ADVERTISEMENT

ಆಹಾರ ಇಲಾಖೆ ಕಟ್ಟಡದಲ್ಲಿ ತಾಲ್ಲೂಕು ಕಚೇರಿ

ಪೊನ್ನಂಪೇಟೆ ತಾಲ್ಲೂಕು ಚಟುವಟಿಕೆ ಅನುಷ್ಠಾನದ ಸಭೆಯಲ್ಲಿ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 15:40 IST
Last Updated 3 ಜುಲೈ 2019, 15:40 IST
ಪೊನ್ನಂಪೇಟೆಯಲ್ಲಿ ನಡೆದ ಸಭೆಯಲ್ಲಿ ಕೆ.ಜಿ.ಬೋಪಯ್ಯ, ಜವರೇಗೌಡ ಇತರರು ಪಾಲ್ಗೊಂಡಿದ್ದರು
ಪೊನ್ನಂಪೇಟೆಯಲ್ಲಿ ನಡೆದ ಸಭೆಯಲ್ಲಿ ಕೆ.ಜಿ.ಬೋಪಯ್ಯ, ಜವರೇಗೌಡ ಇತರರು ಪಾಲ್ಗೊಂಡಿದ್ದರು   

ಪೊನ್ನಂಪೇಟೆ: ಇಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಪೊನ್ನಂಪೇಟೆ ತಾಲ್ಲೂಕು ಕಚೇರಿ ನಿರ್ವಹಿಸಲಿದೆ.

ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಉಪವಿಭಾಗಾಧಿಕಾರಿ ಜವರೇಗೌಡ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ‘ಪೊನ್ನಂಪೇಟೆ ತಾಲ್ಲೂಕು ಚಟುವಟಿಕೆ ಅನುಷ್ಠಾನ’ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.

ಜವರೇಗೌಡ ಮಾತನಾಡಿ, ‘ಜಿಲ್ಲಾಧಿಕಾರಿ ನಿರ್ದೇಶನದಂತೆ ನೂತನ ತಾಲ್ಲೂಕು ಆಡಳಿತ ಅನುಷ್ಠಾನಕ್ಕೆ ಸಮಿತಿ ರಚಿಸಲಾಗಿದೆ. ಸ್ಥಳೀಯರು ಹಾಗೂ ಜನಪ್ರತಿನಿಧಿಗಳ ಸಮಕ್ಷಮದಲ್ಲಿ ಸಭೆ ಕರೆದು ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿ ಗುರುತಿಸುವುದು, ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಜಾಗ ಗುರುತಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗುತ್ತದೆ. ಮೂಲಸೌಲಭ್ಯ ಅನುಷ್ಠಾನ, ಆರ್ಥಿಕ ಅನುದಾನಕ್ಕೆ ಮನವಿ ಮಾಡಲಾಗುವುದು. ತಹಶೀಲ್ದಾರ್ ನೇಮಕ ಸೇರಿದಂತೆ ಪ್ರತೀ ವಿಭಾಗದಲ್ಲೂ ಮೂಲ ಸೌಕರ್ಯ ಕಲ್ಪಿಸಲು ಯೋಜನೆ ರೂಪಿಸಲಾಗುತ್ತದೆ’ ಎಂದರು.

ADVERTISEMENT

ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಸರ್ಕಾರಿ ಜಾಗವನ್ನು ಗುರುತಿಸಲು ತಹಶೀಲ್ದಾರ್‍ಗೆ ಜವರೇಗೌಡ ಸೂಚಿಸಿದರು. ಸರ್ವೆ ಇಲಾಖೆ ವತಿಯಿಂದ ಪೊನ್ನಂಪೇಟೆ ತಾಲ್ಲೂಕಿಗೆ ಒಳಪಡುವ ಗ್ರಾಮಗಳನ್ನು ಸೇರಿಸಿಕೊಂಡು ನಕ್ಷೆ ತಯಾರಿಸುವಂತೆ ಸೂಚಿಸಿದರು.

ತಾಲ್ಲೂಕಿಗೆ ಬೇಕಾಗುವ ಸಿಬ್ಬಂದಿ, ಅನುದಾನಕ್ಕೆ ಮನವಿ ಮಾಡುವುದು, ಕಚೇರಿ ಇಲ್ಲದ ಇಲಾಖೆಗಳಿಗೆ ತಾತ್ಕಾಲಿಕವಾಗಿ ತಾಲ್ಲೂಕು ಕಚೇರಿಯಲ್ಲಿ ಅವಕಾಶ ನೀಡಲು ನಿರ್ಧರಿಸಲಾಯಿತು.

ಪೊನ್ನಂಪೇಟೆಯಲ್ಲಿಯೇ ಸಾಕಷ್ಟು ಇಲಾಖೆಗಳ ಕಚೇರಿ ಇರುವುದರಿಂದ ಕಚೇರಿ ಇಲ್ಲದ ಇಲಾಖೆಗಳಿಗೆ ಶಾಶ್ವತ ಜಾಗ ಒದಗಿಸಲು ಕ್ರಮಕೈಗೊಳ್ಳುವಂತೆ ತಹಶೀಲ್ದಾರ್, ಸರ್ವೆ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಜವರೇಗೌಡ ಸೂಚಿಸಿದರು.

ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಮಾಚಯ್ಯ, ಸಂಚಾಲಕ ಮಾಚಿಮಾಡ ರವೀಂದ್ರ, ಹಿರಿಯರಾದ ಅಡ್ಡಂಡ ಕಾರ್ಯಪ್ಪ, ಕಳ್ಳೇಂಗಡ ಗಣಪತಿ ಸಲಹೆ ನೀಡಿದರು.

ತಹಶೀಲ್ದಾರ್ ಗೋವಿಂದರಾಜು, ತಾಲ್ಲೂಕು ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ವಿರಾಜಪೇಟೆ ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಉಪಾಧ್ಯಕ್ಷ ನೆಲ್ಲೀರ ಚಲನ್, ಇಒ ಜಯಣ್ಣ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಮಾಂಗೇರ ಪದ್ಮಿನಿ ಪೊನ್ನಪ್ಪ, ಪೊನ್ನಂಪೇಟೆ ಗ್ರಾ.ಪಂ ಅಧ್ಯಕ್ಷೆ ಮೂಕಳೇರ ಸುಮಿತ್ರಾ, ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಪಿ.ಬಿ.ಪೂಣಚ್ಚ, ಎಸಿಎಫ್ ಶ್ರೀಪತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.