
ಸೋಮವಾರಪೇಟೆ: ತಾಲ್ಲೂಕಿನ ಸಿ ಮತ್ತು ಡಿ ಜಾಗ ಸಮಸ್ಯೆಯ ಬಗ್ಗೆ ರೈತರು ಹಾಗೂ ಅರಣ್ಯ ಇಲಾಖೆಯ ನಡುವೆ ಉಂಟಾಗಿರುವ ಗೊಂದಲ ನಿವಾರಿಸಲು ಇಲ್ಲಿನ ವಲಯ ಅರಣ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಅರಣ್ಯಾಧಿಕಾರಿಗಳು ಹಾಗೂ ರೈತ ಸಂಘಟನೆಗಳ ಪ್ರಮುಖರೊಂದಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು.
ಸಿ ಮತ್ತು ಡಿ ಜಾಗದ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಹಲವು ಬಾರಿ ಮನವಿ ಸಲ್ಲಿಸಿ, ಪ್ರತಿಭಟನೆ, ಬಂದ್ ಮಾಡಿದ್ದರೂ ಸರ್ಕಾರ ಸ್ಪಂದಿಸಿರಲಿಲ್ಲ. ಹೋರಾಟ ತೀವ್ರಗೊಳಿಸಲು ಇತ್ತೀಚೆಗೆ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿದ್ದು, ಅದರಂತೆ ನ. 3ರಂದು ಪಟ್ಟಣದಲ್ಲಿ ರೈತ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಸಭೆಯ ಗಮನಕ್ಕೆ ತಂದರು. ಈ ಸಂದರ್ಭ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್ ಅವರು, ಅರಣ್ಯ ಇಲಾಖೆ ನಡೆಸುತ್ತಿರುವ ಸರ್ವೆ ಕಾರ್ಯದ ಮೂಲ ಉದ್ದೇಶದ ಬಗ್ಗೆ ರೈತರಿಗೆ ಮಾಹಿತಿ ನೀಡಲು ಸಭೆ ಕರೆಯಲಾಗಿದೆ ಎಂದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ, ಈಗಾಗಲೇ ಸಮಿತಿಯ ವತಿಯಿಂದ ನಾಲ್ಕೈದು ಬಾರಿ ಪ್ರತಿಭಟನೆ ಮಾಡಲಾಗಿದೆ. ತಾಲ್ಲೂಕು ಬಂದ್ ಮಾಡಿದ ಸಂದರ್ಭ ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿ, ಮುಂದಿನ ದಿನಗಳಲ್ಲಿ ರೈತರಿಗೆ ತಿಳಿಸಿಯೇ ಜಂಟಿ ಸರ್ವೆ ಮಾಡುವುದಾಗಿ ಭರವಸೆ ನೀಡಿದ್ದರು. ಈವರೆಗೆ ಜಂಟಿ ಸರ್ವೆ ಮಾಡಿಲ್ಲ. ಈಗಲೂ ಅರಣ್ಯ ಇಲಾಖೆಯ ಸಿಬ್ಬಂದಿ ಮಾತ್ರ ಸರ್ವೆ ಮಾಡಲು ಬರುತ್ತಿರುವುದಾಗಿ ದೂರಿದರು.
ಮುಕ್ಕೋಡ್ಲು ಗ್ರಾಮದ ನಾಣಿಯಪ್ಪ ಅವರ ತೋಟವನ್ನು ನಾಶಗೊಳಿಸಿದ ಅರಣ್ಯ ಇಲಾಖಾ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಅರಣ್ಯ ಭವನ ಎದುರು ಪ್ರತಿಭಟನೆ ಮಾಡಿದಾಗ ವಾರದ ಒಳಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಲಾಗಿತ್ತು. ಈವರೆಗೆ ಕ್ರಮ ಕೈಗೊಂಡಿಲ್ಲ. ಈ ಹಿಂದೆ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸ್ಥಳಕ್ಕೆ ತೆರಳದೆ ಅವೈಜ್ಞಾನಿಕವಾಗಿ ಸರ್ವೆ ನಡೆಸಿ ವರದಿ ಕೊಟ್ಟ ಪರಿಣಾಮ ಇಂದಿಗೂ ರೈತರು ಸಮಸ್ಯೆಯಲ್ಲಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರು.
ರೈತರ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ವಾಸ್ತವಾಂಶ ತಿಳಿಯಲು ಸರ್ಕಾರದ ಆದೇಶದ ಅನುಸಾರ ಸರ್ವೆ ಕಾರ್ಯ ಮಾಡಲಾಗುತ್ತಿದೆ. ವಾಸ್ತವ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದರೆ ಸಮಸ್ಯೆ ಬಗೆಹರಿಯಲಿದೆ. ಹೀಗಾಗಿ, ಸರ್ವೆ ಕಾರ್ಯಕ್ಕೆ ಅವಕಾಶ ನೀಡಬೇಕೆಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದರು.
