ADVERTISEMENT

ಮಡಿಕೇರಿ: ಜೋಡುಪಾಲದ ಸರ್ಕಾರಿ ಶಾಲೆ ಈಗ ಸ್ಮಾರ್ಟ್‌!

ವಿದ್ಯಾರ್ಥಿಗಳ ಸಂಖ್ಯೆ 1ರಿಂದ 25ಕ್ಕೆ ಏರಿಕೆ, ಒಂದೇ ಸೂರಿನಡಿ ಯೋಗ, ಕರಾಟೆ, ನೃತ್ಯ ಶಿಕ್ಷಣವೂ ಲಭ್ಯ

ಕೆ.ಎಸ್.ಗಿರೀಶ್
Published 2 ಮಾರ್ಚ್ 2024, 6:32 IST
Last Updated 2 ಮಾರ್ಚ್ 2024, 6:32 IST
<div class="paragraphs"><p>ಜೋಡುಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಶಿಕ್ಷಣ ನೀಡಲಾಗುತ್ತಿದೆ</p></div>

ಜೋಡುಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಶಿಕ್ಷಣ ನೀಡಲಾಗುತ್ತಿದೆ

   

ಮಡಿಕೇರಿ: 2018ರಲ್ಲಿ ಭೂಕುಸಿತ ಉಂಟಾದ ನಂತರ ಈ ಶಾಲೆಯಲ್ಲಿ ಉಳಿದಿದ್ದು ಕೇವಲ ಒಂದೇ ವಿದ್ಯಾರ್ಥಿ. ಸತತ ಮೂರು ತಿಂಗಳ ಕಾಲ ಒಂದೇ ಮಗುವಿಗೆ ಶಿಕ್ಷಕರು ಪಾಠ ಹೇಳಿದರು. ನಂತರ, ಶಾಲೆಯು ಶೈಕ್ಷಣಿಕವಾಗಿ ಶಕ್ತಿಶಾಲಿಯಾಗುತ್ತಿದ್ದಂತೆ ಈಗ 25 ವಿದ್ಯಾರ್ಥಿಗಳು ಶಾಲೆಯಲ್ಲಿದ್ದಾರೆ. ಮುಂಬರುವ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ಸಂಖ್ಯೆ 35 ದಾಟುವ ನಿರೀಕ್ಷೆ ಇದೆ.

ಇದು ತಾಲ್ಲೂಕಿನ ಜೋಡುಪಾಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾಧನೆ. ಸದ್ಯ, ಈ ಶಾಲೆ ಈಚೆಗಷ್ಟೇ ಸ್ಮಾರ್ಟ್ ಶಾಲೆಯಾಗಿ ಬದಲಾಗಿರುವುದು ವಿಶೇಷ.

ADVERTISEMENT

ಈ ಶಾಲೆಯಲ್ಲಿ ಈಗ ಮಕ್ಕಳಿಗೆ ಯೋಗ ಶಿಕ್ಷಣ ನೀಡಲಾಗುತ್ತಿದೆ. ಕರಾಟೆ ಕಲಿಸಲಾಗುತ್ತಿದೆ. ನೃತ್ಯವನ್ನೂ ಹೇಳಿಕೊಡಲಾಗುತ್ತಿದೆ. ಜೊತೆಗೆ, ಕಂಪ್ಯೂಟರ್ ಶಿಕ್ಷಣವೂ ಇಲ್ಲಿ ಲಭ್ಯ.

ಸುತ್ತಮುತ್ತಲ ಗ್ರಾಮಗಳಾದ ಜೋಡುಪಾಲ, 2ನೇ ಮೊಣ್ಣಂಗೇರಿ, 10ನೇ ಮೈಲು ಗ್ರಾಮಗಳಿಂದ ವಿದ್ಯಾರ್ಥಿಗಳು ಈ ಶಾಲೆಗೆ ಬರುತ್ತಾರೆ. ಮುಖ್ಯಶಿಕ್ಷಕಿ ಪಿ.ಬಿ.ದಮಯಂತಿ, ಶಿಕ್ಷಕಿಯರಾದ ಕೆ.ಪಿ.ಅಮರಾವತಿ ಹಾಗೂ ಕವಿತಾ ಅವರು ಮಕ್ಕಳಿಗೆ ಬೋಧಿಸುತ್ತಿದ್ದಾರೆ.

