ADVERTISEMENT

ಸಕಲೇಶಪುರ: ಬೀದಿ ಬದಿ ವ್ಯಾಪಾರಿಗಳ ತೆರವು

ಸಕಲೇಶಪುರ: ಪಾದಾಚಾರಿ ಸುಗಮ ಸಂಚಾರಕ್ಕೆ ಅನುವು, ಜಿಲ್ಲಾಧಿಕಾರಿ ಆದೇಶದಂತೆ ಕ್ರಮ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 8:41 IST
Last Updated 30 ಡಿಸೆಂಬರ್ 2025, 8:41 IST
ಸಕಲೇಶಪುರದ ಹಳೆ ಬಸ್‌ ನಿಲ್ದಾಣ ಸಮೀಪದ ಬೀದಿ ಬದಿಯ ಪೆಟ್ಟಿಗೆ ಅಂಗಡಿಗಳನ್ನು ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವುಗೊಳಿಸಿದರು
ಸಕಲೇಶಪುರದ ಹಳೆ ಬಸ್‌ ನಿಲ್ದಾಣ ಸಮೀಪದ ಬೀದಿ ಬದಿಯ ಪೆಟ್ಟಿಗೆ ಅಂಗಡಿಗಳನ್ನು ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವುಗೊಳಿಸಿದರು   

ಸಕಲೇಶಪುರ: ಜಿಲ್ಲಾಧಿಕಾರಿ ಕೆ.ಎಸ್‌.ಲತಾಕುಮಾರಿ ಅವರ ಆದೇಶದ ಮೇರೆಗೆ ಪಟ್ಟಣದ ಹಳೆ ಬಸ್‌ ನಿಲ್ದಾಣ ಹಾಗೂ ಹೆದ್ದಾರಿಯಲ್ಲಿನ ಬೀದಿ ಬದಿ ವ್ಯಾಪಾರಿಗಳನ್ನು ಸೋಮವಾರ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವುಗೊಳಿಸಿದರು.

ಬೆಳಿಗ್ಗೆ 5.30ರಿಂದಲೇ ಜೆಸಿಬಿ, ಟ್ರ್ಯಾಕ್ಟರ್, ಪೌರಕಾರ್ಮಿಕರೊಂದಿಗೆ ತೆರವು ಕಾರ್ಯಾಚರಣೆ ಪ್ರಾರಂಭ ಮಾಡಲಾಯಿತು. ಹಳೆ ಬಸ್‌ ನಿಲ್ದಾಣದ ಅಂಚೆ ಕಚೇರಿ ಪಕ್ಕ ಹಳೆಯ ಅಬಕಾರಿ ಇಲಾಖೆ ಹಾಗೂ ಉಪ ನೋಂದಣಾಧಿಕಾರಿಗಳ ಕಚೇರಿ ಇದ್ದ ಸ್ಥಳದಲ್ಲಿ, ಹಳೆ ಬಸ್‌ ನಿಲ್ದಾಣ ಮುಂಭಾಗ, ಪುರಸಭೆ ವಾಣಿಜ್ಯ ಸಂಕೀರ್ಣ, ತಹಶೀಲ್ದಾರ್‌ ನಿವಾಸ ಪಕ್ಕ ಸೇರಿದಂತೆ ಬೀದಿ ಬದಿಯ ಪೆಟ್ಟಿಗೆ ಅಂಗಡಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸಲಾಯಿತು. ಆ ಮೂಲಕ ಪಾದಾಚಾರಿಗಳ ಸುಗಮ ಸಂಚಾರಕ್ಕೆ ಅನುವು ಕಲ್ಪಿಸಲಾಯಿತು.

ಡಿ.23ರಂದು ಪಟ್ಟಣದಲ್ಲಿ ಕಾಲ್ನಡಿಗೆಯಲ್ಲಿ ತೆರಳಿ ಪರಿಶೀಲಿಸಿದ್ದ ಜಿಲ್ಲಾಧಿಕಾರಿಯು, ಪಾದಚಾರಿಗಳ ದಾರಿಯನ್ನು ಒತ್ತುವರಿ ಮಾಡಿಕೊಂಡಿದ್ದ ಬೀದಿ ಬದಿಯ ವ್ಯಾಪಾರಿಗಳನ್ನು ಕೂಡಲೇ ತೆರವುಗೊಳಿಸುವಂತೆ ಅಂದೇ ಪುರಸಭೆ ಮುಖ್ಯಾಧಿಕಾರಿ ಟಿ.ಸಿ.ಮಹೇಶ್ವರಪ್ಪ ಅವರಿಗೆ ಆದೇಶಿಸಿದ್ದರು.

