ಮಡಿಕೇರಿ: ಕೊಡಗಿನಲ್ಲಿ ಮಳೆಯಿಂದಾಗಿ ರಜೆ ಇದ್ದರೂ ಕಳೆದ ವರ್ಷದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ವ್ಯತ್ಯಾಸವಾಗಲಿಲ್ಲ. ಈ ಬಾರಿ ಕೊಡಗು 4ನೇ ಸ್ಥಾನ ಪಡೆದಿದ್ದರೂ ಮುಂದಿನ ದಿನಗಳಲ್ಲಿ ಮೊದಲನೇ ಸ್ಥಾನ ಪಡೆಯಬೇಕು ಎಂದು ಕೊಡಗು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಎಲ್.ಚಿದಾನಂದಕುಮಾರ್ ತಿಳಿಸಿದರು.
ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಮತ್ತು ಕೊಡಗು ಜಿಲ್ಲಾ ಪದವಿಪೂರ್ವ ಕಾಲೇಜು ಪ್ರಾಂಶುಪಾಲರುಗಳ ಸಂಘದಿಂದ ಶುಕ್ರವಾರ ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಮತ್ತು 2025-26 ನೇ ಸಾಲಿನ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳ ಜೀವನದಲ್ಲಿ ಪ್ರಾಧ್ಯಾಪಕರಲ್ಲದೆ ಪೋಷಕರ ಪ್ರಯತ್ನವೂ ಮುಖ್ಯ ಪಾತ್ರ ವಹಿಸಿದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಪ್ರಾಂಶುಪಾಲ ಸಂಘದ ಖಜಾಂಚಿ ಅಂತೋಣಿ ವಿಜಯನ್ ಅಲ್ವಾರೀಸ್, ‘ಕನ್ನಡಿಯನ್ನು ಕಿಟಕಿಯನ್ನಾಗಿಸುವಂತ ಪ್ರಕ್ರಿಯೆ ಶಿಕ್ಷಣ. ನಮ್ಮೊಳಗಿರುವ ಪ್ರತಿಭೆಯನ್ನು ಗುರುತಿಸಲು ಶಿಕ್ಷಣ ಅತ್ಯಮೂಲ್ಯ ಕಾರ್ಯ’ ಎಂದು ತಿಳಿಸಿದರು.
ಶಿಕ್ಷಣ ಇಲಾಖೆ ಹಮ್ಮಿಕೊಳ್ಳುತ್ತಿರುವ ಎಲ್ಲಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲು ಪ್ರಾಂಶುಪಾಲ ಸಂಘ ಬಹಳ ಸಹಕಾರಿಯಾದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸುವುದು ಅತ್ಯಂತ ಗೌರವಯುತ ಕಾರ್ಯ. ಹಾಗೆಯೇ ಪೋಷಕರು ಅದಕ್ಕಾಗಿ ಶ್ರಮಿಸುತ್ತಿರುವುದು ಕೂಡ ಗಮನಾರ್ಹವೆಂದು ತಿಳಿಸಿದರು.
ಅರುಣ ಪದವಿಪೂರ್ವ ಕಾಲೇಜಿನಲ್ಲಿ 33 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ದಾಯನ ಎಸ್ ರಾಮಕೃಷ್ಣ ಅವರನ್ನು ಗೌರವಿಸಲಾಯಿತು.
2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಕಲಾವಿಭಾಗದಿಂದ ಅಫಿಯ ಶರೀಫ್, ಎಂ.ಆರ್.ನವನಿದನ್, ಎಸ್.ಸಾಜಿದ, ಕೆ.ಮೇಘಶ್ರೀ, ವಾಣಿಜ್ಯ ವಿಭಾಗದಿಂದ ಡಿಂಪಲ್ ತಮ್ಮಯ್ಯ, ಕೆ.ಎಸ್.ಶಿವಾನಿ, ವಿ.ಎಸ್.ನಿಕ್ಷಾ, ಡಿ.ಡಿ.ಸೃಜನ, ವಿಜ್ಞಾನ ವಿಭಾಗದಿಂದ ಟಿ.ವಿ.ವೈಷ್ಣವಿ, ಎ.ಆರ್.ಪನ್ಯಪನ್ನಮ್ಮ, ಪಿ.ಚಿತ್ರ, ಲಿಜಾ ಜೇಮ್ಸ್, ಎಂ. ಪಿ.ಮಮತಾ, ಪಿ.ಸಾನಿಕ ಜಾಸ್ಮಿನ್, ದೀಕ್ಷಾ ದೇಚಮ್ಮ ಅವರಿಗೆ ನಗದು ಬಹುಮಾನ ವಿತರಿಸಲಾಯಿತು.
ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ವೈಷ್ಣವಿ ಹಾಗೂ ಚಿತ್ರ ತನ್ನ ಅಭಿಪ್ರಾಯವನ್ನು ತಿಳಿಸಿ ಭಾವೋದ್ವೇಗಕ್ಕೆ ಒಳಗಾದರು.
ಶೇ 100ರಷ್ಟು ಫಲಿತಾಂಶವನ್ನು ಪಡೆದಿರುವ ಜಿಲ್ಲೆಯ ಗೋಣಿಕೊಪ್ಪಲು ಪದವಿ ಪೂರ್ವ ಕಾಲೇಜು, ಪೊನ್ನಂಪೇಟೆಯ ಸಂತ ಅಂತೋಣಿ ಪದವಿಪೂರ್ವ ಕಾಲೇಜು, ಹಳ್ಳಿಗಟ್ಟುವಿನ ಕೂರ್ಗ್ ಇನ್‌ಸ್ಟಿಟ್ಯೂಟ್ ಆಫ್ ಪದವಿ ಪೂರ್ವ ಕಾಲೇಜು, ಕುಶಾಲನಗರದ ಐಶ್ವರ್ಯ ಸಂಯುಕ್ತ ಪದವಿಪೂರ್ವ ಕಾಲೇಜು, ಕೊಡ್ಲಿಪೇಟೆಯ ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಗೋಣಿಕೊಪ್ಪಲುವಿನ ಲಯನ್ಸ್ ಪದವಿಪೂರ್ವ ಕಾಲೇಜು, ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ವಸತಿ ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ಸ್ಮರಣಿಕೆ ವಿತರಿಸಲಾಯಿತು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯನ್, ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲ ಸಂಘದ ಖಜಾಂಚಿ ಅಂತೋನಿ ವಿಜಯನ್ ಅಲ್ವಾರೀಸ್, ಪ್ರಾಂಶುಪಾಲರ ಸಂಘದ ಕಾರ್ಯದರ್ಶಿ ಎನ್.ಕೆ ಜ್ಯೋತಿ, ಪ್ರಾಂಶುಪಾಲ ಸಂಘದ ಅಧ್ಯಕ್ಷೆ ಪಿ.ಎಂ.ದೇವಕಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.