ADVERTISEMENT

ಎಲ್ಲಾ ರಂಗಗಳಲ್ಲೂ ರಾಜ್ಯ ಸರ್ಕಾರ ವಿಫಲ: ರವಿಕಾಳಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2024, 4:07 IST
Last Updated 2 ಮಾರ್ಚ್ 2024, 4:07 IST

ಮಡಿಕೇರಿ: ರಾಜ್ಯಸರ್ಕಾರ ಎಲ್ಲ ರಂಗಗಳಲ್ಲೂ ವಿಫಲವಾಗಿದೆ ಎಂದು ಬಿಜೆಪಿಯ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎನ್.ಎಂ.ರವಿಕಾಳಪ್ಪ ಆರೋಪಿಸಿದರು.

ಜನರಲ್ಲಿ ಗೃಹಸಚಿವರಾದರೂ ಒಳ್ಳೆಯವರು ಎಂಬ ಭಾವನೆ ಇತ್ತು. ಆದರೆ, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ ಅದೂ ಕರಗಿ ಹೋಗುತ್ತಿದೆ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಹೇಳಿದರು.

ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಯನ್ನು ರಾಜ್ಯಸಭೆ ಸದಸ್ಯ ನಾಸಿರ್ ಹುಸೇನ್‍ ಬೆಂಬಲಿಗರು ಕೂಗಿದ್ದಾರೆ ಎನ್ನಲಾಗುವ ವಿಡಿಯೊವನ್ನು ಬಿಜೆಪಿ ಬಿಡುಗಡೆ ಮಾಡಿಲ್ಲ. ಅದು ಮಾಧ್ಯಮದವರೇ ತೋರಿಸಿದ್ದು. ಈ ಕುರಿತು ತಕ್ಷಣವೇ ಸರ್ಕಾರ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಯಾವುದೇ ಕ್ರಮಗಳನ್ನು ಸರ್ಕಾರ ಕೈಗೊಂಡಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಸಂಸದ ಡಿ.ಕೆ.ಸುರೇಶ್ ಸಹ ಕೆಲವು ದಿನಗಳ ಹಿಂದೆ ದೇಶ ವಿಭಜಿಸುವ ಹೇಳಿಕೆ ನೀಡಿದ್ದರು. ಈಗ ವಿಧಾನಸೌಧದಲ್ಲಿ ದೇಶಕ್ಕೆ ವಿರುದ್ಧವಾದ ಘೋಷಣೆ ಕೂಗಲಾಗಿದೆ. ಇದನ್ನೆಲ್ಲ ನೋಡಿಕೊಂಡು ಸರ್ಕಾರ ಸುಮ್ಮನಿರುವುದನ್ನು ಜನರು ಗಮನಿಸುತ್ತಿದ್ದು, ಮುಂಬರುವ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಕೊಡಗಿನಲ್ಲಿ ಜೀತಪದ್ಧತಿ ಇಲ್ಲವೇ ಇಲ್ಲ. ಆದರೆ, ಕೇವಲ ಬಿಜೆಪಿ ನಾಯಕರನ್ನಷ್ಟೇ ಗುರಿಯಾಗಿಸಿಕೊಂಡು ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.

ವನ್ಯಜೀವಿ ಉತ್ಪನ್ನಗಳ ಬಳಕೆ ಕುರಿತು ಎ.ಎಸ್.ಪೊನ್ನಣ್ಣ ಅವರು ನ್ಯಾಯಾಲಯದ ತಡೆಯಾಜ್ಞೆ ಇದೆ ಎಂದು ಹೇಳುತ್ತಾರೆ. ಆದರೆ, ಅವರೇ ಸ್ವತಃ ಮುಖ್ಯಮಂತ್ರಿಗೆ ಕಾನೂನು ಸಲಹೆಗಾರರು. ಅವರೇ ಸಲಹೆ ಕೊಟ್ಟು ಕೊಡಗು ಸೇರಿದಂತೆ ಇತರೆ ಭಾಗಗಳನ್ನು ಈ ಕಾಯ್ದೆಯಿಂದ ಹೊರಗಿಡಬಹುದಿತ್ತಲ್ಲವೇ ಎಂದೂ ಪ್ರಶ್ನಿಸಿದರು.

ಪರಿಶಿಷ್ಟಜಾತಿ, ಪರಿಶಿಷ್ಟಪಂಗಡದವರ ಅಭಿವೃದ್ಧಿಗೆ ಸಂಬಂಧಿಸಿದ ₹ 11 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಹಣವನ್ನು ಬೇರೆ ಉದ್ದೇಶಕ್ಕೆ, ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗಿದೆ. ಇದು ದಲಿತರು ಮತ್ತು ಶೋಷಿತರ ಕುರಿತ ಸಿದ್ದರಾಮಯ್ಯ ಅವರ ಮೊಸಳೆ ಕಣ್ಣೀರಿಗೆ ಸಾಕ್ಷಿ ಎಂದು ಅವರು ದೂರಿದರು.

ಬಿಜೆಪಿ ಜಿಲ್ಲಾ ವಕ್ತಾರ ತಳೂರು ಕಿಶೋರ್ ಕುಮಾರ್ ಮಾತನಾಡಿ, ‘ಸರ್ಕಾರದ ಸಚಿವರು, ಶಾಸಕರು ರಾಜ್ಯದ ಪ್ರವಾಸ ಮಾಡುತ್ತಿಲ್ಲ. ಗ್ಯಾರಂಟಿಗಳನ್ನು ಸರಿಯಾಗಿ ಅನುಷ್ಠಾನಕ್ಕೆ ತರುತ್ತಿಲ್ಲ. ರಾಜ್ಯದಲ್ಲಿ ಒಂದೇ ಒಂದು ಕಡೆಯೂ ರಸ್ತೆ, ಚರಂಡಿ ಸೇರಿದಂತೆ ಯಾವುದೇ ಕಾಮಗಾರಿಗಳೂ ಆಗುತ್ತಿಲ್ಲ. ಇದು ಶೂನ್ಯ ಅಭಿವೃದ್ಧಿ ಸರ್ಕಾರ ಎಂದು ಕಿಡಿಕಾರಿದರು.

ಪಕ್ಷದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ‘ಸಂಸತ್ತಿನಲ್ಲಿ ಘೋಷಣೆ ಕೂಗಿದ ಯುವಕರಿಗೆ ಸಂಸದ ಪ್ರತಾಪಸಿಂಹ ಪಾಸ್ ನೀಡುವ ಮೂಲಕ ದೇಶದ್ರೋಹದ ಕೆಲಸ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಆದರೆ, ಈಗ ಕಾಂಗ್ರೆಸ್ ಪಕ್ಷದ ಬೆಂಬಲಿಗರೇ ದೇಶವಿರೋಧಿ ಘೋಷಣೆಯನ್ನು ವಿಧಾನಸಭೆಯಲ್ಲಿ ಕೂಗಿದೆ. ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.

ಪಕ್ಷದ ಜಿಲ್ಲಾ ವಕ್ತಾರ ಅರುಣ್‌ಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್, ಉಪಾಧ್ಯಕ್ಷ ಮನು ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.