ADVERTISEMENT

ಉಪ ಪ್ರಾಂಶುಪಾಲೆ ಸೇರಿ ಐವರ ವಿರುದ್ಧ ದೂರು

ಸೈನಿಕ ಶಾಲೆ ವಿದ್ಯಾರ್ಥಿ ಸಾವು: ಕೊಲೆ ಆರೋಪ

​ಪ್ರಜಾವಾಣಿ ವಾರ್ತೆ
Published 24 ಜೂನ್ 2018, 17:02 IST
Last Updated 24 ಜೂನ್ 2018, 17:02 IST
ಚಿಂಗಪ್ಪ
ಚಿಂಗಪ್ಪ   

ಮಡಿಕೇರಿ/ಕುಶಾಲನಗರ: ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕೂಡಿಗೆ ಕೃಷಿ ಫಾರಂ ಆವರಣದ ಸೈನಿಕ ಶಾಲೆಯಲ್ಲಿ ಶನಿವಾರ ರಾತ್ರಿ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಪೋಷಕರು ಕೊಲೆ ಶಂಕೆ ವ್ಯಕ್ತಪಡಿಸಿ, ದೂರು ನೀಡಿದ್ದಾರೆ.

ಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಚಿಂಗಪ್ಪ (14) ಮೃತಪಟ್ಟ ವಿದ್ಯಾರ್ಥಿ. ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಗ್ರಾಮ ನಿವಾಸಿ, ಅದೇ ಶಾಲೆಯ ಹಾಕಿ ತರಬೇತುದಾರ ಪೂವಯ್ಯ ಅವರ ಪುತ್ರ ಚಿಂಗಪ್ಪ.

ಪ್ರಕರಣ ಸಂಬಂಧ ಶಾಲೆಯ ಉಪ ಪ್ರಾಂಶುಪಾಲರಾದ ಸೀಮಾ, ಕನ್ನಡ ಶಿಕ್ಷಕ ಮಂಜಪ್ಪ, ಕಂಪ್ಯೂಟರ್ ಶಿಕ್ಷಕ ಗೋವಿಂದರಾಜು, ಸಿಬ್ಬಂದಿಗಳಾದ ಮ್ಯಾಥ್ಯು, ಸುನಿಲ್ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಶನಿವಾರ ಸಂಜೆ ವಿದ್ಯಾರ್ಥಿ ಚಿಂಗಪ್ಪ ಪ್ರಯೋಗಾಲಯದ ಕೊಠಡಿಯಲ್ಲಿ ಕುಸಿದು ಬಿದ್ದಿದ್ದಾನೆ ಎಂದು ಸಹಪಾಠಿಗಳು ಮಾಹಿತಿ ನೀಡಿದ್ದರು. ತಕ್ಷಣವೇ ಶಾಲಾ ಅಂಬುಲೆನ್ಸ್ ನಲ್ಲಿ ಕೂಡಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಯಿತು.

ಕೇಂದ್ರದ ವೈದ್ಯಾಧಿಕಾರಿ ರವಿಚಂದ್ರನ್ ಪರಿಶೀಲಿಸಿ ಆಸ್ಪತ್ರೆಗೆ ತರುವುದಕ್ಕೂ ಮೊದಲೇ ಮೃತಪಟ್ಟಿದ್ದಾನೆ ಎಂದು ಮಾಹಿತಿ ನೀಡಿದ್ದರು. 'ಎಲ್ಲ ವಿಷಯವನ್ನೂ ಮುಚ್ಚಿಟ್ಟು, ನಿಮ್ಮ ಮಗ ಶಾಲೆಯಲ್ಲಿ ಕಾಣುತ್ತಿಲ್ಲ; ಸಂಬಂಧಿಕರ ಮನೆಗೆ ಹೋಗಿರಬಹುದು. ಹುಡುಕಿಕೊಂಡು ಬನ್ನಿ ಎಂದು ಹೇಳಿ ನನ್ನ ಹೊರಗೆ ಕಳುಹಿಸಿ ಮಗನ ಮೃತದೇಹವನ್ನು ಸಂಜೆ ಆಸ್ಪತ್ರೆಗೆ ಸಾಗಿಸಿದ್ದರು. ಸಾವಿನ ಬಗ್ಗೆ ಅನುಮಾನವಿದ್ದು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಪೋಷಕರು ಆಗ್ರಹಿಸಿದ್ದಾರೆ.

ಪ್ರತಿಭಟನೆ: ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಮರಣೋತ್ತರ ಪರೀಕ್ಷೆ ನಡೆಯಿತು. ಆಸ್ಪತ್ರೆ ಎದುರು ಜಮಾವಣೆಗೊಂಡಿದ್ದ ಸಂಬಂಧಿಕರು, ಶಾಲೆಯ ಉಪ ಪ್ರಾಂಶುಪಾಲರು ಸ್ಥಳಕ್ಕೆ ಬರುವಂತೆ ಪಟ್ಟುಹಿಡಿದರು. ಆಗ ಬಿಗುವಿನ ವಾತಾವರಣ ನಿರ್ಮಾಣಗೊಂಡಿತ್ತು. 'ವಿದ್ಯಾರ್ಥಿಯನ್ನು ಕೊಲೆ ಮಾಡಲಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು' ಎಂದು ಪ್ರತಿಭಟನಾಕಾರರು ಪಟ್ಟುಹಿಡಿದರು.

ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಸ್ಥಳಕ್ಕೆ ಆಗಮಿಸಿ ಸೂಕ್ತ ತನಿಖೆಯ ಭರವಸೆ ನೀಡಿದ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.