ADVERTISEMENT

ಯುವ ಮನ ಸೆಳೆದ ಸೂಪರ್ ಬೈಕ್‌

ಮಡಿಕೇರಿಯಲ್ಲಿ ನಡೆದ ಯುವ ದಸರೆಯಲ್ಲಿ ಸೈಕಲ್ ಮತ್ತು ಬೈಕ್ ಜಾಥಾ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 4:57 IST
Last Updated 28 ಸೆಪ್ಟೆಂಬರ್ 2025, 4:57 IST
ಯುವ ದಸರಾ ಅಂಗವಾಗಿ ಮಡಿಕೇರಿಯ ಗಾಂಧಿ ಮೈದಾನಕ್ಕೆ ಬಂದಿದ್ದ ಸೂಪರ್ ಬೈಕ್‌ಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಸೇರಿದ್ದರು
ಯುವ ದಸರಾ ಅಂಗವಾಗಿ ಮಡಿಕೇರಿಯ ಗಾಂಧಿ ಮೈದಾನಕ್ಕೆ ಬಂದಿದ್ದ ಸೂಪರ್ ಬೈಕ್‌ಗಳನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಯುವ ಜನರು ಸೇರಿದ್ದರು   

ಮಡಿಕೇರಿ: ನಗರದಲ್ಲಿ ಶನಿವಾರ ರಸ್ತೆಗಳಲ್ಲಿ ಸೈಕಲ್‌ಗಳು ಮತ್ತು ಬೈಕ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದವು. ನಗರದಲ್ಲಿ ಅಪರೂಪವಾಗುತ್ತಿರುವ ಸೈಕಲ್‌ಗಳು ಬೆಳ್ಳಂಬೆಳಿಗ್ಗೆ ರಸ್ತೆಗಳಲ್ಲಿ ಕಾಣಿಸಿಕೊಂಡವು. ಮಧ್ಯಾಹ್ನದ ವೇಳೆ ಐಷಾರಾಮಿ ಸೂಪರ್ ಬೈಕ್‌ಗಳು ಸಂಚರಿಸಿ ಸಾರ್ವಜನಿಕರನ್ನು ಸೆಳೆದವು.

ಈ ದೃಶ್ಯಗಳು ಯುವ ದಸರೆ ಅಂಗವಾಗಿ ಇಲ್ಲಿ ಶನಿವಾರ ನಡೆದ ಸೈಕಲ್‌ ಜಾಥಾ ಮತ್ತು ಬೈಕ್‌ ಜಾಥಾದಲ್ಲಿ ಕಂಡು ಬಂತು.

ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ (ಸುದರ್ಶನ ವೃತ್ತ)ದಿಂದ ಆರಂಭವಾದ ಸೈಕಲ್‌ ಜಾಥಾದಲ್ಲಿ 30ಕ್ಕೂ ಅಧಿಕ ಮಂದಿ ಸೈಕಲ್ ಸವಾರರು ಭಾಗಿಯಾಗಿದ್ದರು. ಈ ಜಾಥಾ ಜನರಲ್ ತಿಮ್ಮಯ್ಯ ವೃತ್ತ, ಖಾಸಗಿ ಬಸ್‌ನಿಲ್ದಾಣ, ಕಾವೇರಿ ಹಾಲ್ ಮೂಲಕ ಎಲ್‌ಐಸಿ ಮೂಲಕ ಗಾಂಧಿ ಮೈದಾನ ತಲು‍ಪಿತು. ಮೂರ್ನಾಡಿನ ಗ್ರೀನ್‌ ಸಿಟಿ ಫೋರಂನವರು ಸಹ ಈ ಸೈಕಲ್ ಜಾಥಾದಲ್ಲಿ ಭಾಗವಹಿಸಿದ್ದರು. ಜಾನ‍ಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಸೈಕಲ್ ಜಾಥಾಕ್ಕೆ ಚಾಲನೆ ನೀಡಿದರು.

ADVERTISEMENT

ಸೂಪರ್ ಬೈಕ್‌ಗಳ ಸದ್ದು

ಇಲ್ಲಿನ ಗಾಂಧಿ ಮೈದಾನದಲ್ಲಿ ಮಧ್ಯಾಹ್ನದ ಹೊತ್ತಿಗೆ ಸೂಪರ್ ಬೈಕ್‌ಗಳ ಸದ್ದು ಕೇಳಿ ಬಂತು. ಮಳೆ ಕಾರಣಕ್ಕೆ ಕಾರ್ಯಕ್ರಮ ವಿಳಂಬವಾದರೂ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದರು. ಮೈಸೂರು ಮತ್ತು ಕೊಡಗಿನಿಂದ ಬಂದಿದ್ದ 19 ಐಷಾರಾಮಿ ಬೈಕ್‌ಗಳು ಜಾಥದಲ್ಲಿದ್ದವು. ಅವುಗಳಲ್ಲಿ ಬಹುತೇಕ ₹ 20ರಿಂದ 30 ಲಕ್ಷ ಬೆಲೆ ಬೈಕ್‌ಗಳಿದ್ದು, ಯುವಮನಸ್ಸುಗಳನ್ನು ಸೂಜಿಗಲ್ಲಿನಂತೆ ಸೆಳೆದವು.

