ADVERTISEMENT

‘ಇತರರು ತಲೆಹಾಕುವುದು ಸರಿಯಲ್ಲ’: ಅರ್ಚಕ ನಾರಾಯಣ ಆಚಾರ್‌ ಪುತ್ರಿಯರ ವಿವಾಹ ವಿಚಾರ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2020, 18:52 IST
Last Updated 31 ಆಗಸ್ಟ್ 2020, 18:52 IST
ಭಾಗಮಂಡಲದಲ್ಲಿ ಈಚೆಗೆ ನಾರಾಯಣ ಆಚಾರ್‌ ಅವರ ಪುತ್ರಿಯರೊಂದಿಗೆ ಸಚಿ ಸೋಮಣ್ಣ ಚರ್ಚಿಸಿದರು (ಸಂಗ್ರಹ ಚಿತ್ರ)
ಭಾಗಮಂಡಲದಲ್ಲಿ ಈಚೆಗೆ ನಾರಾಯಣ ಆಚಾರ್‌ ಅವರ ಪುತ್ರಿಯರೊಂದಿಗೆ ಸಚಿ ಸೋಮಣ್ಣ ಚರ್ಚಿಸಿದರು (ಸಂಗ್ರಹ ಚಿತ್ರ)   

ಮಡಿಕೇರಿ: ‘ತಲಕಾವೇರಿಯಲ್ಲಿ, ಗುಡ್ಡ ಕುಸಿತದಿಂದ ಮೃತಪಟ್ಟ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಅವರ ಪುತ್ರಿಯರು ಅನ್ಯಧರ್ಮದ ಯುವಕರನ್ನು ಮದುವೆ ಆಗಿದ್ದಾರೆ. ಆದರೆ, ಅವರ ವೈಯಕ್ತಿಕ ವಿಚಾರದಲ್ಲಿ ಬೇರೆಯವರು ತಲೆಹಾಕುವುದು ಸರಿಯಲ್ಲ’ ಎಂದು ಕುಟುಂಬದ ಹಿರಿಯ ಸದಸ್ಯ ಜಯಪ್ರಕಾಶ್‍ ರಾವ್‌ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.

‘ಅನ್ಯಧರ್ಮದ ಯುವಕರನ್ನು ಮದುವೆ ಆಗಿದ್ದರೂ, ಹಿಂದೂ ಧರ್ಮದ ಆಚಾರ– ವಿಚಾರ ಪಾಲಿಸುತ್ತಾ ಬಂದಿದ್ದಾರೆ. ಮದುವೆಯಾದ ಹೆಣ್ಣುಮಕ್ಕಳು, ಮದುವೆಯಾದ ಕುಟುಂಬಕ್ಕೆ ಸೇರುತ್ತಾರೆ. ಆ ಕುಟುಂಬದ ಹೆಸರನ್ನೂ ಹೊಂದುತ್ತಾರೆ. ಪರಿಹಾರದ ವಿಚಾರವಾಗಿಯೂ ಚರ್ಚೆ ನಡೆಯುತ್ತಿದ್ದು, ಕಾನೂನು ಪ್ರಕಾರ ಯಾರಿಗೆ ಸಿಗಬೇಕೋ ಅವರಿಗೆ ಸಿಗಲಿದೆ. ಆನಂದತೀರ್ಥ ಅವರ ಸಹೋದರಿ ಸುಶೀಲಾ ಅವರಿಗೂ ವಯಸ್ಸಾಗಿದೆ. ಆನಂದತೀರ್ಥ ಅವರ ಪರಿಹಾರ ಹಣವು ಸುಶೀಲಾ ಅವರಿಗೆ ಸಿಗಲಿ’ ಎಂದು ಹೇಳಿದರು.

‘ನಾರಾಯಣ ಆಚಾರ್‌ ಅವರ ಬಗ್ಗೆ ಕಟ್ಟುಕತೆ ಕಟ್ಟಿ ತೇಜೋವಧೆಗೆ ಪ್ರಯತ್ನಿಸಲಾಯಿತು. ಅವರ ವಿರುದ್ಧದ ಆರೋಪಗಳಲ್ಲಿ ಹುರುಳಿಲ್ಲ’ ಎಂದ ಜಯಪ್ರಕಾಶ್‍ ರಾವ್‌, ‘ಆಚಾರ್ ಅವರು ಕೇವಲ ಅರ್ಚಕರಾಗಿರದೇ ಪ್ರಗತಿಪರ ಕೃಷಿಕರಾಗಿ, ಜೇನು ಸೊಸೈಟಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು. ಅವರು ಮಣ್ಣಿನಡಿ ಸಿಲುಕಿ ಭೂಸಮಾಧಿ ಆಗಿದ್ದರೆ, ಅವರ ಆಸ್ತಿಯ ಬಗ್ಗೆ ಕಟ್ಟುಕತೆ ಕಟ್ಟಲಾಯಿತು’ ಎಂದು ಪತ್ರಿಕಾಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.