ಲವೂ ಆಧುನೀಕರಣಗೊಳ್ಳುತ್ತಿದ್ದಂತೆ ಗುಬ್ಬಚ್ಚಿಗಳಿಗೆ ಗೂಡ ಕಟ್ಟುವುದಕ್ಕೆ ಸೂಕ್ತ ಜಾಗಗಳೂ ಸಿಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಇದಕ್ಕಾಗಿಯೇ ಗುಬ್ಬಿಗಳ ಕೃತಕ ಗೂಡುಗಳನ್ನಾದರೂ ಬೆಕ್ಕುಗಳ ಕೈಗೆ ಸಿಗದಂತೆ ಮನೆಗಳ ಮೇಲೆ, ಗೋಡೆಗಳಲ್ಲಿ ತೂಗು ಹಾಕಿದರೆ ಒಂದೆರಡು ತಿಂಗಳುಗಳಲ್ಲಿ ಗುಬ್ಬಚ್ಚಿಗಳು ಬಂದು ಗೂಡು ಕಟ್ಟುತ್ತವೆ. ಪಂಜರದೊಳಗೆ ಕೇಳುವ ಚಿಲಿಪಿಲಿ ಶಬ್ದವನ್ನು ನೇರವಾಗಿ, ಮುಕ್ತವಾಗಿ ಕೇಳಬಹುದಾಗಿದೆ.
ಈ ಬಗೆಯ ಒಂದಷ್ಟು ಪ್ರಯೋಗಗಳು ಈಗಾಗಲೇ ಯಶಸ್ವಿಯಾಗಿವೆ. ವಿರಾಜಪೇಟೆಯ ವೈದ್ಯರಾದ ಡಾ.ನರಸಿಂಹನ್ ಅವರು ತಮ್ಮ ಮನೆಯಲ್ಲಿ 2 ಗುಬ್ಬಿ ಗೂಡುಗಳನ್ನಿಟ್ಟಿದ್ದು, ಅಲ್ಲಿ ಗುಬ್ಬಿಗಳು ಗೂಡು ಕಟ್ಟಿವೆ ಎಂದು ಅವರು ಹೇಳುತ್ತಾರೆ. ಹಾಗೆಯೇ, ಮಡಿಕೇರಿಯ ಟಿ.ಜಾನ್ ಬಡಾವಣೆಯಲ್ಲೂ ಇಂತಹದ್ದೊಂದು ಯಶಸ್ವಿ ಪ್ರಯೋಗ ಕೆಲವು ಮನೆಗಳಲ್ಲಿ ನಡೆದಿದೆ. ಎಲ್ಲರೂ ಇದೇ ಬಗೆಯಲ್ಲಿ ಗುಬ್ಬಿಗಳಿಗೆ ಗೂಡು ಕಟ್ಟಲು ಅವಕಾಶ ಕಲ್ಪಿಸಿದರೆ ಗುಬ್ಬಿ ಸಂತತಿ ಅಳಿಯುವುದನ್ನು ಯಶಸ್ವಿಯಾಗಿ ತಪ್ಪಿಸಬಹುದಾಗಿದೆ.
ಮೊಬೈಲ್ ಟವರ್‌ಗಳು ಗುಬ್ಬಚ್ಚಿಗಳ ಅಳಿವಿಗೆ ಕಾರಣ ಎಂದು ಹೇಳಲಾಗುತ್ತಿತ್ತು. ಆದರೆ, ಮೊಬೈಲ್ ಟವರ್‌ಗಳಿಗಿಂತಲೂ ಹೆಚ್ಚಾಗಿ ಅವುಗಳಿಗೆ ಗೂಡು ಕಟ್ಟುವ ಜಾಗವೇ ಕಾಣೆಯಾಗುತ್ತಿರುವುದು ಕಾರಣ ಎನಿಸಿದೆ. ಮುಂಚೆ ಧಾನ್ಯವನ್ನು ತೆರೆದ ಸ್ಥಿತಿಯಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆಗ ಕೆಳಗೆ ಉದುರುತ್ತಿದ್ದ ಧಾನ್ಯಗಳು ಗುಬ್ಬಿಗಳಿಗೆ ಆಹಾರವಾಗುತ್ತಿದ್ದವು. ಈಗ ಬಹುತೇಕ ಎಲ್ಲವೂ ಪ್ಲಾಸ್ಟಿಕ್‌ನಲ್ಲಿ ಪ್ಯಾಕೇಟ್ ಮಾಡಿದ ಸ್ಥಿತಿಯಲ್ಲೇ ಧಾನ್ಯಗಳು ಮಾರಾಟವಾಗುತ್ತಿವೆ. ಇದರಿಂದ ಒಂದು ಸಣ್ಣ ಕಾಳೂ ಕೂಡ ಕೆಳಗೆ ಚೆಲ್ಲುತ್ತಿಲ್ಲ. ಇದೂ ಸಹ ಗುಬ್ಬಿ ಮರೆಯಾಗಲು ಕಾರಣ ಎನಿಸಿದೆ.
ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿ ಪರಿಸರವಾದಿ ಕೋಕಿಲಾ ಅವರು ತಮ್ಮದೇ ಶೈಲಿಯಲ್ಲಿ ರೂಪಿಸಿದ ಕೃತಕ ಗೂಡುಗಳನ್ನು ವ್ಯಾಪಾರಸ್ಥರಿಗೆ ವಿತರಿಸಿ, ಧಾನ್ಯಗಳನ್ನು ನೀಡಿದರು. ಇದರ ಫಲವಾಗಿ ಅಲ್ಲಿ ಮರಳಿ ಗುಬ್ಬಿಗಳು ಬಂದಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.