ಕೇವಲ ಅರಣ್ಯ ಇಲಾಖೆಯವರು ಸರ್ವೆ ಮಾಡಿದರೆ ಯಾವುದೇ ಪ್ರಯೋಜನವಿಲ್ಲ. ಜಂಟಿ ಸರ್ವೆಗೆ ಈ ಹಿಂದಿನಿಂದಲೂ ಆಗ್ರಹಿಸುತ್ತಲೇ ಬಂದಿದ್ದೇವೆ. ಸರ್ಕಾರದ ಅಧಿಕೃತ ಆದೇಶದೊಂದಿಗೆ ಜಂಟಿ ಸರ್ವೆಗೆ ಬಂದರೆ ನಾವೂ ಸ್ಪಂದಿಸುತ್ತೇವೆ. ಆದರೆ ವಾಸ್ತವ ವರದಿಯನ್ನೇ ನೀಡಬೇಕು. ಸ್ಥಳದಲ್ಲಿಯೇ ರೈತರಿಗೆ ಸರ್ವೆ ವರದಿ ನೀಡಬೇಕೆಂದು ರೈತ ಮುಖಂಡರು ಹೇಳಿದರು.
ವರದಿಯನ್ನು ಮೊದಲು ಜಿಲ್ಲಾ ಮಟ್ಟದ ಕೆಡಿಪಿ ಸಭೆಯಲ್ಲಿ ಜನಪ್ರತಿನಿಧಿಗಳ ಮುಂದೆ ಸಲ್ಲಿಸಿ, ನಂತರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಅಧಿಕಾರಿ ಅಭಿಷೇಕ್ ರೈತ ಮುಖಂಡರಿಗೆ ಮನವರಿಕೆ ಮಾಡಲು ಯತ್ನಿಸಿದರು.
ಸೆಕ್ಷನ್ 4, ಸಿ ಮತ್ತು ಡಿ, ಡೀಮ್ಡ್ ಫಾರೆಸ್ಟ್ ಸಂಬಂಧಿತ ಸಮಸ್ಯೆಗಳನ್ನು ಒಟ್ಟಾಗಿ ಚರ್ಚಿಸಿ ಬಗೆಹರಿಸಬೇಕಿದೆ. ಊರುಡುವೆ, ದೇವರಕಾಡು, ಮೀಸಲು ಅರಣ್ಯದ ಒತ್ತುವರಿ ತೆರವು ಮಾಡಲಾಗುತ್ತದೆ. ಹೊಸ ಒತ್ತುವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಹೇಳಿದರು.
ಜಂಟಿ ಸರ್ವೆಗೆ ಅವಕಾಶ ಮಾಡಿಕೊಟ್ಟರಷ್ಟೇ ವಾಸ್ತವಾಂಶದ ವರದಿ ನೀಡಲು ಸಾಧ್ಯ ಎಂದು ಅಧಿಕಾರಿಗಳು ಹೇಳಿದರು. ಹಿಂದಿನ ಅಧಿಕಾರಿಗಳ ಅವೈಜ್ಞಾನಿಕ ಕ್ರಮವನ್ನೂ ವರದಿಯಲ್ಲಿ ಉಲ್ಲೇಖಿಸಬೇಕೆಂದು ರೈತ ಮುಖಂಡರು ಹೇಳಿದರು. ಈ ಬಗ್ಗೆ ಕೆಲಕಾಲ ಚರ್ಚೆ ನಡೆಯಿತೇ ವಿನಃ ಅಂತಿಮವಾಗಿ ಯಾವುದೇ ನಿರ್ಧಾರಕ್ಕೆ ಬರಲು ಸಭೆ ವಿಫಲವಾಯಿತು.
ವೇದಿಕೆಯಲ್ಲಿ ತಹಶೀಲ್ದಾರ್ ಕೃಷ್ಣಮೂರ್ತಿ, ಎಸಿಎಫ್ ಗೋಪಾಲ್, ಆರ್‌ಎಫ್‌ಒ ಶೈಲೇಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್, ಬೆಳೆಗಾರರ ಸಂಘ, ರೈತ ಸಂಘದ ಪದಾಧಿಕಾರಿಗಳಾದ ಅನಂತರಾಮ್, ಬಗ್ಗನ ಅನಿಲ್, ಬಿ.ಎಂ. ಸುರೇಶ್, ಮೊಗಪ್ಪ, ಹೂವಯ್ಯ, ಚೌಡ್ಲು ದಿನೇಶ್, ಪ್ರಸ್ಸಿ, ಪ್ರವೀಣ್, ಹಿರಿಕರ ರಮೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.