
ವಿರಾಜಪೇಟೆ: ಕೊಡಗು ಜಿಲ್ಲೆಯಲ್ಲೆ ಅತ್ಯಂತ ಹಳೆಯ ಚರ್ಚ್ ಮಾತ್ರವಲ್ಲ ನಾಡಿನ ಹಳೆಯ ಚರ್ಚ್‌ಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುವಂತದ್ದು ಪಟ್ಟಣದ ಸಂತ ಅನ್ನಮ್ಮ ಚರ್ಚ್. ಸದ್ಯ, ಪ್ರಧಾನ ಧರ್ಮಗುರು ಜೇಮ್ಸ್ ಡೊಮೆನಿಕ್ ಅವರ ನೇತೃತ್ವದಲ್ಲಿ ಕ್ರಿಸ್ಮಸ್ ಆಚರಣೆಗೆ ಎಲ್ಲ ಸಿದ್ಧತೆಗಳೂ ನಡೆಯುತ್ತಿವೆ.
ಈ ಚರ್ಚ್ 233 ವರ್ಷಗಳಷ್ಟು ಹಳೆಯದು. ಭವ್ಯ ಇತಿಹಾಸವನ್ನು ಹೊಂದಿರುವ ಸಂತ ಅನ್ನಮ್ಮ ಚರ್ಚ್ ಪಟ್ಟಣದ ಪ್ರಮುಖ ಆಕರ್ಷಣೆಯೂ ಹೌದು. ಗಾಥಿಕ್ ಶೈಲಿಯ ಸುಮಾರು 150 ಅಡಿಗಳಷ್ಟು ಎತ್ತರದ ಗೋಪುರ ಅತ್ಯಂತ ಮನೋಹರವಾಗಿದೆ.
ವಿರಾಜಪೇಟೆಯನ್ನು ನಿರ್ಮಿಸಿದ ಹಾಲೇರಿ ರಾಜರಾದ ವೀರರಾಜೇಂದ್ರ ಅವರ ಅವಧಿಯಲ್ಲಿ 1792ರಲ್ಲಿ ಈ ಸಂತ ಅನ್ನಮ್ಮ ಚರ್ಚ್ ನಿರ್ಮಾಣವಾಯಿತೆಂದು ಇತಿಹಾಸ ಹೇಳುತ್ತದೆ.
ಟಿಪ್ಪು ಸುಲ್ತಾನ್ ಹಾಗೂ ಬ್ರಿಟೀಷರ ನಡುವೆ ಯುದ್ಧಗಳು ನಡೆಯುತ್ತಿದ್ದ ವೇಳೆ ಕರ್ನಾಟಕದ ಕರಾವಳಿಯಲ್ಲಿನ ಕ್ರೈಸ್ತರು ಬ್ರಿಟೀಷರಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಭಾವಿಸಿ ಟಿಪ್ಪು ಸುಲ್ತಾನ್ 1784ರಲ್ಲಿ ಕರಾವಳಿಯಲ್ಲಿದ್ದ ಸಾವಿರಾರು ಕ್ರೈಸ್ತರನ್ನು ಸೆರೆಯಾಳುಗಳಾಗಿ ಶ್ರೀರಂಗಪಟ್ಟಣಕ್ಕೆ ಕರೆದೊಯ್ದರು. 1791ರಲ್ಲಿ ಟಿಪ್ಪು ಹಾಗೂ ಬ್ರಿಟೀಷರ ನಡುವೆ 3ನೇ ಆಂಗ್ಲೋ ಮೈಸೂರು ಯುದ್ಧದ ವೇಳೆ ಲಾರ್ಡ್ ಕಾರ್ನ್‌ವಾಲೀಸನು ಶ್ರೀರಂಗಪಟ್ಟಣದ ಮೇಲೆ ದಾಳಿ ಮಾಡಿದಾಗ ಬಂಧಿಗಳಾಗಿದ್ದ ಕ್ರೈಸ್ತರು ತಪ್ಪಿಸಿಕೊಳ್ಳುತ್ತಾರೆ. ಆದರೆ, ತಮ್ಮ ತಾಯ್ನಾಡು ಕರಾವಳಿ ಇನ್ನೂ ಟಿಪ್ಪುವಿನ ವಶದಲ್ಲಿರುವುರಿಂದ ಅಲ್ಲಿ ಹೋಗಿ ಮತ್ತೆ ನೆಲೆಸುವುದು ಅವರಿಗೆ ಕಷ್ಟಕರವಾಗಿತ್ತು. ಹಾಗಾಗಿ, ಇವರು ಸ್ವಾಮಿ ಜುವಾಂವ್ ಡಿಕೋಸ್ಟ ಅವರೊಂದಿಗೆ ಕೊಡಗಿನ ರಾಜ ವೀರರಾಜೇಂದ್ರನ ಆಶ್ರಯವನ್ನು ಕೇಳುತ್ತಾರೆ.