ಶಾಲೆಯಲ್ಲಿ ವಿಶಾಲವಾದ ಆಟದ ಮೈದಾನವೂ ಇದೆ. ಕ್ರೀಡಾ ಚಟುವಟಿಕೆಗಳಲ್ಲೂ ಮುಂದಿರುವ ಇಲ್ಲಿನ ವಿದ್ಯಾರ್ಥಿಗಳು ತಾಲ್ಲೂಕು ವಿಭಾಗೀಯ ಮಟ್ಟಕ್ಕೆ ಶಟಲ್‌ ಬ್ಯಾಡ್ಮಿಂಟನ್‌ ಮತ್ತು ಕಬಡ್ಡಿಯಲ್ಲಿ ಜಯ ಗಳಿಸಿ ಸಾಧನೆ ಮಾಡಿದ್ದಾರೆ. ತಾಲ್ಲೂಕು ಮಟ್ಟದ ಛದ್ಮವೇಷ ಸ್ಪರ್ಧೆಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದಿದ್ದರೆ, ಕಳೆದ ವರ್ಷ ‘ಇನ್‌ಸ್ಪೈರ್ಡ್‌’ ಪ್ರಶಸ್ತಿಗೆ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. 2 ವರ್ಷಗಳ ಹಿಂದೆ ಯಕ್ಷಗಾನದ ತರಬೇತಿಯನ್ನೂ ವಿದ್ಯಾರ್ಥಿಗಳಿಗೆ ನೀಡಿದ್ದು, ವಿದ್ಯಾರ್ಥಿಗಳು ಪ್ರದರ್ಶನವನ್ನೂ ನೀಡಿದ್ದರು.

ಹಳೆಯ ವಿದ್ಯಾರ್ಥಿಗಳ ಸಂಘವೂ ಅಸ್ತಿತ್ವದಲ್ಲಿದ್ದು, ಅವರೆಲ್ಲರೂ ಶಾಲೆಯ ಅಭಿವೃದ್ಧಿಗೆ ನೆರವಾಗುತ್ತಿರುವುದು ವಿಶೇಷ.

‘ಶಾಲೆಯ ಮೇಲುಸ್ತುವರಿ ಸಮಿತಿಯ ಸದಸ್ಯ ಕೆ.ಆರ್.ರಾಜು ಅವರ ಸಹಕಾರದಿಂದ ‘ಹಿಲ್ ಕ್ರಿಸ್ಟ್ ರೆಸಾರ್ಟ್‌’ನ ಮಾಲೀಕ ಮಾಣಿಕಂ ಅವರು ಶಾಲೆಗೆ ಕಂಪ್ಯೂಟರ್, ‌ಪ್ರಿಂಟರ್, ಧ್ವನಿವರ್ಧಕಗಳು, ಮೇಜುಗಳು ಹಾಗೂ ಇನ್ನಿತರ ಪರಿಕರಗಳನ್ನು ನೀಡಿದರು. ಐಎಸ್‌ಎಫ್ ಮತ್ತು ಐಇಇಇ ಸಂಸ್ಥೆಯವರು ಶಾಲೆಗೆ ಸ್ಮಾರ್ಟ್‌ ಕ್ಲಾಸ್‌ಗೆ ಬೇಕಾದ ಎಲ್ಲ ಪರಿಕರಗಳನ್ನು ನೀಡಿದ್ದು, ಈಚೆಗೆ ಸಂಸ್ಥೆಯ ರಾಜ್ಯ ಸಂಯೋಜಕ ಎಚ್.ವಿ.ಸ್ವರಾಜ್ ಅವರು ಉದ್ಘಾಟನೆಯನ್ನೂ ಮಾಡಿದ್ದರು’ ಎಂದು ಮುಖ್ಯ ಶಿಕ್ಷಕಿ ದಮಯಂತಿ ಹೇಳಿದರು.

ಇದೇ ಸಂಸ್ಥೆಯವರು ಶಾಲೆಗೆ ವೈಫೈ ಸಂಪರ್ಕ, ಸೌರಶಕ್ತಿಯ ಯುಪಿಎಸ್‌ ಹಾಗೂ ಸ್ಮಾರ್ಟ್‌ ಟಿ.ವಿಯನ್ನೂ ನೀಡಿದ್ದಾರೆ ಎಂದರು.

ಶಾಲಾ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಜಯಪ್ರಕಾಶ್ ಮತ್ತು ಸದಸ್ಯರೆಲ್ಲರೂ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ. ಹಳೆಯ ವಿದ್ಯಾರ್ಥಿಗಳ ಸಂಘದರು ಸಾರ್ವಜನಿಕರು ನೆರವು ನೀಡುತ್ತಿರುವುದರಿಂದ ಶಾಲೆಯು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇದರಲ್ಲಿ ಎಲ್ಲ ಶಿಕ್ಷಕಿಯರ ಶ್ರಮವೂ ಇದೆ.
-ಪಿ.ಬಿ.ದಮಯಂತಿ, ಮುಖ್ಯಶಿಕ್ಷಕಿ.
ಜೋಡುಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನ ಕಲಿಯುತ್ತಿರುವುದು
ಜೋಡುಪಾಲದ ಸರ್ಕಾರಿ ಹಿರಿಯ ಪ್ರಾ‌ಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕರಾಟೆ ಶಿಕ್ಷಣ ನೀಡುತ್ತಿರುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.