ಪತ್ರಿಕೋದ್ಯಮಿ ಚಿದ್ವಿಲಾಸ್ ಬೈಕ್ ಜಾಥಾಕ್ಕೆ ಚಾಲನೆ ನೀಡಿದರು. ಮುಡಾ ಸದಸ್ಯ ಚಂದ್ರಶೇಖರ್, ಓಂಕಾರೇಶ್ವರ ವ್ಯವಸ್ಥಾಪ‍ನಾ ಮಂಡಳಿ ಅಧ್ಯಕ್ಷ ಚುಮ್ಮಿ ದೇವಯ್ಯ, ನಗರಸಭೆ ಸದಸ್ಯ ಸತೀಶ್ ಭಾಗವಹಿಸಿದ್ದರು. ಈ ಎರಡೂ ಕಾರ್ಯಕ್ರಮಗಳಲ್ಲಿ ಯುವದಸರಾ ಸಮಿತಿ ಅಧ್ಯಕ್ಷ ಕವನ್ ಕತ್ತೋಳಿ ಭಾಗವಹಿಸಿದ್ದರು.

ಮಡಿಕೇರಿಯಲ್ಲಿ ಯುವದಸರೆ ಅಂಗವಾಗಿ ಶನಿವಾರ ನಡೆದ ಸೈಕಲ್‌ ಜಾಥಾಕ್ಕೆ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಚಾಲನೆ ನೀಡಿದರು
ಮಹಿಳಾ ದಸರಾ ಲೊಗೊ

ಮಹಿಳಾ ದಸರೆ  

ಇಂದು  ಮಡಿಕೇರಿಯಲ್ಲಿ 8ನೇ ವರ್ಷದ ಮಹಿಳಾ ದಸರಾ ಸೆ. 28ರಂದು ಇಡೀ ದಿನ ನಡೆಯಲಿದೆ. ಮಡಿಕೇರಿ ನಗರ ದಸರಾ ಸಮಿತಿ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮವು ಇಲ್ಲಿನ ಗಾಂಧಿ ಮೈದಾನದಲ್ಲಿ ಬೆಳಿಗ್ಗೆ 9.30ಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ ಉದ್ಘಾಟನೆ ಮಾಡಲಿದ್ದಾರೆ. ನಗರ ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಿಳೆಯರ ಸ್ಪರ್ಧೆನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಐಶ್ವರ್ಯ ಉದ್ಘಾಟಿಸಲಿದ್ದಾರೆ.  ನಂತರ ಮಹಿಳೆಯರಿಗಾಗಿ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸೀರೆಗೆ ನಿಖರ ಬೆಲೆ ಹೇಳುವುದು ಬಾಂಬ್ ಇಂದ ಸಿಟಿ ಕೆರೆ ದಡ ಆಟ ಮೆಹಂದಿ ಹಾಕುವ ಸ್ಪರ್ಧೆ ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್ ಭಾರತೀಯ ಸಾಂಪ್ರದಾಯಿಕ ಉಡುಗೆ ಪ್ರದರ್ಶನ ಕೇಶ ವಿನ್ಯಾಸ ಸ್ಪರ್ಧೆ ಬಲೂನ್ ಮತ್ತು ಕಪ್ಪು ಹಣೆಯಲ್ಲಿ ಇಟ್ಟು ಬಿಸ್ಕೆಟ್ ತಿನ್ನುವದು. ಜಾನಪದ ನೃತ್ಯ ಸ್ಪರ್ಧೆ ಬಲೂನ್ ಕಾಲಲ್ಲಿ ಹಿಡಿದು ಓಡುವುದು ದಸರಾ ಸಂಬಂಧಿತ ರಸಪ್ರಶ್ನೆ ಸ್ಪಧೆ ವಾಲಗ ಕುಣಿತ ಸ್ಪರ್ಧೆ ನಡೆಯಲಿದೆ. ನಂತರ ಸಾಧಕ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರನ್ನು ಪೌರಸೇವಾ ನೌಕರರನ್ನು ಗೌರವಿಸಲಾಗುತ್ತದೆ. ಸಂಜೆ 6 ಗಂಟೆಯಿಂದ ಮಹಿಳೆಯರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬರಲಿವೆ ಎಂದು ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.