ಟಿಪ್ಪುವಿನ ವಿರೋಧಿಯಾಗಿದ್ದ ವೀರರಾಜೇಂದ್ರ ಸಹಜವಾಗಿ ಈ ಕ್ರೈಸ್ತರಿಗೆ ಆಶ್ರಯ ನೀಡಿ ತಾನು ಹೊಸದಾಗಿ ಕಟ್ಟಿದ್ದ ವೀರರಾಜೇಂದ್ರಪೇಟೆಯಲ್ಲಿ (ವಿರಾಜಪೇಟೆ) ನೆಲೆಸಲು ಅಗತ್ಯ ವ್ಯವಸ್ಥೆ ಕಲ್ಪಿಸಿ, ಪಟ್ಟಣದಲ್ಲಿ ಚರ್ಚ್‌ವೊಂದನ್ನು 1792ರಲ್ಲಿ ಕಟ್ಟಿಸುತ್ತಾನೆ. ಈಗಲೂ ವೀರರಾಜೇಂದ್ರ ಅವರ ಹಸ್ತಾಕ್ಷರ ‘ವಿ’ ಇರುವ ಕಂಚಿನ ದೀಪಗಳು ಚರ್ಚ್‌ನಲ್ಲಿವೆ. ಹೀಗೆ ಅಸ್ತಿತ್ವಕ್ಕೆ ಬಂದ ಸಂತ ಅನ್ನಮ್ಮ ಚರ್ಚ್‌ಗೆ ಸ್ವಾಮಿ ಜುವಾಂವ್ ಡಿಕೋಸ್ಟ ಮೊದಲ ಧರ್ಮಗುರುವಾಗುತ್ತಾರೆ.
1848ರವರೆಗೆ ಸಂತ ಅನ್ನಮ್ಮ ದೇವಾಲಯದ ಕೊಡಗಿನ ಏಕೈಕ ಕ್ರೈಸ್ತ ದೇವಾಲಯವಾಗಿತ್ತು ಎನ್ನುವುದು ವಿಶೇಷ. 1868ರಲ್ಲಿ ವಿರಾಜಪೇಟೆ ಧರ್ಮಕೇಂದ್ರದ ಧರ್ಮಗುರು ಗಿಲೋನ್ ಅವರು ಹಳೆಯ ಚರ್ಚ್ ಇದ್ದ ಸ್ಥಳದಲ್ಲಿಯೇ ಗೋಥಿಕ್ ಮಾದರಿಯ ಈಗಿನ ಚರ್ಚ್ ಅನ್ನು ಅಂದಿನ ರಾಜ ಲಿಂಗರಾಜೇಂದ್ರ ಅವರ ಸಹಕಾರದಿಂದ ಕಟ್ಟಿಸಿದರು. ಬ್ರಿಟೀಷ್ ಸರ್ಕಾರ ಹಾಗೂ ಸಾಹುಕಾರ್ ಸಾಲ್ವಾದೊರ್ ಪಿಂಟೋ ಅವರ ಸಹಾಯದಿಂದ ಸುಮಾರು 150 ಅಡಿ ಎತ್ತರದ ಸುಂದರ ಗೋಪುರವನ್ನೊಳಗೊಂಡ ಚರ್ಚ್ ಅನ್ನು ಕಟ್ಟಲಾಯಿತು. ಪ್ಯಾರಿಸ್‌ನಿಂದ 1891ರಲ್ಲಿ 2 ದೊಡ್ಡ ಗಂಟೆಗಳನ್ನು ತರಿಸಿ ಅಳವಡಿಸಲಾಯಿತು.
ಹೀಗೆ, ನಿರ್ಮಾಣವಾದ ಸಂತ ಅನ್ನಮ್ಮ ಚರ್ಚ್‌ನ ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ 2015ರಲ್ಲಿ ಧರ್ಮಗುರು ಡಾ.ಆರೋಗ್ಯ ಸ್ವಾಮಿ ಅವರ ನೇತೃತ್ವದಲ್ಲಿ ನವೀಕರಣ ಕಾರ್ಯ ನಡೆಯಿತು. ಪ್ರಸ್ತುತ ಜೇಮ್ಸ್ ಡೊಮೆನಿಕ್ ಅವರು ಚರ್ಚ್‌ನ ಧರ್ಮಗುರುವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 233 ವರ್ಷಗಳ ಇತಿಹಾಸವನ್ನು ಹೊಂದಿರುವ ಸಂತ ಅನ್ನಮ್ಮ ಚರ್ಚ್‌ನಲ್ಲಿ ಇದೀಗ ಕ್ರಿಸ್ಮಸ್ ಅನ್ನು ಸಡಗರ ಸಂಭ್ರಮದಿಂದ ಅದ್ಧೂರಿಯಾಗಿ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.