ADVERTISEMENT

ಕೊಡಗು: ಇನ್ಫೊಸಿಸ್‌ನಿಂದ 200 ಮನೆ ನಿರ್ಮಾಣ

ಪುನರ್ವಸತಿ ಸ್ಥಳ ಪರಿಶೀಲಿಸಿದ ಸುಧಾಮೂರ್ತಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 12:10 IST
Last Updated 1 ಫೆಬ್ರುವರಿ 2019, 12:10 IST

ಮಡಿಕೇರಿ: ಕೊಡಗು ನೆರೆ ಸಂತ್ರಸ್ತರಿಗೆ ಇನ್ಫೊಸಿಸ್‌ ಫೌಂಡೇಷನ್‌, 200 ಮನೆ ನಿರ್ಮಿಸಲು ತೀರ್ಮಾನಿಸಿದ್ದು ಶುಕ್ರವಾರ ಫೌಂಡೇಷನ್‌ ಮುಖ್ಯಸ್ಥೆ ಸುಧಾಮೂರ್ತಿ ಅವರು ಪುನರ್ವಸತಿ ಜಾಗ ಪರಿಶೀಲಿಸಿದರು. ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಹಾಗೂ ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ಅವರೊಂದಿಗೂ ಚರ್ಚಿಸಿದರು.

‘ಮೈಸೂರು ದಸರಾದ ಉದ್ಘಾಟನೆಯ ವೇಳೆ ಕೊಡಗು ನೆರೆ ಸಂತ್ರಸ್ತರಿಗೆ ₹ 25 ಕೋಟಿ ನೆರವು ನೀಡುವುದಾಗಿ ಘೋಷಿಸಲಾಗಿತ್ತು. ಆ ಮೊತ್ತದಲ್ಲಿ ಸಂತ್ರಸ್ತರಿಗೆ ಸುಸಜ್ಜಿತ ಮನೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಮೊದಲ ಹಂತದಲ್ಲಿ 100, ಎರಡನೇ ಹಂತದಲ್ಲಿ 100 ಮನೆ ನಿರ್ಮಾಣ ಮಾಡಲಾಗುವುದು’ ಎಂದು ಸುಧಾಮೂರ್ತಿ ಹೇಳಿದರು.

‘ಸರ್ಕಾರವು ಪ್ರತಿಮನೆಗೆ ₹ 9.85 ಲಕ್ಷ ಮಾಡಲು ನಿರ್ಧರಿಸಿದೆ. ನಾವೂ ಸಹ ಪ್ರತಿಮನೆಗೆ ಅಷ್ಟೇ ವೆಚ್ಚ ಮಾಡುತ್ತೇವೆ. ಸರ್ಕಾರ ನಿರ್ಮಾಣ ಮಾಡುತ್ತಿರುವ ಮಾದರಿಯಲ್ಲೇ ನಮ್ಮ ಗುತ್ತಿಗೆದಾರರು ಮನೆ ನಿರ್ಮಿಸಲಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಮನೆ ನಿರ್ಮಾಣದೊಂದಿಗೆ 100 ದನದ ಕೊಟ್ಟಿಗೆ, 100 ಕೋಳಿ ಸಾಕಾಣಿಕೆ ಕೇಂದ್ರ ನಿರ್ಮಿಸುತ್ತೇವೆ. ₹25 ಲಕ್ಷ ವೆಚ್ಚದಲ್ಲಿ ರೈತರಿಗೆ ಪಾಲಿಹೌಸ್‌ ನಿರ್ಮಿಸಿಕೊಡಲಾಗುವುದು. ಭಾರೀ ಮಳೆಯಿಂದ ಹಾಳಾದ ಮನೆಗಳ ದುರಸ್ತಿಗೂ ಆರ್ಥಿಕ ನೆರವು ಒದಗಿಸಲು ತೀರ್ಮಾನಿಸಲಾಗಿದೆ’ ಎಂದು ಹೇಳಿದರು.

10ಕ್ಕೆ ಪ್ರಾಧಿಕಾರದ ಸಭೆ: ‘ಸಂತ್ರಸ್ತರಿಗೆ ಮನೆ ನಿರ್ಮಿಸಲು ಯಾರೇ ಮುಂದೆ ಬಂದರೂ ಅವಕಾಶ ನೀಡಲಾಗುವುದು’ ಎಂದು ಸಚಿವ ಸಾ.ರಾ. ಮಹೇಶ್ ಹೇಳಿದರು.

‘ಬೆಂಗಳೂರಿನಲ್ಲಿ ಫೆ.10ರಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಕೊಡಗು ಮರು ನಿರ್ಮಾಣ ಪ್ರಾಧಿಕಾರದ ಸಭೆ ನಡೆಯಲಿದೆ. ನದಿಗಳಲ್ಲಿ ತುಂಬಿರುವ ಹೂಳು ತೆಗೆಯಲು ಸರ್ಕಾರ ತೀರ್ಮಾನಿಸಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.