ADVERTISEMENT

ಸಾಕು ನಾಯಿ ದಾಳಿ ಮಾಡಿದ್ರೆ ಮಾಲೀಕರಿಗೆ ಜೈಲು ಶಿಕ್ಷೆ: ಪೊಲೀಸರ ಖಡಕ್ ಎಚ್ಚರಿಕೆ

ಸಾಕಿದ ನಾಯಿಗಳನ್ನು ಜಾಗರೂಕವಾಗಿ ನೋಡಿಕೊಳ್ಳುವಂತೆ ಪೊಲೀಸರಿಂದ ಖಡಕ್ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2023, 11:14 IST
Last Updated 18 ಆಗಸ್ಟ್ 2023, 11:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನ ಕಳೆದಂತೆ ಸಾಕು ನಾಯಿಗಳ ಅಬ್ಬರ ಹೆಚ್ಚಾಗತೊಡಗಿದೆ. ಬೀದಿನಾಯಿಗಳಿಗಿಂತ ಹೆಚ್ಚಾಗಿ ಸಾಕುನಾಯಿಗಳೇ ದಾರಿಹೋಕರ ಮೇಲೆರಗುತ್ತಿವೆ. ಬುಧವಾರವಷ್ಟೇ ಆರೋಗ್ಯ ಇಲಾಖೆಯ ಕಾರ್ಯಕರ್ತೆಯ ಮೇಲೆ ಸಾಕು ನಾಯಿಯೊಂದು ದಾಳಿ ನಡೆಸಿ ತೀವ್ರತರವಾಗಿ ಗಾಯಗೊಳಿಸಿದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಎಲ್ಲ ಸಾಕು ನಾಯಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

‘ಒಂದು ವೇಳೆ ಸಾಕು ನಾಯಿಗಳನ್ನು ಸರಿಯಾಗಿ ನೋಡಿಕೊಳ್ಳದೇ ಅವುಗಳು ಸಾರ್ವಜನಿಕರ ಮೇಲೆ ದಾಳಿ ನಡೆಸಿದರೆ ನಾಯಿಗಳನ್ನು ಸಾಕಿದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಐಪಿಸಿ ಸೆಕ್ಷನ್ 289 ಅಡಿ ಪ್ರಕರಣ ದಾಖಲಿಸಿದರೆ ಮಾಲೀಕರಿಗೆ 6 ತಿಂಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಅವಕಾಶ ಇದೆ. ಇನ್ನು ಮುಂದೆ ಇದೇ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.

‘ಪಾರಾಣೆಯ ಕೊಣಂಜಗೇರಿಯ ನಿವಾಸಿ ಬೆಳತಂಡ ಮಾಚಯ್ಯ ಅವರ ಮನೆಗೆ ಮಗುವಿನ ಆರೋಗ್ಯ ತಪಾಸಣೆಗೆ ತೆರಳಿದ್ದ ಸಮುದಾಯ ಆರೋಗ್ಯ ಅಧಿಕಾರಿ ಕೆ.ಕೆ.ಭವ್ಯಾ ಅವರ ಮೇಲೆ ಸಾಕು ನಾಯಿ ದಾಳಿ ನಡೆಸಿ ದೇಹದ ಹಲವು ಭಾಗಗಳನ್ನು ಕಚ್ಚಿದೆ. ಇದನ್ನು ಗಂಭೀರವಾಗಿ ಪರಿಗಣಿಸಿ ನಾಯಿಯನ್ನು ಸಾಕಿದ್ದ ಮಾಚಯ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ದಾಳಿ ಮಾಡುವ ಸಾಕುನಾಯಿಗಳ ಮಾಹಿತಿ ನೀಡಲು ಮನವಿ

ಕೊಡಗು ಜಿಲ್ಲೆಯಾದ್ಯಂತ ಸಾರ್ವಜನಿಕರ ಮೇಲೆ ದಾಳಿ ಮಾಡುವಂತಹ ಸಾಕು ನಾಯಿಗಳು ಹಾಗೂ ಅವುಗಳ ಮಾಲೀಕರ ಕುರಿತು ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ದಾಳಿ ಮಾಡಿದ ಘಟನೆಗಳು ಕಂಡು ಬಂದ ಕೂಡಲೇ ಸಮೀಪದ ಪೊಲೀಸ್ ಠಾಣೆ ಅಥವಾ 112ಗೆ ಕರೆ ಮಾಡಿ ವಿಷಯ ತಿಳಿಸುವಂತೆ ಕೋರಿದ್ದಾರೆ. ಇಲ್ಲವೇ ಕೆಎಸ್‌ಪಿ ತಂತ್ರಾಂಶದ ಮೂಲಕವೂ ಮಾಹಿತಿ ನೀಡಬಹುದು. ಮಾಹಿತಿ ನೀಡುವ ಸಾರ್ವಜನಿಕರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.