ADVERTISEMENT

ಸುಂಟಿಕೊಪ್ಪ | ‘ಮೀಸಲಾತಿ ನೀಡಿದರೆ ಸಹಕಾರಿ ಕ್ಷೇತ್ರ ಕುಂಠಿತ’

ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ. ಪಿ.ಬಾಂಡ್ ಗಣಪತಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 4:22 IST
Last Updated 17 ನವೆಂಬರ್ 2025, 4:22 IST
ಸುಂಟಿಕೊಪ್ಪ ಮಂಜನಾಥಯ್ಯ ಸಹಕಾರ ಭವನದಲ್ಲಿ ಭಾನುವಾರ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಡೆದ  ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ದಿನಾಚರಣೆಯನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಉದ್ಘಾಟಿಸಿದರು‌
ಸುಂಟಿಕೊಪ್ಪ ಮಂಜನಾಥಯ್ಯ ಸಹಕಾರ ಭವನದಲ್ಲಿ ಭಾನುವಾರ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಡೆದ  ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ದಿನಾಚರಣೆಯನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಉದ್ಘಾಟಿಸಿದರು‌   

ಸುಂಟಿಕೊಪ್ಪ: ಸಹಕಾರ ಕ್ಷೇತ್ರದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಆಯ್ಕೆಯಲ್ಲಿ ಮೀಸಲಾತಿ ಅಳವಡಿಸಿದಲ್ಲಿ ಅದು ಸಹಕಾರ ಕ್ಷೇತ್ರದ ಮೇಲೆ ಪ್ರತಿಕೂಲ ಪರಿಣಾಮವನ್ನು ಮಾತ್ರವಲ್ಲದೆ ಸಹಕಾರಿ ಕ್ಷೇತ್ರ ಕುಂಠಿತಗೊಳ್ಳಲು ಕಾರಣವಾಗುತ್ತದೆ ಎಂದು ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಬಾಂಡ್ ಗಣಪತಿ ಹೇಳಿದರು.

ಸುಂಟಿಕೊಪ್ಪದ ಮಂಜನಾಥಯ್ಯ ಸಹಕಾರ ಭವನದಲ್ಲಿ ಭಾನುವಾರ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಡೆದ ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ದಿನಾಚರಣೆಯಲ್ಲಿ ಹಿರಿಯ ಸಹಕಾರಿಗಳಿಗೆ ಸನ್ಮಾನಿಸಿ ಅವರು ಮಾತನಾಡಿದರು‌. 

ಸಹಕಾರ ಕ್ಷೇತ್ರ ಏಕಸೇವಾ ಕ್ಷೇತ್ರವಾಗಿ ಉಳಿಯದೆ ಬಹುಸೇವಾ ಕ್ಷೇತ್ರವಾಗಿ ಬೆಳೆಯುತ್ತಿದೆ. ಸಹಕಾರ ಕ್ಷೇತ್ರದ ಮಹತ್ವವನ್ನು ಅರಿತ ಕೇಂದ್ರ ಸರ್ಕಾರ ನೂತನ ಸಹಕಾರ ಸಚಿವಾಲಯ ಪ್ರಾರಂಭಿಸಿದ ಮೇಲೆ ಏಕರೂಪದ ಗಣಕೀಕರಣದ ವ್ಯವಸ್ಥೆಯಿಂದ ಆಡಳಿತದಲ್ಲಿ ಪಾರದರ್ಶಕತೆ ತರಲಾಗುತ್ತಿದೆ. ವಿಶೇಷವಾಗಿ ಆಹಾರ, ಜನೌಷಧ, ಪಟ್ರೋಲ್‌ ಪಂಪ್, ಅಡುಗೆ ಅನಿಲದ ವಿತರಣಾ ವ್ಯವಸ್ಥೆಯಲ್ಲಿಯೂ ಸಹಕಾರ ಸಚಿವಾಲಯ ಮುಂದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕರ್ನಾಟಕ, ಗುಜರಾತ್, ಮಹಾರಾಷ್ಟ್ರದಲ್ಲಿ ಪ್ರಾಯೋಗಿಕವಾಗಿ ಏಕರೂಪದ ತಂತ್ರಾಂಶ ಅಳವಡಿಸಿಕೊಳ್ಳಲು ಸೂಚಿಸಿದೆ. ಆದರೆ, ಕರ್ನಾಟಕದಲ್ಲಿ ಇಚ್ಛಾಶಕ್ತಿಯ ಕೊರತೆಯಿಂದ ಅಂತಿಮ ಗಡುವು 31-03-2024 ಇದ್ದುದನ್ನು 31-03-2026ಕ್ಕೆ ಮುಂದೂಡಲಾಗಿದೆ. ಅತ್ಯುತ್ತಮವಾಗಿರುವ ಕರ್ನಾಟಕ ಸಹಕಾರ ಕ್ಷೇತ್ರದ ಕಾಯ್ದೆಯನ್ನು ಚರ್ಚೆ ಇಲ್ಲದೆ ಪರ ವಿರೋಧ ಲೆಕ್ಕಿಸದೆ ತಿದ್ದುಪಡಿ ಮಾಡಲಾಗುತ್ತಿದೆ ಎಂದು ವಿಷಾದಿಸಿದರು.

