ADVERTISEMENT

11ಕ್ಕೆ ಕೆಸರುಗದ್ದೆ ಕ್ರೀಡೋತ್ಸವ

ಮಡಿಕೇರಿ ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ರಾಜ್ಯಮಟ್ಟದ ಸ್ಪರ್ಧೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2018, 11:37 IST
Last Updated 6 ಆಗಸ್ಟ್ 2018, 11:37 IST
ಕೆಸರು ಗದ್ದೆ ಓಟ (ಸಂಗ್ರಹ ಚಿತ್ರ)
ಕೆಸರು ಗದ್ದೆ ಓಟ (ಸಂಗ್ರಹ ಚಿತ್ರ)   

ಮಡಿಕೇರಿ: ತಾಲ್ಲೂಕಿನ ಕಗ್ಗೋಡ್ಲು ಗ್ರಾಮದ ಸಿ.ಡಿ.ಬೋಪಯ್ಯ ಅವರ ಗದ್ದೆಯಲ್ಲಿ 27ನೇ ವರ್ಷದ ರಾಜ್ಯಮಟ್ಟದ ಮುಕ್ತ ಕೆಸರುಗದ್ದೆ ಕ್ರೀಡಾಕೂಟವು ಆ.11ರಂದು ನಡೆಯಲಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಎಂ.ಡಿ ಹರೀಶ್ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ, ಯೂತ್ ಹಾಸ್ಟೆಲ್‌ ಅಸೋಸಿಯೇಷನ್ ಆಫ್ ಇಂಡಿಯಾ, ಜಿಲ್ಲಾ ಯುವ ಒಕ್ಕೂಟದ ಆಶ್ರಯದಲ್ಲಿ ಈ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಅಂದು ಬೆಳಿಗ್ಗೆ 10.30ಕ್ಕೆ ಉದ್ಘಾಟನೆ ನಡೆಯಲಿದೆ. ಶಾಸಕ ಕೆ.ಜಿ.ಬೋಪಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ ಮಹೇಶ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಸಂಸದ ಪ್ರತಾಪ್ ಸಿಂಹ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಕುಮುದಾ ರಶ್ಮಿ, ಮೇಕೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಕೆ.ಜಯಂತಿ, ಉಪಾಧ್ಯಕ್ಷ ಕೆ.ಎಸ್.ಭೀಮಯ್ಯ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕಾಂಗೀರ ಸತೀಶ್, ಯೂತ್ ಹಾಸ್ಟೆಲ್ ಅಸೋಸಿಯೇಷನ್‌ ಇಂಡಿಯಾದ ಅಧ್ಯಕ್ಷ ಸಿ.ಬಿ. ದೇವಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ADVERTISEMENT

ಸಮಾರೋಪ ಸಮಾರಂಭವು ಅದೇ ದಿನ ಸಂಜೆ 5.30ಕ್ಕೆ ಹಾಕತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾರದಾ ರಾಮಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಶಿಕ್ಷಣ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ನೆಲ್ಲಚಂಡ ಕಿರಣ್ ಕಾರ್ಯಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನಾ, ಹಾಕತ್ತೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ.ಎಸ್. ವಿಷ್ಣುಕುಮಾರ್, ಸದಸ್ಯ ಪಿಯೂಷ್‌ ಪೆರೇರಾ, ಹೇಮಾವತಿ, ಸಂಕೇತ್ ಪೂವಯ್ಯ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

ಯಾವ್ಯಾವ ಕ್ರೀಡೆಗಳು: ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರಿಗೆ ಹಗ್ಗಜಗ್ಗಾಟ ಸ್ಪರ್ಧೆ, ಪ್ರಾಥಮಿಕ ಶಾಲಾ ಬಾಲಕ, ಬಾಲಕಿಯರಿಗೆ 50 ಮೀಟರ್‌ ಓಟ, ಹಿರಿಯ ಪ್ರಾಥಮಿಕ ಶಾಲಾ ಬಾಲಕರಿಗೆ 100 ಮೀಟರ್ ಓಟ, ಪ್ರೌಢಶಾಲಾ ಬಾಲಕರಿಗೆ 200 ಮೀಟರ್ ಓಟ ಹಾಗೂ ಪದವಿ ಪೂರ್ವ ಕಾಲೇಜು ಬಾಲಕ, ಬಾಲಕಿಯರಿಗೆ 300 ಮೀಟರ್ ಓಟದ ಸ್ಪರ್ಧೆ ನಡೆಯಲಿದೆ. ಸಾರ್ವಜನಿಕ ಪುರುಷರು ಮತ್ತು ಮಹಿಳೆಯರಿಗೆ ಮುಕ್ತ ಓಟ ಹಾಗೂ ಕಗ್ಗೋಡ್ಲು ಗ್ರಾಮಸ್ಥರಿಗೆ ಸಾಂಪ್ರದಾಯಿಕ ನಾಟಿ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ನವೀನ್ ದೇರಳ ಹೇಳಿದರು.

ವಾಲಿಬಾಲ್, ಥ್ರೋಬಾಲ್ ಮತ್ತು ಹಗ್ಗ ಜಗ್ಗಾಟ ತಂಡಗಳಿಗೆ ಮೈದಾನ ಶುಲ್ಕ ₹ 500. ಅದನ್ನು ಆಯಾ ತಂಡಗಳು ಆ.10ರ ಮಧ್ಯಾಹ್ನ 2ರ ಒಳಗೆ ಪಾವತಿಸಬೇಕು. ಪಂದ್ಯಾವಳಿಯಲ್ಲಿ ವಿಜೇತ ತಂಡಕ್ಕೆ ಆಕರ್ಷಕ ಪಾರಿತೋಷಕ ಮತ್ತು ನಗದು ಬಹುಮಾನಗಳನ್ನು ನೀಡಲಾಗುವುದು. ಪ್ರೌಢಶಾಲಾ ವಿಭಾಗದ ಹಗ್ಗ ಜಗ್ಗಾಟದಲ್ಲಿ ಭಾಗವಹಿಸುವವರು ತಮ್ಮ ವಿದ್ಯಾ ಸಂಸ್ಥೆಯ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ತರಬೇಕು. ಕ್ರೀಡಾಕೂಟ ಮತ್ತು ಆಟೋಟ ಸ್ಪರ್ಧೆಗಳು ಆ.11ರಂದು ಬೆಳಿಗ್ಗೆ 9ಕ್ಕೆ ಆರಂಭಗೊಳ್ಳಲಿದೆ. ಮಾಹಿತಿಗೆ ಮೊಬೈಲ್‌: 94499 52008, 97404 04520ಗೆ ಸಂಪರ್ಕಿಸಬಹುದು ಎಂದು ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಅಧ್ಯಕ್ಷ ಸಿ.ಬಿ. ದೇವಯ್ಯ, ಕಾರ್ಯದರ್ಶಿ ಅಯ್ಯಣ್ಣ ಸಿ.ಎ., ತಾಲ್ಲೂಕು ಯುವ ಒಕ್ಕೂಟದ ಕಾರ್ಯದರ್ಶಿ ಬಾಳಡಿ ದಿಲೀಪ್ ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.