
ನಾಪೋಕ್ಲು: ಜಿಲ್ಲೆಯಲ್ಲಿ ವಿವಿಧ ಜನಾಂಗದವರು ಕ್ರೀಡಾಕೂಟಗಳನ್ನು ಆಯೋಜಿಸುವುದರ ಮೂಲಕ ಸಾಮರಸ್ಯಕ್ಕೆ ಕಾರಣರಾಗುತ್ತಿದ್ದಾರೆ ಎಂದು ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್ ಪೊನ್ನಣ್ಣ ಹೇಳಿದರು.
ಸಮೀಪದ ಮೂರ್ನಾಡಿನ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಕೊಡಗು ಜಿಲ್ಲಾ ಕುಲಾಲ (ಕುಂಬಾರ) ಸಂಘದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಚಾಂಪಿಯನ್ಸ್ ಟ್ರೋಫಿ-2025 ಸೀಸನ್ 1 ಕ್ರಿಕೆಟ್ ಟೂರ್ನಿ ಉದ್ಘಾಟಿಸಿ ಅವರು ಮಾತನಾಡಿದರು.
ಜನಾಂಗದ ನಡುವೆ ಸಾಮರಸ್ಯ ಮೂಡುವ ನಿಟ್ಟಿನಲ್ಲಿ ಕ್ರೀಡಾಕೂಟಗಳು ಸಹಕಾರಿ. ಸಣ್ಣ ಸಣ್ಣ ಸಮುದಾಯದವರು ಉತ್ಸುಕರಾಗಿ ಕ್ರೀಡಾಕೂಟ ಆಯೋಜಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ. ಅವರನ್ನು ಮುಖ್ಯ ವಾಹಿನಿಗೆ ತರುವ ಕಾರ್ಯ ಆಗಬೇಕಿದೆ. ಹಿಂದುಳಿದ ವರ್ಗದವರು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದೆ ಬರಬೇಕಾಗಿದೆ. ಅದಕ್ಕಾಗಿ ಸರ್ಕಾರದಿಂದ ಪ್ರೋತ್ಸಾಹ ಅಗತ್ಯವಿದೆ ಎಂದರು.
ಎರಡು ದಿನಗಳ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ಜಿಲ್ಲಾ ಕುಲಾಲ ಸಂಘದ ಅಧ್ಯಕ್ಷ ಕುಶಾಲಪ್ಪ ಮೂಲ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಾಂತೂರು ಮುರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶನ್ ರೈ, ಯುವ ಘಟಕದ ಅಧ್ಯಕ್ಷ ಚಂದ್ರಶೇಖರ ಕುಲಾಲ್ ಮೂರ್ನಾಡು, ಕುಲಾಲ ಸಂಘದ ಖಜಾಂಚಿ ಗಿರೀಶ್, ಕ್ರೀಡಾ ಸಮಿತಿ ಅಧ್ಯಕ್ಷ ರಮೇಶ್ ಕೆ.ಆರ್., ಶಾಂತಕುಮಾರ್ ಕೆ.ಡಿ., ರಾಮ ಮಂಚಿಕೆರೆ, ದೇವಯ್ಯ ಹೆಮ್ಮಾಡು, ಚಿನ್ನಪ್ಪ ವಿರಾಜಪೇಟೆ, ಎಂ.ಡಿ. ನಾಣಯ್ಯ, ಹರೀಶ್ ಮಡಿಕೇರಿ, ಪದಾಧಿಕಾರಿಗಳು ಹಾಗೂ ಸಮುದಾಯದ ಭಾಂದವರು ಉಪಸ್ಥಿತರಿದ್ದರು. ನಂತರ ವಿವಿಧ ತಂಡಗಳ ನಡುವೆ ಪಂದ್ಯಾಟ ಜರುಗಿದವು. ಎರಡು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ.