ADVERTISEMENT

ಬೇಸಿಗೆ: ಸೆಳೆಯುತ್ತಿದೆ ಎಳನೀರು ಜೆಲ್ಲಿ!

ಸಿ.ಎಸ್.ಸುರೇಶ್
Published 12 ಮೇ 2025, 7:19 IST
Last Updated 12 ಮೇ 2025, 7:19 IST
   

ನಾಪೋಕ್ಲು: ಬೇಸಿಗೆಯಲ್ಲಿ ಪ್ರವಾಸ, ಹಬ್ಬಹರಿದಿನಗಳು, ಸಮಾರಂಭಗಳು ಸರ್ವೇಸಾಮಾನ್ಯ. ಜನರ ತಿರುಗಾಟವೂ ಅಧಿಕ. ಬೇಸಿಗೆಯಲ್ಲಿ ಈಗ ಸೂರ್ಯಕಿರಣಗಳು ಹೆಚ್ಚು ಪ್ರಬಲವಾಗಿದ್ದು, ವಾತಾವರಣದಲ್ಲಿ ತಾಪಮಾನವೂ ಹೆಚ್ಚಿದೆ.

ಬೇಸಿಗೆಯಲ್ಲಿ ಬೆವರಿನ ಮೂಲಕ ನೀರು ದೇಹದಿಂದ ಹೊರಕ್ಕೆ ಹೋಗುವುದರಿಂದ ನೀರಿನಂಶವು ಕಡಿಮೆಯಾಗಿ ಕೆಲಸ ಮಾಡುವ ದೇಹ ಮತ್ತು ಮನಸ್ಸಿನ ಸಾಮರ್ಥ್ಯದ ಕೊರತೆಯನ್ನುಪ್ರತಿಯೊಬ್ಬರೂ ಅನುಭವಿಸುವುದು ಸಾಮಾನ್ಯ. ಈ ಅವಧಿಯಲ್ಲಿ ದೇಹವನ್ನು ತಂಪಾಗಿಸಬೇಕು. ಪಾನಕ, ಮಜ್ಜಿಗೆ, ವಿವಿಧ ಹಣ್ಣುಗಳ ರಸಾಯನಗಳ ಸೇವನೆ ಆರೋಗ್ಯಕ್ಕೆ ಹಿತಕರ. ದಾಹ ಪರಿಹರಿಸುವ ಹಣ್ಣುಹಂಪಲುಗಳಿಗೆ ಬೇಡಿಕೆಯೂ ಹೆಚ್ಚು. ಜನದಟ್ಟಣೆ ಪ್ರದೇಶಗಳಲ್ಲಿ ಬಿರುಸಿನ ವ್ಯಾಪಾರವೂ ನಡೆಯುತ್ತಿದೆ.

ಬೇಸಿಗೆಯ ಸಮಯದಲ್ಲಿ ದೇಹದಲ್ಲಿ ಉಷ್ಣತೆ ಅಧಿಕವಾಗುವುದು ಸರ್ವೇಸಾಮಾನ್ಯ. ಅಧಿಕವಾದ ದೇಹದ ಬಿಸಿಯನ್ನು ಕಡಿಮೆ ಮಾಡಲು ನಾವು ಸೇವಿಸುವ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಇದಕ್ಕೊಂದು ಹೊಸ ಸೇರ್ಪಡೆ ದೇವರ ಕೊಲ್ಲಿಯ ಎಳನೀರು ಜೆಲ್ಲಿ.

ADVERTISEMENT

ಮಡಿಕೇರಿಯಿಂದ ಸಂಪಾಜೆಯತ್ತ ಸಾಗುವಾಗ ಜೋಡುಪಾಲದ ಮುಂದೆ ದೇವರ ಕೊಲ್ಲಿ ಸಿಗುತ್ತದೆ. ಮಡಿಕೇರಿಯಿಂದ 18 ಕಿಲೋಮೀಟರ್ ಅಂತರ. ರಸ್ತೆಯ ಬಲಬದಿಯಲ್ಲಿ ಕಾಣಸಿಗುವ ವಸುಧಾ ಕ್ಯಾಂಟೀನ್‌ನಲ್ಲಿ ಮನ-ದೇಹ ತಂಪಾಗಿಸುತ್ತದೆ ಎಳನೀರು ಜೆಲ್ಲಿ.