ADVERTISEMENT

ಪ್ರತಿರೋಧ: ಹಲವು ವರ್ಷಗಳಿಂದ ಹಳೆ ಬಸ್‌ ನಿಲ್ದಾಣದ ಸುತ್ತಮುತ್ತ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೇವೆ. ಏಕಾಏಕಿ ತೆರವುಗೊಳಿಸಿದರೆ ಎಲ್ಲಿ ವ್ಯಾಪಾರ ಮಾಡುವುದು. ಬಿ.ಎಂ.ರಸ್ತೆ ಮಾತ್ರವಲ್ಲದೇ ಅಶೋಕ ರಸ್ತೆ, ಆಜಾದ್ ರಸ್ತೆಗಳಲ್ಲಿಯೂ ಪಾದಚಾರಿಗಳು ನಡೆದಾಡದಂತೆ ಫುಟ್‌ಪಾತ್ ಒತ್ತುವರಿ ಮಾಡಿಕೊಂಡಿರುವುದನ್ನು ಸಹ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಆಗ್ರಹಿಸಿದರು.

ಹೂವು, ಹಣ್ಣು, ತರಕಾರಿ ವ್ಯಾಪಾರಕ್ಕೆ ನಮಗೆ ಕೂಡಲೇ ಬದಲಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಭರವಸೆ: ತೆರವುಗೊಳಿಸಿರುವ ಕೆಲವು ಬೀದಿ ಬದಿಯ ವ್ಯಾಪಾರಿಗಳಿಗೆ ಹಳೆ ತಾಲ್ಲೂಕು ಕಚೇರಿ ಇದ್ದ ಜಾಗದ ಸುತ್ತಲೂ 6X6 ಅಡಿ ಅಳತೆಯ ಸ್ಥಳವನ್ನು ನೀಡಲು ವ್ಯವಸ್ಥೆ ಮಾಡಲಾಗಿದ್ದು, ಮೇಲಧಿಕಾರಿಗಳ ಆದೇಶ ಮೇಲೆ ಶೀಘ್ರದಲ್ಲಿಯೇ ಜಾಗ ನೀಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಭರವಸೆ ನೀಡಿದರು.

ಸಕಲೇಶಪುರದ ಹಳೆ ಬಸ್ಸು ನಿಲ್ದಾಣ ಜಾಗದಲ್ಲಿದ್ದ ಬೀದಿ ಬದಿಯ ಪೆಟ್ಟಿಗೆ ಅಂಗಡಿಗಳನ್ನು ಸೋಮವಾರ ಬೆಳಿಗ್ಗೆ ಜಿಲ್ಲಾಧಿಕಾರಿಗಳ ಆದೇಶದ ಮೇಲೆ ಪುರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತೆರವುಗೊಳಿಸಿದರು

‘ಸೂಚನೆ ಕಾಲಾವಕಾಶ ನೀಡಲಾಗಿತ್ತು’

ಬೀದಿ ಬದಿಯ ವ್ಯಾಪಾರಿಗಳಿಂದ ಪಾದಚಾರಿಗಳು ಫುಟ್‌ಪಾತ್‌ ಬಿಟ್ಟು ರಸ್ತೆಯಲ್ಲಿ ನಡೆದಾಡುತ್ತಿದ್ದಾರೆ. ಇದರಿಂದ ಹಲವು ರಸ್ತೆ ಅಪಘಾತಗಳು ಸಂಭವಿಸಿವೆ. ಈ ಸಮಸ್ಯೆನ್ನು ಜಿಲ್ಲಾಧಿಕಾರಿಗಳೇ ಖುದ್ದು ವೀಕ್ಷಿಸಿ ತೆರವುಗೊಳಿಸುವಂತೆ 7 ದಿನಗಳ ಹಿಂದೆಯೇ ಆದೇಶ ಮಾಡಿದ್ದರು. ಪುರಸಭೆ ಸಿಬ್ಬಂದಿ ಪ್ರತಿ ಅಂಗಡಿಗಳಿಗೆ ತರಳಿ ತಾವಾಗಿಯೇ ಅಂಗಡಿಗಳನ್ನು ತೆರವುಗೊಳಿಸುವಂತೆ ಸೂಚನೆ ನೀಡಿ ಕಾಲಾವಕಾಶ ಸಹ ನೀಡಲಾಗಿತ್ತು. ಆದರೂ ಸಹ ಯಾರೊಬ್ಬರೂ ಅಂಗಡಿಯನ್ನು ತೆರವುಗೊಳಿಸದೆ ಇದ್ದ ಕಾರಣ ಪುರಸಭೆಯಿಂದಲೇ ಕಾರ್ಯಾಚರಣೆ ಮಾಡಲಾಯಿತು ಎಂದು ಮುಖ್ಯಾಧಿಕಾರಿ ಟಿ.ಸಿ.ಮಹೇಶ್ವರಪ್ಪ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.