ADVERTISEMENT

ರಾಜ್ಯದಲ್ಲಿ ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಅತ್ಯುತ್ತಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಕೊಡಗಿನಲ್ಲಿ ಶೇ 60 ರಷ್ಟು ಪ್ರಾಥಮಿಕ ಕೃಷಿಪತ್ತಿನ ಸಂಘಗಳು ₹600 ಕೋಟಿಯವರೆಗೂ ವಹಿವಾಟು ನಡೆಸುತ್ತಿರುವುದು ಶ್ಲಾಘನೀಯ ಎಂದರು.

ತಾವು ಪ್ರತಿನಿಧಿಸುತ್ತಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ₹10 ಲಕ್ಷ ಠೇವಣಿ ಮತ್ತು ₹4.25 ಕೋಟಿ ವಹಿವಾಟು ಇದ್ದದ್ದು, ಈ ವರ್ಷ ₹232 ಕೋಟಿ ವ್ಯವಹಾರ ಮಾಡಿದೆ ಎಂದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಅವರು, ಕೊಡಗಿನಲ್ಲಿ ಸಹಕಾರ ಕ್ಷೇತ್ರ ಕೂಡ ರಾಜ್ಯ ಮತ್ತು ದೇಶಕ್ಕೆ ಕ್ರೀಡೆ ಹಾಗೂ ಸೇನೆಗೆ ನೀಡಿದಂತೆಯೇ ಮಹತ್ತರ ಕೊಡುಗೆ ನೀಡಿದೆ. ರಾಜ್ಯದಲ್ಲಿ ಮೊದಲ ಸಹಕಾರ ಸಂಘ ಗದಗ್‌ನಲ್ಲಿ 1905 ರಂದು ಅಸ್ತಿತ್ವಕ್ಕೆ ಬಂದ 15 ದಿನಗಳಲ್ಲಿ ಸೋಮವಾರಪೇಟೆ ತಾಲ್ಲೂಕಿನ ತಲ್ತಾರೆಶೆಟ್ಟಳ್ಳಿಯಲ್ಲಿ ಕೆ.ದೊಡ್ಡಯ್ಯ ಮತ್ತು ಅವರ ತಂಡದಿಂದ ಅಸ್ವಿತ್ವಕ್ಕೆ ಬಂತು. ಆಗ ಹಣಕಾಸು ವ್ಯವಸ್ಥೆ ಇದ್ದರೂ ಸಹಕಾರ ಸಂಘಗಳು ವಸ್ತು ವಿನಿಮಯ ರೂಪದಲ್ಲಿ ಕಾರ್ಯ ನಿರ್ವಹಿಸಿ ಸಹಕಾರ ಕ್ಷೇತ್ರವನ್ನು ಪ್ರಮಾಣಿಕತೆ, ಪಾರದರ್ಶಕತೆಯಿಂದ ಕಟ್ಟಿದರು. ನಾವು ಯಾವ ಕ್ಷೇತ್ರವನ್ನು ಪ್ರತಿನಿಧಿಸುತ್ತೇವೆ, ಯಾವ ಜವಾಬ್ದಾರಿಯನ್ನು ಹೊಂದಿರುತ್ತೇವೆ ಅದರಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆಯನ್ನು ಹೊಂದಿ ವಿಷಯ ತಜ್ಞತೆ ಹೊಂದಿ ನ್ಯಾಯ ಒದಗಿಸಬೇಕೆಂದು ಹೇಳಿದರು.

ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜೆರ್ಮಿ ಡಿಸೋಜ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎಂ.ಎಂ.ಶ್ಯಾಮಲ, ಸುಂಟಿಕೊಪ್ಪ ಮಹಿಳಾ ಸಂಘದ ಅಧ್ಯಕ್ಷೆ ಲೀಲಾಮೇದಪ್ಪ ಮಾತನಾಡಿದರು.

ಹಿರಿಯ ಸಹಕಾರಿಗಳಾದ ಪಟ್ಟೆಮನೆ ಗಿರಿಜ ಉದಯಕುಮಾರ್, ಅಪ್ಪಚಟ್ಟೊಳಂಡ ಸಾವಿತ್ರಿ ಕಾವೇರಪ್ಪ, ಅತ್ತೂರು ನಲ್ಲೂರು ಗ್ರಾಮದ ಐ.ಎಸ್.ಬಾಲಕಿ ಉಲುಗುಲಿ ಗ್ರಾಮದ ಯಂಕನ ಎಂ.ಕರುಂಬಯ್ಯ, ಕಲ್ಲೂರಿನ ಕೆ.ಬಿ.ರಾಜಪ್ಪ, ಅಂದಗೋವೆ ಗ್ರಾಮದ ಚಿಕ್ಕಂಡ ಕೆ. ಸಾಬು ಉತ್ತಯ್ಯ ಅವರನ್ನು ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಕುಶಾಲನಗರದ ಎಪಿಎಂಸಿ ಸಂಘದ ಅಧ್ಯಕ್ಷರಾಗಿ ಆಯ್ಕೆಗೊಂಡ ಎಂ.ಎಂ.ಕೊಮಾರಪ್ಪ, ನಿರ್ದೇಶಕರಾಗಿ ಆಯ್ಕೆಯಾದ ಎನ್.ಸಿ.ಕ್ಲೃವಾ ಪೊನ್ನಪ್ಪ, ಡಿ.ಕೆ.ಗಂಗಾಧರ, ಕೆ.ಎಸ್.ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

ಸುಂಟಿಕೊಪ್ಪ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಪಿ.ಪಿ.ಉದಯಕುಮಾರ್, ಕೊಡಗು ಜಿಲ್ಲೆಯ ಸಹಕಾರ ಸಂಘದ ಉಪ ನಿಬಂಧಕರಾದ ಎಚ್.ಡಿ.ಕುಮಾರ್, ಜಿಲ್ಲಾ ಸಹಕಾರ ಯೂನಿಯನ್ ಎಲ್ಲ ನಿರ್ದೇಶಕರು ಮತ್ತು ಕೇಂದ್ರ ಸಹಕಾರ ಬ್ಯಾಂಕಿನ ಎಲ್ಲ ನಿರ್ದೇಶಕರು ಪಾಲ್ಗೊಂಡಿದ್ದರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್, ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಕೊಡಗು ಜಿಲ್ಲೆ ಸಹಕಾರ ಇಲಾಖೆ, ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಮತ್ತು ಸುಂಟಿಕೊಪ್ಪ ಮಹಿಳಾ ಸಹಕಾರ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.

ಸುಂಟಿಕೊಪ್ಪ ಮಂಜನಾಥಯ್ಯ ಸಹಕಾರ ಭವನದಲ್ಲಿ ಭಾನುವಾರ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ನಡೆದ  ಸಹಕಾರ ಸಂಸ್ಥೆಗಳ ಮೂಲಕ ಗ್ರಾಮೀಣ ಅಭಿವೃದ್ಧಿಯ ಬಲವರ್ಧನೆ ದಿನಾಚರಣೆಯನ್ನು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಳೆಯಂಡ ರಾಬಿನ್ ದೇವಯ್ಯ ಉದ್ಘಾಟಿಸಿದರು‌
72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸುಂಟಿಕೊಪ್ಪ ಮಂಜನಾಥಯ್ಯ ಸಹಕಾರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಸದಸ್ಯರನ್ನು ಗೌರವಿಸಿ ಸನ್ಮಾನಿಸಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.