ಎಳೆನೀರಿನ ಜ್ಯೂಸನ್ನು ಗಟ್ಟಿಯಾಗಿಸಿ ತಂಪಾಗಿಸಿದ ಜೆಲ್ಲಿ ಇದೀಗ ಬಿಸಿಲ ಧಗೆ ಏರುತ್ತಿದ್ದಂತೆ ದಾರಿಯ ಪಯಣಿಗರನ್ನು ಆಕರ್ಷಿಸುತ್ತಿದೆ. ವಾಹನಗಳಲ್ಲಿ ಸಾಗುವವರು ಎಳನೀರು ಜೆಲ್ಲಿಯ ಗ್ರಾಹಕರು. ವಸುಧಾ ಕ್ಯಾಂಟೀನ್ ಮಾಲೀಕರಾದ ಸುಬ್ರಹ್ಮಣ್ಯ ಭಟ್ ಹಾಗೂ ವಸಂತ ಲಕ್ಷ್ಮಿ ದಂಪತಿ ಎಳನೀರು ಜೆಲ್ಲಿ ತಯಾರಿಸಿ ಅಪೂರ್ವ ಹೊಸರುಚಿಯಿಂದ ಗ್ರಾಹಕರನ್ನು ಸೆಳೆಯುತ್ತಿದ್ದಾರೆ.

ಒಂದು ಕಪ್ ಎಳನೀರು ಜೆಲ್ಲಿಗೆ ₹ 60 ದರ. ಪ್ರತಿದಿನ 30 ಲೀಟರ್‌ನಷ್ಟು ಜೆಲ್ಲಿಯನ್ನು ತಯಾರಿಸುತ್ತಾರೆ. ಇಲ್ಲಿ ಬಹುತೇಕ ಮಂದಿ ಕಾಯಂ ಗ್ರಾಹಕರು. ಸುಳ್ಯ, ಸಂಪಾಜೆ, ಪುತ್ತೂರು ಸೇರಿದಂತೆ ಹಲವು ಭಾಗಗಳಿಂದ ಬರುವ ಗ್ರಾಹಕರು ಎಳನೀರು ಜೆಲ್ಲಿಯನ್ನು ಇಲ್ಲಿ ಖರೀದಿಸುತ್ತಾರೆ. ಎಳನೀರು ಸಕ್ಕರೆ ಮತ್ತು ಅಗರ್ ಸೇರಿಸಿ ಕುದಿಸುತ್ತಾರೆ. ಪಾಕ ಸರಿಯಾದಾಗ ಇಳಿಸಿ ಎಳನೀರಿನ ಗಂಜಿ ಸೇರಿಸಿ ಕಪ್‌ಗಳಲ್ಲಿ ತುಂಬುತ್ತಾರೆ. ನಂತರ, ಫ್ರಿಜ್‌ನಲ್ಲಿಟ್ಟರೆ ತಣಿದಾಗ ಜೆಲ್ ಆಗಿ ಲಭ್ಯ. ಗ್ರಾಹಕರು ಬಂದಾಗ ಸೇವನೆಗೆ ಸಿದ್ಧ.

ಫ್ರಿಡ್ಜ್‌ನಿಂದ ತೆಗೆದ ಎಳೆನೀರು ಜಲ್ಲಿಯನ್ನು ಆಗಲೇ ಸೇವಿಸುವವರು ಹಲವರಾದರೆ ಮತ್ತೆ ಕೆಲವರು ಪಾರ್ಸಲ್ ಕೊಂಡೊಯ್ಯುತ್ತಾರೆ. ಎಳನೀರು ಜೆಲ್ ಅನ್ನು ನಾಲ್ಕೈದು ಗಂಟೆ ತೆರೆದ ವಾತಾವರಣದಲ್ಲಿ ಇಡಬಹುದು. ಹಾಗಾಗಿ, ಮನೆ ಮಂದಿಯ ಜೊತೆ ಸವಿಯ ಬಯಸುವವರು ಪ್ಯಾಕ್ ಮಾಡಿ ಜೆಲ್ಲಿಯನ್ನು ಕೊಂಡೊಯ್ಯುತ್ತಾರೆ. ಬೇಸಿಗೆಯಲ್ಲಿ 30 ಲೀಟರ್ ಜೆಲ್ಲಿ ಮಾಡುವುದು ರೂಢಿ. ಮಳೆಗಾಲದಲ್ಲಿ ಈ ಪ್ರಮಾಣ ಇಳಿಯುತ್ತದೆ. ದೂರದ ಊರಿಗೆ ಎಳನೀರು ಜಲ್ಲಿಯನ್ನು ಕೊಂಡೊಯ್ಯುವವರು ಥರ್ಮಕೋಲ್ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ ಕೊಂಡೊಯ್ಯುತ್ತಾರೆ.

ಬೇಸಿಗೆಯಲ್ಲಿ ನಾವು ಸೇವಿಸುವ ಆಹಾರ ಜೀರ್ಣವಾಗಲು ಸುಲಭವಾಗಿರಬೇಕು. ಅತಿ ದೈಹಿಕ ಪರಿಶ್ರಮ, ಅತಿ ಉಪ್ಪು, ಹುಳಿ, ಖಾರ, ತೊಂದರೆ ಮಾಡುತ್ತವೆ. ಆಯುರ್ವೇದ ಪಾನೀಯ ಆರೋಗ್ಯಕ್ಕೆ ಹಿತಕರ
ಶೈಲಜಾ, ಆಯುರ್ವೇದ ವೈದ್ಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.